ADVERTISEMENT

ದೊಡ್ಡಾಟ ಕಲೆ ಅಭಿವೃದ್ಧಿಗೆ ಬದ್ಧ

ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟಾರ್ ಶಿವರುದ್ರಪ್ಪ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 15:37 IST
Last Updated 2 ಜೂನ್ 2019, 15:37 IST
ಹರಪನಹಳ್ಳಿಯ ಪೃಥ್ವಿರಂಗಶಾಲೆಯಲ್ಲಿ ನಡೆದ ಮೂಡಲಪಾಯ ಯಕ್ಷಗಾನ ತರಬೇತಿ ಕಾರ್ಯಾಗಾರವನ್ನು ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಉದ್ಘಾಟಿಸಿದರು.
ಹರಪನಹಳ್ಳಿಯ ಪೃಥ್ವಿರಂಗಶಾಲೆಯಲ್ಲಿ ನಡೆದ ಮೂಡಲಪಾಯ ಯಕ್ಷಗಾನ ತರಬೇತಿ ಕಾರ್ಯಾಗಾರವನ್ನು ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಉದ್ಘಾಟಿಸಿದರು.   

ಹರಪನಹಳ್ಳಿ: ಯಕ್ಷಗಾನ ಮೂಡಲಪಾಯ ದೊಡ್ಡಾಟ ಕಲೆ ಅಭಿವೃದ್ಧಿಗೆ ಅಕಾಡೆಮಿ ಬದ್ಧವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಶಿವರುದ್ರಪ್ಪ ಹೇಳಿದರು.

ಪಟ್ಟಣದ ಪೃಥ್ವಿರಂಗಶಾಲೆಯಲ್ಲಿ ಭಾನುವಾರ ನಡೆದ ಮೂಡಲಪಾಯ ಯಕ್ಷಗಾನ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂಡಲಪಾಯ ಯಕ್ಷಗಾನ ಮೈಸೂರಿನಿಂದ ಹರಿಹರದವರೆಗೂ ಹಬ್ಬಿಕೊಂಡಿದೆ. ಹರಪನಹಳ್ಳಿ ಹಾಗೂ ಜಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿದೆ. ಚಾಮರಾಜನಗರ ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಪೂರ್ಣ ಪ್ರಮಾಣದಲ್ಲಿದೆ ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡದ ಯಕ್ಷಗಾನ ಸಾಕಷ್ಟು ಬೆಳೆದಿದೆ. ಆದರೆ ದೊಡ್ಡಾಟ, ಮೂಡಲಪಾಯ ಯಕ್ಷಗಾನ ಮುಂದಿನ ಪೀಳಿಗೆಗೆ ಮುಂದುವರಿಯುತ್ತಿಲ್ಲ. ಹೊಸತಲೆಮಾರಿಗೆ ಕಲಿಸಲು ಅಕಾಡೆಮಿ ಹಲವು ಯೋಜನೆಗಳನ್ನು ರೂಪಿಸಿದೆ. ಮೂಡಲಪಾಯದಲ್ಲಿ ವಿದ್ಯಾವಂತರು, ವಿದ್ವಾಂಸರೂ ಪಾಲ್ಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಾಗಾರ ಉದ್ಘಾಟಿಸಿದ ಬೆಂಗಳೂರಿನ ದೇಸಿ ಶೈಲಿಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ, ‘ಸರ್ಕಾರಗಳು ಕಲೆಗಳ ಅಭಿವೃದ್ಧಿಗೆ ಹೊಸ ಪರಿಕಲ್ಪನೆಗಳಿಗೆ ಅನುಗುಣವಾಗಿ ಹೊಸಹೊಸ ನಿಯಮಗಳನ್ನು ಸೃಷ್ಟಿಸಿಕೊಂಡು ಯೋಜನೆಗಳನ್ನು ಜಾರಿಗೆ ತರಬೇಕು’ ಎಂದರು.

ಕಲೆಯ ಹುಟ್ಟು, ವಿಕಾಸದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ಅದರಲ್ಲಿ ಜನಪದ ಮೊದಲನೆಯದ್ದು. ಈ ಕಲೆಯಲ್ಲಿ ಮುಕ್ತಪ್ರವೇಶ ಮತ್ತು ಮುಕ್ತ ನಿರ್ಗಮನಕ್ಕೆ ಅವಕಾಶ ಇರುತ್ತದೆ. ಇದರಿಂದಾಗಿ ಕಲೆಯ ಒಟ್ಟು ಸೌಂದರ್ಯಕ್ಕೆ ಧಕ್ಕೆಯಾಗುವುದಿಲ್ಲ. ತಲೆಮಾರಿನಿದ ತಲೆಮಾರಿಗೆ ಕಲೆಗಳು ಬರುವಾಗ ಕೆಲವು ಸಂಪ್ರದಾಯಗಳನ್ನು ಬೆಳೆಸಿಕೊಳ್ಳುತ್ತವೆ. ಜನಪದ, ಸಾಂಪ್ರದಾಯಿಕ, ಅಭಿಜಾತ ಹಾಗೂ ಆಧುನಿಕ ಹೀಗೆ ರೂಪಾಂತರಗೊಳ್ಳತ್ತಾ ಸಾಗುತ್ತಿದೆ ಎಂದು ತಿಳಿಸಿದರು.

ಪಡುವಲಪಾಯ ಯಕ್ಷಗಾನ ಆಧುನೀಕರಣಗೊಳ್ಳುತ್ತಾ ಸಾಗುತ್ತಿರುವುದರಿಂದ ವಿದ್ಯಾವಂತರು, ವಿದ್ವಾಂಸರೂ ಪಾಲ್ಗೊಳ್ಳುತ್ತಿದ್ದಾರೆ. ಮೂಡಲಪಾಯ ಇನ್ನೂ ಆರಂಭದ ಹಂತದಲ್ಲಿದೆ. ಇದಕ್ಕೆ ಹೊಸ ಸಾಧ್ಯತೆಗಳನ್ನು ರೂಢಿಸಬೇಕು. ಶಿಬಿರಾರ್ಥಿಗಳು ಮೂಡಲಪಾಯದಲ್ಲಿ ಹೊಸ ಪ್ರಯೋಗಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಪೃಥ್ವಿರಂಗಶಾಲೆಯ ಪ್ರಾಚಾರ್ಯ ಬಿ. ಪರಶುರಾಮ, ಕಲಾಮನೆ ಸಂಘಟನೆಯ ಭೀಮಪ್ಪ ಮಾತನಾಡಿದರು. ಮೂಡಲಪಾಯ ಯಕ್ಷಗಾನದ ಭಾಗವತರಾದ ಅರಸಿಕೇರಿ ಕೆ.ಬಿ. ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಲಾವಿದರಾದ ಮತ್ತಿಹಳ್ಳಿಯ ಅಡಿವೆಪ್ಪ, ಪಂಪಾಚಾರ್, ಉಪನ್ಯಾಸಕ ಸೋಮೇಶ್ ಉಪ್ಪಾರ್, ರಂಗಪ್ರೇಮಿ ನಾಗಭೂಷಣ ಹಡಗಲಿ, ಅಂಜಲಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.