ADVERTISEMENT

ನಗರದಲ್ಲಿ ಇನ್ನು ‘ಆಟೊಸ್ನೇಹಿ’ ವ್ಯವಸ್ಥೆ

ಚಾಲಕರಿಗೆ ಮಾಹಿತಿ ಫಲಕ ವಿತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:17 IST
Last Updated 18 ಮೇ 2019, 20:17 IST
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಚೇತನ್‌ ಆಟೊ ಚಾಲಕರಿಗೆ ಡಿಸ್‌ಪ್ಲೇ ಕಾರ್ಡ್‌ಗಳನ್ನು ವಿತರಿಸಿದರು. ಡಿಎಸ್‌ಪಿ ಎಸ್‌.ಎಂ. ನಾಗರಾಜ, ನಗರವೃತ್ತ ಸಿಪಿಐ ಎಂ.ಶ್ರೀನಿವಾಸ್ ಇದ್ದರು.
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಚೇತನ್‌ ಆಟೊ ಚಾಲಕರಿಗೆ ಡಿಸ್‌ಪ್ಲೇ ಕಾರ್ಡ್‌ಗಳನ್ನು ವಿತರಿಸಿದರು. ಡಿಎಸ್‌ಪಿ ಎಸ್‌.ಎಂ. ನಾಗರಾಜ, ನಗರವೃತ್ತ ಸಿಪಿಐ ಎಂ.ಶ್ರೀನಿವಾಸ್ ಇದ್ದರು.   

ದಾವಣಗೆರೆ: ಪ್ರಯಾಣಿಕರ ಭದ್ರತೆಯ ದೃಷ್ಟಿಯಿಂದ ಆಟೊ ಚಾಲಕರ ಹಾಗೂ ಮಾಲೀಕರ ವಿವರಗಳನ್ನೊಳಗೊಂಡ ಮಾಹಿತಿ ಫಲಕ(ಡಿಸ್ಪ್ಲೆ ಕಾರ್ಡ್‌)ವನ್ನು ಪೊಲೀಸ್ ಇಲಾಖೆಯಿಂದ ಶನಿವಾರ ಆಟೊ ಚಾಲಕರಿಗೆ ವಿತರಿಸಲಾಯಿತು.

ಕಾರ್ಡ್‌ಗಳನ್ನು ವಿತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌. ಚೇತನ್‌, ‘ಆಟೊ ಚಾಲಕರು ಶ್ರಮ ಜೀವಿಗಳು, ಹಗಲು ರಾತ್ರಿ ಎನ್ನದೇ ದುಡಿದು ಜೀವನ ಸಾಗಿಸುತ್ತಿದ್ದು, ಪೊಲೀಸರಿಗೆ ಮಾಹಿತಿ ನೀಡಿ ಅನುಕೂಲ ಮಾಡಿಕೊಡುತ್ತಿದ್ದಾರೆ. ರಾತ್ರಿ ವೇಳೆ ಚಾಲಕರು ತಪ್ಪು ಮಾಡಿರುವ ಯಾವೊಂದು ದೂರು ದಾಖಲಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಅನುಮಾನ ಪಡುತ್ತಿದ್ದಾರೆ. ಆ ಅನುಮಾನ ನಿವಾರಣೆಯಾಗಬೇಕಾದರೆ ಮಾಹಿತಿ ಫಲಕವನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಯಾರೋ ಒಬ್ಬ ಕಳ್ಳ ಆಟೊ ಡ್ರೈವರ್ ವೇಷ ಧರಿಸಿ ಬಂದು ಕಳ್ಳತನ ಮಾಡಬಹುದು. ಇದನ್ನು ತಪ್ಪಿಸಬೇಕು. ರಾತ್ರಿ ವೇಳೆ, ಹೆಣ್ಣು ಮಕ್ಕಳು, ಮಹಿಳೆಯರು ಸಂಚರಿಸಬೇಕಾದರೆ ಆಟೊ ಸುರಕ್ಷಿತ ಎಂಬ ಮನಸ್ಥಿತಿಯನ್ನು ಚಾಲಕರು ಸೃಷ್ಟಿಸಬೇಕು. ಆದ್ದರಿಂದ ಮಾಹಿತಿ ಫಲಕವನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕಾರ್ಡ್‌ ಮಾಡಿಸಿಕೊಳ್ಳಲು ₹200 ಖರ್ಚಾಗುತ್ತದೆ. ಚಾಲಕರು ಇದನ್ನು ನಿರ್ಲಕ್ಷಿಸಿ ನಕಲು ಮಾಡಿಸಿಕೊಂಡರೆ ಅಪರಾಧವಾಗುತ್ತದೆ. 5 ವರ್ಷಗಳವರೆಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದ್ದರಿಂದ 15 ದಿವಸದೊಳಗೆ ನಗರದ ಎಲ್ಲಾ ಆಟೊ ಚಾಲಕರು ಮತ್ತು ಮಾಲೀಕರು ಕಡ್ಡಾಯವಾಗಿ ಮಾಹಿತಿ ಫಲಕ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಮಾಹಿತಿ ಫಲಕ ಇದ್ದವರಿಗೆ ಮಾತ್ರ ರಾತ್ರಿ ವೇಳೆ ಆಟೊ ಓಡಿಸಲು ಅನುಮತಿ ನೀಡಲಾಗುತ್ತದೆ. ಇಲ್ಲದವರಿಗೆ ಅನುಮತಿ ನೀಡುವುದಿಲ್ಲ’ ಎಂದು ಎಚ್ಚರಿಸಿದರು.

‘ಚಾಲಕರು ಥರ್ಡ್ ಪಾರ್ಟಿ ಇನ್ಷುರೆನ್ಸ್‌ ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆಪ್ರಯಾಣಿಕರಿಗೆ ಏನಾದರೂ ಅಪಘಾತ
ವಾದರೆ ನೀವು ಹಣ ತುಂಬಬೇಕಾದ ಪರಿಸ್ಥಿತಿ ಬರುತ್ತದೆ. ವಿಮೆ ಮಾಡಿಸದಿರುವ ಆಟೊಗಳನ್ನು ಜಪ್ತಿ ಮಾಡುವ ಕಾರ್ಯ ಆರಂಭಿಸಿದ್ದು, ಈಗಾಗಲೇ 100 ವಾಹನಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಡಿಎಸ್‌ಪಿ ಎಸ್‌.ಎಂ. ನಾಗರಾಜ, ‘ಆಟೊ ಚಾಲಕರು ಹಾಗೂ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕಾರ್ಡ್‌ ಮಾಡಿಸಿಕೊಳ್ಳುವುದರಿಂದ ಲೈಸೆನ್ಸ್‌ ನವೀಕರಣ ಮಾಡಿಸಲು ಅನುಕೂಲವಾಗುತ್ತದೆ. ಕೆಲಸದ ಒತ್ತಡದಲ್ಲಿ ಮರೆತುಹೋದರೆ ನಿಮ್ಮ ಮೊಬೈಲ್‌ ಸಂದೇಶ ಬರುತ್ತದೆ’ ಎಂದರು.

ನಗರವೃತ್ತ ಸಿಪಿಐ ಎಂ.ಶ್ರೀನಿವಾಸ್, ‘ದುಶ್ಚಟಗಳನ್ನು ತ್ಯಜಿಸಿ, ಪ್ರತಿ ದಿವಸ ಹಣ ಉಳಿತಾಯ ಮಾಡಿದ್ದಲ್ಲಿ ವಿಮೆ ಹಣ ತುಂಬಲು ಅನುಕೂಲವಾಗುತ್ತದೆ. ಆರೋಗ್ಯದ ಕಡೆ ಹೆಚ್ಚು ಗಮನವಹಿಸಿ’ ಎಂದು ಚಾಲಕರಿಗೆ ಸಲಹೆ ನೀಡಿದರು.

ಆಟೊಸ್ನೇಹಿ ಡಾಟ್ ಕಾಂನ ವಿನಾಯಕ್, ಪಿಎಸ್‌ಐ ಹನುಮಂತಪ್ಪ ಹಾಜರಿದ್ದರು. ಸಿಪಿಐ ಆನಂದ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.