ADVERTISEMENT

ನಕಲಿ ಬಂಗಾರ ಕೊಟ್ಟು ₹ 8 ಲಕ್ಷ ಪಡೆದು ವಂಚನೆ: ಮಹಿಳೆ ಸೇರಿ ಆರು ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 20:24 IST
Last Updated 25 ಅಕ್ಟೋಬರ್ 2018, 20:24 IST

ದಾವಣಗೆರೆ: ಮಾಗಡಿ ತಾಲ್ಲೂಕಿನ ಹೊಸಪೇಟೆ ಗ್ರಾಮದ ಕ್ರಷರ್‌ ಮಾಲೀಕ ಹರೀಶ್‌ ಅವರಿಗೆ ನಕಲಿ ಬಂಗಾರ ನೀಡಿ ₹ 8 ಲಕ್ಷ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರೂ ಸೇರಿ ಆರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಗೆದ್ಲಹಟ್ಟಿ ಗ್ರಾಮದ ಶ್ರೀನಿವಾಸ್‌ (35), ಉಲ್ಲಾಸ್‌ (42), ರವಿ ಅಲಿಯಾಸ್ ಬಂಗಾರಿ (35), ಮಹೇಶ್‌ (46), ನೇತ್ರಾವತಿ (35), ಅನಸೂಯಾ (35) ಬಂಧಿತರು.

ಗೆದ್ಲಹಟ್ಟಿ ಗ್ರಾಮದ ಶಂಕರಪ್ಪ ಹಾಗೂ ಧರ್ಮಪ್ಪ ಅವರು ಹರೀಶ್‌ ಅವರಿಗೆ ದೂರವಾಣಿ ಕರೆ ಮಾಡಿ, ತಮಗೆ 7 ಕೆ.ಜಿ. ಬಂಗಾರದ ನಿಧಿ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದರು. ಗ್ರಾಮದ ಬಳಿ ಹರೀಶ್‌ ಅವರನ್ನು ಅಕ್ಟೋಬರ್‌ 22ರಂದು ಕರೆಸಿಕೊಂಡು ಎರಡು ಕೆ.ಜಿ. ಬಂಗಾರ ಕೊಟ್ಟು, ₹ 8 ಲಕ್ಷ ಪಡೆದಿದ್ದರು. ಊರಿಗೆ ತೆರಳಿದ ಬಳಿಕ ತಮಗೆ ನೀಡಿದ್ದು ನಕಲಿ ಬಂಗಾರ ಎಂಬುದು ಹರೀಶ್‌ಗೆ ಗೊತ್ತಾಗಿದೆ. ಆರೋಪಿಗಳನ್ನು ದೂರವಾಣಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ, ತಾವು ಅಸಲಿ ಬಂಗಾರವನ್ನೇ ಕೊಟ್ಟಿರುವುದಾಗಿ ವಾದಿಸಿದ್ದಾರೆ. ಇವರು ಜನರಿಗೆ ವಂಚಿಸುತ್ತಿದ್ದಾರೆ ಎಂಬುದನ್ನು ಅರಿತು ಹರೀಶ್‌, ಇನ್ನಷ್ಟು ಬಂಗಾರ ಕೊಡುವಂತೆ ಕೇಳಿಕೊಂಡಿದ್ದಾರೆ. ಇದರ ಜೊತೆಯಲ್ಲೇ ತಮಗೆ ವಂಚಿಸಿರುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಅವರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಸಂತೇಬೆನ್ನೂರು ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿಕೊಂಡು, ಆರೋಪಿಗಳನ್ನು ಹಿಡಿಯಲು ಸಿಇಎನ್‌ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್‌ ದೇವರಾಜ್‌ ಟಿ.ವಿ. ಹಾಗೂ ಸಂತೇಬೆನ್ನೂರು ಠಾಣೆಯ ಪಿಎಸ್‌ಐ ಶಾಂತಲಾ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

3 ಕೆ.ಜಿ. ಬಂಗಾರ ಒಯ್ಯಲು ₹13 ಲಕ್ಷದೊಂದಿಗೆ ಗ್ರಾಮದ ಮಾವಿನತೋಟಕ್ಕೆ ಬರುವಂತೆ ಆರೋಪಿಗಳು ಹರೀಶ್‌ಗೆ ತಿಳಿಸಿದ್ದಾರೆ. ₹ 3 ಲಕ್ಷದೊಂದಿಗೆ ಸ್ಥಳಕ್ಕೆ ಬಂದ ಹರೀಶ್‌ ಮೇಲೆ ಆರೋಪಿಗಳು ತೀವ್ರವಾಗಿ ಹಲ್ಲೆ ನಡೆಸಿ, ಹಣದೊಂದಿಗೆ ಪರಾರಿಯಾಗಿದ್ದಾರೆ. ಸಮೀಪದಲ್ಲೇ ಇದ್ದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿತರ ಆರೋಪಿಗಳಾದ ಹೆಬ್ಬಳಗೆರೆ ಗ್ರಾಮದ ತೀರ್ಥಪ್ಪ, ಗಂಗಪ್ಪ, ಓಂಕಾರಿ, ಗೆದ್ಲಹಟ್ಟಿಯ ಶಂಕರಪ್ಪ, ಲಕ್ಷ್ಮಣ, ಧರ್ಮಪ್ಪ, ಮಹೇಶ್‌, ಸಂದೀಪ್‌, ಅಶೋಕ ಹಾಗೂ ಚಿಕ್ಕಬ್ಬಿಗೆರೆಯ ವೆಂಕಟೇಶ್‌ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.