ದಾವಣಗೆರೆ: ನಗರದಲ್ಲಿ ಮೇ 8ರಂದು ರಾಜ್ಯಮಟ್ಟದ 10ನೇ ಆಸ್ತಮಾ ಸಮ್ಮೇಳನ ಹಾಗೂ ಬೃಹತ್ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ಅಂದು ಬೆಳಿಗ್ಗೆ 10ಕ್ಕೆ ಎಂಸಿಸಿ ‘ಬಿ’ ಬ್ಲಾಕ್‌ನ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ದಾವಣಗೆರೆ ವೃತ್ತದ ಸಹಾಯಕ ಔಷಧ ನಿಯಂತ್ರಕ ಎಚ್. ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಡಿ. ಬಾಲಚಂದ್ರರೆಡ್ಡಿ ಹಾಗೂ ಔಷಧಿ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ಕೆ.ಎಚ್. ಆನಂದರಾಜು ಪಾಲ್ಗೊಳ್ಳಲಿದ್ದಾರೆ. ಕುಮುದಾ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಕೆ. ಶೈಮೋನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಡಾ.ಎನ್.ಎಚ್. ಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ನವಜಾತ ಶಿಶು ವಿಭಾಗದ ನಿರ್ದೇಶಕ ಡಾ.ಡಿ.ಎಸ್. ಪ್ರಸಾದ್ ಅವರು ‘ಮಕ್ಕಳಲ್ಲಿ ಆಸ್ತಮಾ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಂದು ಚಿಕಿತ್ಸೆಗೆ ಆಗಮಿಸುವ ರೋಗಿಗಳಿಗೆ ಉಚಿತ ಊಟ ಹಾಗೂ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಹೆಚ್ಚು ದೇಹದ ತೂಕ ಹೊಂದಿರುವವರು ಆಸ್ತಮಾ ಪಡೆಯುವ ಸಾಧ್ಯತೆ ಹೆಚ್ಚು. ಅಸ್ತಮಾ ಇರುವಿಕೆಯ ಪ್ರಮಾಣ ರಾಷ್ಟ್ರದಲ್ಲಿ ಶೇ. 10ರಿಂದ 12ರಷ್ಟು ಇದೆ. ಅದಕ್ಕೆ ಉತ್ತಮ ಚಿಕಿತ್ಸಾ ವಿಧಾನವೆಂದರೆ ಶ್ವಾಸ ಸೇವನಾ ಚಿಕಿತ್ಸಾ ವಿಧಾನ ಮಾತ್ರ. ಅಲರ್ಜಿ ಹಾಗೂ ನೆಗಡಿಗೆ ಚಿಕಿತ್ಸೆ ನೀಡುವುದರಿಂದ ಆಸ್ತಮಾ ತಡೆಯಬಹುದು ಎಂದು ಮಾಹಿತಿ ನೀಡಿದರು.
ಸಮ್ಮೇಳನದ ದಿನದಂದು ದಾವಣಗೆರೆ ಪಾಲಿಕೆ ಮೇಯರ್ ವಿಠಲ್ ಹಾಗೂ ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಗುವುದು. ಅಂದು ಹೊರಪ್ರದೇಶದಿಂದ ಚಿಕಿತ್ಸೆಗೆ ಬರುವ ರೋಗಿಗಳು ರೈಲುನಿಲ್ದಾಣ ಹಾಗೂ ಬಸ್‌ನಿಲ್ದಾಣಕ್ಕೆ ಆಗಮಿಸಿ ಮೊ: 91640 54547 ಸಂಪರ್ಕಿಸಿದರೆ ಆಟೋ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಾರಾಯಣರಾವ್, ರಮೇಶ್, ಪ್ರಿಯಾ, ಗಣೇಶ್, ಚಂದ್ರಕಾಂತ್ ಹಾಗೂ ವಾಗೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.