ADVERTISEMENT

ಹಿಮೊಫಿಲಿಯಾ ಸೊಸೈಟಿ ವಿಸ್ತರಣೆಗೆ ನೆರವು

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 4:46 IST
Last Updated 13 ಅಕ್ಟೋಬರ್ 2020, 4:46 IST
ದಾವಣಗೆರೆಯ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಗೆ ಸೋಮವಾರ ಭೇಟಿ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ಅವರು ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಅಧ್ಯಕ್ಷ ಸುರೇಶ ಹನಗವಾಡಿ ಇದ್ದಾರೆ
ದಾವಣಗೆರೆಯ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಗೆ ಸೋಮವಾರ ಭೇಟಿ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ಅವರು ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಅಧ್ಯಕ್ಷ ಸುರೇಶ ಹನಗವಾಡಿ ಇದ್ದಾರೆ   

ದಾವಣಗೆರೆ: ಇಲ್ಲಿನ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ವಿಸ್ತರಣೆಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಗೆ ಸೋಮವಾರ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ಕುಸುಮ ರೋಗಿಗಳ ಚಿಕಿತ್ಸೆ ನೀಡುವಲ್ಲಿ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣಂ ಅವರು ಈ ಸಂಸ್ಥೆಗೆ ಮಹಾಪೋಷಕರಾಗಿದ್ದರು ಎಂಬುದು ತಿಳಿದಿರಲಿಲ್ಲ. ನಿಮಗೆ ಅವರನ್ನು ಕಳೆದುಕೊಂಡ ನೋವಿದೆ. ಅವರಂತೆ ನಾನು ಕೆಲಸ ಮಾಡಿಕೊಡುತ್ತೇನೆ ’
ಎಂದು ವಿಶ್ವಾಸ ತುಂಬಿದರು.

ADVERTISEMENT

ನೋಡಲ್ ಕೇಂದ್ರ ಸ್ಥಾಪನೆಗೆ ಮನವಿ: ಮಧ್ಯ ಹಾಗೂ ಉತ್ತರ ಕರ್ನಾಟಕದ ರೋಗಿಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಇರುವಂತೆ ದಾವಣಗೆರೆಯಲ್ಲಿ ನೋಡಲ್ ಕೇಂದ್ರ ಸ್ಥಾಪನೆ ಮಾಡುವಂತೆಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ ಒತ್ತಾಯಿಸಿದರು.

‘ಸರ್ಕಾರ ಈ ಹಿಂದಿನ ಬಜೆಟ್‌ನಲ್ಲಿ ₹2 ಕೋಟಿ ಅನುದಾನ ಘೋಷಿಸಿತ್ತು. ಇದರಲ್ಲಿ ₹50 ಲಕ್ಷ ಮಾತ್ರ ಮಂಜೂರಾಗಿದೆ. ಉಳಿದ ₹1.5 ಕೋಟಿ ಹಣ ನೀಡಿದರೆ ವಾರ್ಡ್‌ಗಳು, ರಕ್ತಭಂಡಾರ, ಲ್ಯಾಬ್ ಮತ್ತಿತರ ಬಾಕಿ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಹಿಮೊಫೀಲಿಯಾ ರೋಗದ ಬಗ್ಗೆ ಎಲ್ಲ ಪಂಚಾಯಿತಿ ಹಂತದಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಮಹಿಳಾ, ಮಕ್ಕಳ, ಅಂಗವಿಕಲ ಇಲಾಖೆಗಳು ಕೆಎಚ್‌ಎಸ್‌ನೊಂದಿಗೆ ಸಂಪರ್ಕ ಸಾಧಿಸಲು ಅವುಗಳನ್ನು ಸಂಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಮಾಜಿ ಶಾಸಕ ಬಸವರಾಜ್ ನಾಯ್ಕ, ಸಂಸ್ಥೆಯ ಉಪಾಧ್ಯಕ್ಷ ಡಾ.ಬಿ.ಟಿ. ಅಚ್ಯುತ್, ಮಹಿಳಾ ವಿಭಾಗದ ಮೀರಾ ಹನಗವಾಡಿ, ಗಿರೀಶ್ ಕಾರಂತ್, ಡಾ. ದೊಡ್ಡಿಕೊಪ್ಪದ್, ನಿರ್ದೇಶಕ ಈಶ್ವರ್, ಇಒ ನವಿನ್ ಹವೇಲಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.