ADVERTISEMENT

ಸೇತುವೆ ಶಿಥಿಲ: ಉದುರುತ್ತಿವೆ ಪದರ

ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 5:37 IST
Last Updated 23 ಸೆಪ್ಟೆಂಬರ್ 2022, 5:37 IST
ಹರಿಹರದ ಶತಮಾನ ಕಂಡ ತುಂಗಭದ್ರಾ ಹಳೆಯ ಸೇತುವೆಯ ಮೇಲೆ ಗಿಡ–ಗಂಟಿಗಳು ಬೆಳೆದು ಸೇತುವೆ ಮೇಲ್ಪದರ ಉದುರಿರುವುದು.
ಹರಿಹರದ ಶತಮಾನ ಕಂಡ ತುಂಗಭದ್ರಾ ಹಳೆಯ ಸೇತುವೆಯ ಮೇಲೆ ಗಿಡ–ಗಂಟಿಗಳು ಬೆಳೆದು ಸೇತುವೆ ಮೇಲ್ಪದರ ಉದುರಿರುವುದು.   

ಹರಿಹರ: ನಗರದಲ್ಲಿರುವ ತುಂಗಭದ್ರಾ ಹಳೆಯ ಸೇತುವೆ ನಿರ್ವಹಣೆ ಇಲ್ಲದೇ ಅವಧಿಗೆ ಮುನ್ನವೇ ಶಿಥಿಲಗೊಳ್ಳುವ ಆತಂಕ ಎದುರಾಗಿದೆ.

ಈ ಸೇತುವೆಯನ್ನು 1886ರಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಲಾಯಿತು. ಬರೋಬ್ಬರಿ ಒಂದು ಶತಮಾನದ ಕಾಲ ಈ ಸೇತುವೆ ಆಗಿನ ಬಾಂಬೆ-ಮೈಸೂರು ರಾಜ್ಯ, ನಂತರ ಉತ್ತರ-ದಕ್ಷಿಣ ಕರ್ನಾಟಕದ ಸಂಚಾರದ ಕೊಂಡಿಯಾಗಿತ್ತು.

ಸಂಚಾರಕ್ಕೆ ಯೋಗ್ಯವಿಲ್ಲ ಎಂದು ಕಳೆದ 30 ವರ್ಷಗಳ ಹಿಂದೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಯಿತು. ಹೊಸ ಸೇತುವೆ ನಿರ್ಮಿಸಿದ ನಂತರ ಎರಡು ವರ್ಷಗಳಿಂದ ಪಕ್ಕದಲ್ಲೇ ನಿರ್ಮಿಸಿದ ಹೊಸ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಡೆಯುತ್ತಿದೆ.

ADVERTISEMENT

ಈಗಲೂ ಉಪಯೋಗಕಾರಿ: ಈ ಸೇತುವೆಯ ಮೇಲೆ ನಗರಕ್ಕೆ ನೀರು ಸರಬರಾಜು ಮಾಡುವ ಎರಡು ಬೃಹತ್ ಪೈಪ್‌ಲೈನ್‌ಗಳಿವೆ. ಒಂದು ಪೈಪ್‌ಲೈನ್ 30 ವರ್ಷಗಳ ಹಿಂದೆ ಅಳವಡಿಸಿದ್ದರೆ, ಇನ್ನೊಂದು ಜಲಸಿರಿ ಪೈಪ್‌ಅನ್ನು ಎರಡು ವರ್ಷಗಳ ಹಿಂದೆ ಅಳವಡಿಸಲಾಗಿದೆ. ಪಕ್ಕದ ಹೊಸ ಸೇತುವೆಯ ಮೇಲೆ ಭಾರ ವಾಹನ ಸಂಚಾರ ಒತ್ತಡ ಇರುವುದರಿಂದ ಈಗಲೂ ಹಳೆ ಸೇತುವೆಯ ಮೇಲೆ ಲಘುವಾಹನ ಸಂಚಾರ ಇದೆ. ನಗರದ ನೂರಾರು ಜನ ನಿತ್ಯ ಬೆಳಗಿನ ಜಾಗ ಹಾಗೂ ಸಂಜೆ ವಾಯು ವಿಹಾರ
ಮಾಡುತ್ತಾರೆ.

ಅನುದಾನ ಬಂದಾಗ ಈ ಹಿಂದೆ ಒಂದೆರಡು ಬಾರಿ ಸೇತುವೆ ಮೇಲಿನಿಂದಲೇ ಕೈಗೆ ಸಿಗುವಷ್ಟು ಗಿಡ, ಗಂಟಿಗಳನ್ನು ಕತ್ತರಿಸಲಾಗಿದೆ. ಆದರೆ ಪಾದರಸ ಹಾಕಿ ಬುಡಸಮೇತ ತೆಗೆಯುವ ಗೋಜಿಗೆ ಹೋಗಿಲ್ಲ. ಈ ಹಿಂದೆ ಸೇತುವೆಯ ಎರಡೂ ಬದಿ ಕಟ್ಟಿಗೆಯಿಂದ ಜೋಕಾಲಿ ಅಳವಡಿಸಿ ಬುಡ ಸಮೇತ ಗಿಡ–ಗಂಟಿ ತೆರವು ಕಾರ್ಯ ನಡೆಯುತ್ತಿತ್ತು.

ಕೆಲವು ವರ್ಷಗಳಿಂದ ಗಿಡ–ಗಂಟಿಗಳು ಆಳೆತ್ತರಕ್ಕೆ ಬೆಳೆದಿವೆ. ಒಂದು ಅಡಿ ಸುತ್ತಳತೆಯ ಕಾಂಡದ ಮರಗಳಿವೆ. ಇವು ಕ್ರಮೇಣ ಸೇತುವೆಯ ಮೇಲ್ಪದರ ಉದುರಿಸುತ್ತಿವೆ. ಸೇತುವೆಯ ಒಳ ಮೈಯ ಇಟ್ಟಿಗೆ, ಕಲ್ಲುಗಳು ಕಾಣುತ್ತಿವೆ. ಪರಿಸ್ಥಿತಿ ಹೀಗೆ ಇದ್ದು, ದುರದೃಷ್ಟವಶಾತ್ ಸೇತುವೆ ಕುಸಿದರೆ ಅಥವಾ ಭಾಗಶಃ ಕುಸಿದರೆ ಒಂದು ನಗರದ ಜನತೆಯಯೊಂದಿಗೆ ಭಾವನಾತ್ಮಕ ಸಂಬಂಧ ಇರುವ ಶತಮಾನ ಕಂಡ ಸ್ಮಾರಕ ಇಲ್ಲವಾಗುತ್ತದೆ. ಜೊತೆಗೆ ನಗರದ ಒಂದು ಲಕ್ಷ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ
ಉಂಟಾಗುತ್ತದೆ.

..........

ಸುಳ್ಳು ದಾಖಲೆ ನೀಡಿಕೆ: ಆರೋಪ

ಜಲಸಿರಿ ನೀರಿನ ಪೈಪ್‌ಲೈನ್ ಅಳವಡಿಸಲು 1886ರ ಬದಲು 1964ರಲ್ಲಿ ಈ ಸೇತುವೆ ನಿರ್ಮಿಸಿದ್ದು ಎಂದು ಸುಳ್ಳು ಮಾಹಿತಿ ನೀಡಿ ದಾವಣಗೆರೆಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ತಜ್ಞರು ನೀಡಿದ ಅಭಿಪ್ರಾಯ ಮುಂದಿಡಲಾಯಿತು. ಕೋಟಿಗಳ ಪ್ರಾಜೆಕ್ಟ್ ಇದ್ದರೆ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಕಾಮಗಾರಿ ಮಾಡಲು ಆಸಕ್ತಿ ಮೂಡುತ್ತದೆ. ಐದಾರು ಲಕ್ಷ ರೂಪಾಯಿಗಳ ಅನುದಾನದ ಸೇತುವೆ ನಿರ್ವಹಣೆ ಪಾಜೆಕ್ಟ್‌ನಲ್ಲಿ ಆಸಕ್ತಿ ಇಲ್ಲದ್ದರಿಂದ ಸೇತುವೆ ಅವಸಾನದ ಅಂಚಿಗೆ ಬಂದಿದೆ ಎಂದು ಸಮಾನ ಮನಸ್ಕರ ವೇದಿಕೆಯ ಮುಖಂಡ ಜೆ. ಕಲೀಂಬಾಷಾ ಆರೋಪಿಸುತ್ತಾರೆ.

............

ಸೇತುವೆ ನಿರ್ವಹಣೆಗೆ ಲಕ್ಷಗಳ ಅನುದಾನಕ್ಕೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದರೆ ಕಾಮಗಾರಿ ಆರಂಭಿಸುತ್ತೇವೆ.

- ಶಿವಮೂರ್ತಪ್ಪ, ಎಇಇ

.........

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.