ADVERTISEMENT

ಬಿಸಿಯೂಟ ತಯಾರಕರಿಗೆ ಅಗ್ನಿ ನಿರೋಧಕ ಏಪ್ರಾನ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 9:04 IST
Last Updated 1 ಫೆಬ್ರುವರಿ 2018, 9:04 IST

ನ್ಯಾಮತಿ: ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಡಿ ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಅಗ್ನಿ ನಿರೋಧಕ ಏಪ್ರಾನ್‌ ಧರಿಸುವುದು ಕಡ್ಡಾಯಗೊಳಿಸಲಾಗಿದೆ.

ಈಚೆಗೆ ಜಂಟಿ ನಿರ್ದೇಶಕರು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿ, ಬಿಸಿಯೂಟ ತಯಾರಕರು ಅಡುಗೆ ತಯಾರಿಸುವ ವೇಳೆ ಸುರಕ್ಷತೆ ಮತ್ತು ಶುಚಿತ್ವ ದೃಷ್ಟಿಯಿಂದ ಅಗ್ನಿ ನಿರೋಧಕ ಏಪ್ರಾನ್‌ ಧರಿಸುವಂತೆ ಹಾಗೂ ಏಪ್ರಾನನ್ನು ಸಂಚಿತ ನಿಧಿ ಅಥವಾ ಬಿಸಿಯೂಟ ಅನುದಾನದಲ್ಲಿ ನಿಯಮ ಅನುಸರಿಸಿ ಖರೀದಿ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ಒಂದು ಏಪ್ರಾನ್‌ಗೆ ₹ 1,100 ಮತ್ತು ತಲೆ ಟೋಪಿಗೆ ₹ 100ರಂತೆ ಆಯಾ ಶಾಲೆಯಲ್ಲಿರುವ ಬಿಸಿಯೂಟ ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ಚಿತ್ರದುರ್ಗದ ಅಂಗಡಿಯೊಂದರಲ್ಲಿ ಖರೀದಿಸಲಾಗಿದೆ ಎಂದು ಕೆಲವು ಶಾಲೆಗಳ ಮುಖ್ಯೋಪಾಧ್ಯಾಯರು ತಿಳಿಸಿದರು.

ಏಪ್ರಾನ್‌ ಧರಿಸಿದ ನಂತರ ಮೈ ಕಡಿತ, ಒರಟು ಬಟ್ಟೆಯನ್ನು ಧರಿಸಿದಂತೆ ಆಗುತ್ತದೆ, ಎಷ್ಟರಮಟ್ಟಿಗೆ ರಕ್ಷಣೆ ಕೊಡುತ್ತದೆ ಎಂಬುದು ನಮಗೆ ಗೊತ್ತಿಲ್ಲ, ಈ ಏಪ್ರಾನ್‌ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಅಡುಗೆ ಸಿಬ್ಬಂದಿ ಹೇಳಿದರು.

ADVERTISEMENT

ಏಪ್ರಾನ್‌ ಮತ್ತು ಟೋಪಿಗೆ ಒಟ್ಟು ₹ 1,200 ಹಣ ನೀಡಿರುವುದು ಹೆಚ್ಚು ಅನಿಸುತ್ತದೆ. ದಾವಣಗೆರೆ ಜಿಲ್ಲೆ ಬಿಟ್ಟು ಚಿತ್ರದುರ್ಗ ಜಿಲ್ಲೆಯಲ್ಲಿ ಖರೀದಿ ಏಕೆ ಮಾಡಿದರು ಎಂಬುದು ಗೊತ್ತಿಲ್ಲ, ಆದರೆ ಅಧಿಕಾರಿಗಳ ಆದೇಶದಂತೆ ನಡೆದುಕೊಳ್ಳಬೇಕಾಗುತ್ತದೆ ಎಂಬುದು ಶಿಕ್ಷಕರ ಅಂಬೋಣ.

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಕೆಲವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಇನ್ನೂ ಬಿಸಿಯೂಟ ತಯಾರಕರಿಗೆ ಏಪ್ರಾನ್‌ ಒದಗಿಸಿಲ್ಲ, ಈಗ ನೀಡಿರುವ ಏಪ್ರಾನ್‌ ಸಾಧಾರಣ ಗುಣಮಟ್ಟದಿಂದ ಕೂಡಿದೆ ಎಂದು ಸಿಐಟಿಯು ರಾಜ್ಯ ಸಂಚಾಲಕ ಚೀಲೂರು ಪುರುವಂತರ ಪರಮೇಶ್ವರಪ್ಪ ಮತ್ತು ಹೊನ್ನಾಳಿ ತಾಲ್ಲೂಕು ಬಿಸಿಯೂಟ ತಯಾರಕರ ಸಂಘದ ಅಧ್ಯಕ್ಷೆ ಬಿದರಗಡ್ಡೆ ಎಂ.ಆರ್‌.ಹಾಲಮ್ಮ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.