ADVERTISEMENT

ದಾವಣಗೆರೆ: ಸಿಮೆಂಟ್ ವ್ಯಾಪಾರಿ ಹಲ್ಲೆ ಪ್ರಕರಣ, ಸಿಬಿಐ ತನಿಖೆಗೆ ವಹಿಸಲು ಆಗ್ರಹ

ಸಾರ್ವಜನಿಕ ಆಸ್ತಿ ಒತ್ತುವರಿ ವಿರೋಧಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಮಾದೇವ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 13:45 IST
Last Updated 27 ನವೆಂಬರ್ 2020, 13:45 IST
ಯಶವಂತರಾವ್‌ ಜಾಧವ್‌
ಯಶವಂತರಾವ್‌ ಜಾಧವ್‌   

ದಾವಣಗೆರೆ: ಸಿಮೆಂಟ್ ವ್ಯಾಪಾರಿ ಮಾದೇವ್ ಅವರ ಹಲ್ಲೆ ಪ್ರಕರಣ ಸಂಬಂಧ ಹಲವು ಅನುಮಾನಗಳು ಇದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದರು.

‘2019ರ ಡಿಸೆಂಬರ್ ತಿಂಗಳಲ್ಲಿ ಮಾದೇವ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ 2020ರ ಸೆಪ್ಟೆಂಬರ್ ತಿಂಗಳಲ್ಲಿ ಮೃತಪಟ್ಟರು. ವಿದ್ಯಾನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾದರೂ ಈವರೆಗೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಡೆಯದ ಕಾರಣ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಪ್ರಕರಣದಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ರಾಜಕೀಯ ಪ್ರಭಾವ ಬಳಸಿ ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ. ಅವರ ಮೇಲೆ ಪೊಲೀಸ್, ಮಹಾನಗರಪಾಲಿಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಎಸ್‌.ಎಸ್. ಮಾಲ್ ಕಟ್ಟುವಾಗ ಸಾರ್ವಜನಿಕ ಆಸ್ತಿ ಒತ್ತುವರಿ ಮಾಡಿದ್ದು, ಸೆಟ್ ಬ್ಯಾಕ್ ಬಿಟ್ಟಿಲ್ಲ. ಮಹಾನಗರಪಾಲಿಕೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಮಾದೇವ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆದು 8 ವಾರದೊಳಗೆ ತೆರವುಗೊಳಿಸಬೇಕು ಎಂದು ಹೈಕೋರ್ಟ್‌ ಪಾಲಿಕೆಗೆ ಆದೇಶ ನೀಡಿತ್ತು. ಮದುವೆಗಳು ಬುಕ್ ಆಗಿದ್ದರಿಂದ ಎಸ್‌.ಎಸ್‌. ಗಣೇಶ್ ಅವರು ಕಾಲಾವಕಾಶ ಕೇಳಿದ್ದಾರೆ. ಜಾಗ ಒತ್ತುವರಿ ಮಾಡದಿದ್ದರೆ ಕಾಲಾವಕಾಶ ಏಕೆ ಕೇಳಬೇಕಿತ್ತು’ ಎಂದು ಪ್ರಶ್ನಿಸಿದರು.

‘ಎಸ್‌.ಎಸ್‌. ಗಣೇಶ್ ಅವರು 9 ನಿವೇಶನಗಳನ್ನು ಖರೀದಿಸಿ ಅವುಗಳನ್ನು ಕಾನೂನು ಪ್ರಕಾರ ಏಕ ನಿವೇಶನ ಮಾಡಿಸಿಕೊಂಡಿದ್ದರು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ತಿಳಿಸಿದ್ದಾರೆ. ಈ ಕಾನೂನು ಕೇವಲ ಶಾಮನೂರು ಕುಟುಂಬಕ್ಕೆ ಅಷ್ಟೇನಾ ಅಥವಾ ಬೇರೆಯವರಿಗೆ ಅನ್ವಯಿಸುತ್ತದೆಯಾ? ಈ ಕಾನೂನು ಇದ್ದರೆ ಪಾರ್ಕ್ ಹಾಗೂ ರಸ್ತೆಗಳ ಅಕ್ಕಪಕ್ಕದ ಸೈಟ್ ಅನ್ನು ನಾನು ಖರೀದಿ ಮಾಡುತ್ತೇನೆ ಬರೆದುಕೊಡುತ್ತಾರಾ’ ಎಂದು ಡಿ. ಬಸವರಾಜ್ ಅವರಿಗೆ ಪ್ರಶ್ನಿಸಿದರು.

‘ಸಾರ್ವಜನಿಕ ಆಸ್ತಿಯನ್ನು ಸಿಂಗಲ್ ಲೇಔಟ್ ಮಾಡಲು ಒಪ್ಪಿಗೆ ನೀಡಿರುವ ಮಹಾನಗರಪಾಲಿಕೆ ಮೇಯರ್ ಹಾಗೂ ಆಯುಕ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆ ಕಟ್ವಡವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಹಾನಗರಪಾಲಿಕೆ ಹಾಗೂ ಧೂಡಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇನೆ. ಮಾದೇವ್‌ ಅವರ ಹಲ್ಲೆ ಪ್ರಕರಣಕ್ಕೆ ಸೂಕ್ತ ನ್ಯಾಯ ಸಿಗಬೇಕು. ನನ್ನ ಪ್ರಾಣ ಹೋದರೂ ಇದರ ವಿರುದ್ಧದ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಎಚ್ಚರಿಸಿದರು.

ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ‘ನಗರದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಯಾರ‍್ಯಾರು ರಸ್ತೆ, ಪಾರ್ಕ್ ಜಾಗ ಒತ್ತುವರಿ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಸಿದರು.

ಪಾಲಿಕೆ ಸದಸ್ಯರಾದ ಎಸ್‌.ಟಿ. ವೀರೇಶ್‌, ಎಲ್‌.ಡಿ. ಗೋಣೆಪ್ಪ, ಸೋಗಿ ಶಾಂತಕುಮಾರ್, ಮುಖಂಡರಾದ ಆನಂದರಾವ್ ಶಿಂಧೆ, ನರೇಂದ್ರಕುಮಾರ್, ಗೋಪಾಲರಾವ್ ಮಾನೆ, ಟಿಂಕರ್ ಮಂಜಣ್ಣ, ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.