ADVERTISEMENT

ಪಾರ್ಕಿಂಗ್‌ ಜಾಗದಲ್ಲಿ ಏನೇ ಇದ್ದರೂ ತೆರವು

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 12:59 IST
Last Updated 5 ನವೆಂಬರ್ 2020, 12:59 IST
ರಾತ್ರಿ ಹೊತ್ತು ಸಂಚರಿಸುವಾಗ ವಾಹನಗಳಿರುವುದು ಗೊತ್ತಾಗಲೂ ಯಾವುದೇ ರಿಫ್ಲೆಕ್ಟರ್‌ಗಳನ್ನು ಅಳವಡಿಸಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ, ಆರ್‌ಟಿಒ ಶ್ರೀಧರ ಮಲ್ನಾಡ ರಿಫ್ಲೆಕ್ಟರ್‌ ಪ್ರದರ್ಶಿಸಿದರು
ರಾತ್ರಿ ಹೊತ್ತು ಸಂಚರಿಸುವಾಗ ವಾಹನಗಳಿರುವುದು ಗೊತ್ತಾಗಲೂ ಯಾವುದೇ ರಿಫ್ಲೆಕ್ಟರ್‌ಗಳನ್ನು ಅಳವಡಿಸಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ, ಆರ್‌ಟಿಒ ಶ್ರೀಧರ ಮಲ್ನಾಡ ರಿಫ್ಲೆಕ್ಟರ್‌ ಪ್ರದರ್ಶಿಸಿದರು   

ದಾವಣಗೆರೆ: ದೊಡ್ಡ ವಾಣಿಜ್ಯ ಸಂಕೀರ್ಣಗಳು ಅನುಮತಿ ಪಡೆಯುವಾಗ ಪಾರ್ಕಿಂಗ್‌ಗೆ ಜಾಗ ತೋರಿಸಿರುತ್ತಾರೆ. ಅಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಇರಬೇಕು. ಆ ಸ್ಥಳವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದರೆ ಯಾವುದೇ ನೋಟಿಸ್‌ ನೀಡದೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಾರ್ಕಿಂಗ್‌ ಸ್ಥಳಗಳನ್ನು ವಾಹನ ನಿಲ್ಲಸಲು ಬಳಸುತ್ತಾರಾ ಇಲ್ವ ಎಂಬುದನ್ನು ನೋಡಲು ಒಂದು ಅಭಿಯಾನ ನಡೆಸಲಾಗುವುದು. ಆರ್‌ಟಿಒ, ಪೊಲೀಸ್ ಇಲಾಖೆ, ಪಾಲಿಕೆ ಅಧಿಕಾರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾರ್ಕಿಂಗ್‌ ಜಾಗದಲ್ಲಿ ಬೇರೇನೇ ಇದ್ದರೂ ಪೊಲೀಸ್‌ ರಕ್ಷಣೆಯಲ್ಲಿ ಕೂಡಲೇ ತೆರವು ಮಾಡಲಾಗುವುದು. ಇಂದಿನಿಂದ ಒಂದು ವಾರದ ಅವಕಾಶ ಇದೆ. ವಾಣಿಜ್ಯ ಸಂಕೀರ್ಣದ ಮಾಲೀಕರು ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ವ್ಯಾಪಾರ ವಹಿವಾಟು ನಡೆಸಲು ಬರುವ ಗ್ರಾಹಕರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ತೊಡಗಕಾಗುತ್ತಿದೆ. ಪಿ.ಜೆ. ಬಡಾವಣೆ ಸಹಿತ ವಿವಿಧ ಕಡೆಗಳಲ್ಲಿ ಆಸ್ಪತ್ರೆ, ಕ್ಲಿನಿಕ್‌ನವರೇ ಕಾರುಗಳನ್ನು ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾರೆ. ಇವೆಲ್ಲವನ್ನು ಸರಿಪಡಿಸಬೇಕು ಎಂದರು.

ನಗರದ ವಿವಿಧೆಡೆ ರಸ್ತೆಗಳಲ್ಲಿ ಸರಕು ಸಾಗಾಣಿಕೆ ಹಾಗೂ ಆಟೊ ತಂಗುದಾಣಗಳನ್ನು ಗುರುತಿಸಿ, ಅಲ್ಲಿ ಫಲಕ ಅಳವಡಿಸುವುದು ಅಗತ್ಯ. ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ, ತಂಗುದಾಣ ಅಗತ್ಯ ಇರುವಲ್ಲಿ ಸ್ಥಳಗಳನ್ನು ಗುರುತಿಸಿ ವರದಿ ನೀಡಿದಲ್ಲಿ, ತಂಗುದಾಣಗಳ ಸ್ಥಳವನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದರು.

ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಟರ್ಮಿನಲ್‌ ಎಂಡಿ ಬಂದು ಪರಿಶೀಲನೆ ನಡೆಸಿ ಈ ಜಾಗ ಸೂಕ್ತವಾಗಿದೆ ಅಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ಜಿಲ್ಲೆಯಲ್ಲಿ ಅಧಿಕ ಅಪಘಾತಗಳು ನಡೆಯುವ 34 ಸ್ಥಳಗಳನ್ನು ಬ್ಲ್ಯಾಕ್‌ ಸ್ಪಾಟ್‌ ಎಂದು ಗುರುತಿಸಲಾಗಿದೆ. ಅಪಘಾತ ತಪ್ಪಿಸಲು ಪರಿಶೀಲನೆಗಳು ನಡೆದಿವೆ. ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ವಿದ್ಯಾಭವನದಿಂದ ವಿದ್ಯಾನಗರದ ವರೆಗೆ ಬೀದಿ ದೀಪಗಳು ಇಲ್ಲದೇ ಇರುವ ಬಗ್ಗೆ, ತಡಪಾಲು ಹಾಕದೆ ಎಂಸ್ಯಾಂಡ್‌ ಸಾಗಾಟದಿಂದ ಆಗುತ್ತಿರುವ ತೊಂದರೆಗಳ ಬಗ್ಗ, ರಸ್ತೆ, ಫುಟ್‌ಪಾತ್ ಕಾಮಗಾರಿ ಶೀಘ್ರ ಆಗಬೇಕಾಗಿರುವ ಬಗ್ಗೆ ಚರ್ಚೆಗಳಾದವು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ನಾಡ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿ ರವೀಂದ್ರ ಮಲ್ಲಾಪುರ್‌, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ, ವಿವಿಧ ಸಂಘಟನೆಗಳ ಸಾಗರ್‌, ಶ್ರೀಕಾಂತ್‌ ಎಂ.ಜಿ, ಅಣ್ಣಪ್ಪಸ್ವಾಮಿ, ಪಳನಿಸ್ವಾಮಿ ಅವರೂ ಇದ್ದರು.

‘ರಿಫ್ಲೆಕ್ಟರ್‌ ಅಳವಡಿಸಿ’

ಕಬ್ಬು ಸಹಿತ ಕೃಷಿ ಸಾಮಗ್ರಿಗಳನ್ನು ಸಾಗಿಸುವ ಟ್ರ್ಯಾಕ್ಟರ್‌ಗಳು, ಎತ್ತಿನ ಗಾಡಿಗಳು ಸಂಚರಿಸುತ್ತವೆ. ರಾತ್ರಿ ಹೊತ್ತಿಗೆ ರಿಫ್ಲೆಕ್ಟರ್‌ ಇಲ್ಲದೇ ಅಪಘಾತಗಳಾಗುತ್ತಿವೆ. ಹಾಗಾಗಿ ಯಾವುದೇ ರೀತಿಯದ್ದಾದರೂ ನಡೆಯುತ್ತದೆ. ರಿಫ್ಲೆಕ್ಟರ್‌ಗಳನ್ನು ಅಳವಡಿಸಲೇಬೇಕು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಗುಂಡಿಸರ್ಕಲ್‌–ಅನುಭವಮಂಟಪ ರಸ್ತೆಯನ್ನು ಪಾರ್ಕಿಂಗ್‌ ಸಂಚಾರ ಮಾದರಿ ರಸ್ತೆಯನ್ನಾಗಿ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.