ADVERTISEMENT

ದಾವಣಗೆರೆ | ರೋಗಲಕ್ಷಣ ರಹಿತರು ಮನೆಯಲ್ಲಿರಲಿ

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 3:36 IST
Last Updated 9 ಜನವರಿ 2022, 3:36 IST
ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಕೋವಿಡ್‌ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವೀಕ್ಷಿಸಿದರು.
ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಕೋವಿಡ್‌ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವೀಕ್ಷಿಸಿದರು.   

ದಾವಣಗೆರೆ: ಕೊರೊನಾ ಸೋಂಕಿದ್ದರೂ ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇದ್ದರೆ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುವುದು ಬೇಡ. ರೋಗ ಲಕ್ಷಣಗಳು ಇದ್ದವರನ್ನು ದಾಖಲಿಸಿಕೊಂಡು ಗುಣಮುಖರನ್ನಾಗಿ ಮಾಡಿ ಕಳುಹಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಕೋವಿಡ್‌ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು.

ಪಿಐಸಿಯು ವಾರ್ಡ್‌ ಅನ್ನು ಸಂಪೂರ್ಣವಾಗಿ ಕೋವಿಡ್‌ಗಾಗಿ ಮೀಸಲಿಡಬೇಕು. ಎಲ್ಲ ಬೆಡ್‌ಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು. ಹೊಸ ಮಾರ್ಗಸೂಚಿ ಪ್ರಕಾರ ರೋಗ ಲಕ್ಷಣ ಇಲ್ಲದವರನ್ನು ಮನೆಯಲ್ಲೇ ಇರುವಂತೆ ಮಾಡಬೇಕು. ಏಳು ದಿನಗಳ ಕಾಲ ನಿಗಾ ಇಡಬೇಕು ಎಂದು ಸೂಚಿಸಿದರು.

ADVERTISEMENT

ಸಿಜಿ ಆಸ್ಪತ್ರೆಯಲ್ಲಿ ಕೋವಿಡ್‌ ಕಾರಣದಿಂದ ಒಟ್ಟು 9 ಮಂದಿ ದಾಖಲಾಗಿದ್ದಾರೆ. ಎಲ್ಲರೂ ಆಮ್ಲಜನಕ ವಾರ್ಡ್‌ನಲ್ಲೇ ಇದ್ದಾರೆ. ಐಸಿಯು ವಾರ್ಡ್‌ನಲ್ಲಿ ಯಾರೂ ಇಲ್ಲ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ ಎಂದು ಸಿ.ಜಿ. ಆಸ್ಪತ್ರೆಯ ಅಧಿಕ್ಷಕ ಡಾ. ಜಯಪ್ರಕಾಶ್‌ ವಿವರ ನೀಡಿದರು.

ಬೆಂಗಳೂರು, ತಮಿಳುನಾಡು ಹೀಗೆ ಹೊರ ಪ್ರದೇಶಗಳಿಗೆ ಪ್ರಯಾಣ ಮಾಡಿ ಬಂದವರೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ಆರೋಗ್ಯವನ್ನು ಜಿಲ್ಲಾಧಿಕಾರಿ ವಿಚಾರಿಸಿದರು.

ಹೊರ ರಾಜ್ಯಗಳಿಂದ ಅದರಲ್ಲೂ ಮಹಾರಾಷ್ಟ್ರ, ಕೇರಳದಿಂದ ಬಂದವರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು. ಜನರು ಅನಗತ್ಯವಾಗಿ ತಿರುಗಾಡುವುದನ್ನು ನಿಲ್ಲಿಸಬೇಕು. ಅಗತ್ಯವಿದ್ದರೆ ಮಾಸ್ಕ್‌ ಹಾಕಿಯೇ ಹೊರಬರಬೇಕು. ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಬಾರದು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಯಾರೂ ಗಾಬರಿಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ದಿನಕ್ಕೆ 2100 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ನಿಗದಿಪಡಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ನಿಗದಿಪಡಿಸಿದ ಗುರಿಯನ್ನು ದಾಟಿ ಪರೀಕ್ಷೆ ಮಾಡಲಾಗುತ್ತಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು, ವಿದೇಶದಿಂದ ಬರುವವರನ್ನು, ಹೋಟೆಲ್‌, ರೆಸ್ಟೊರಂಟ್‌ನಲ್ಲಿ ಕೆಲಸ ಮಾಡುವವರನ್ನು, ನಿರಂತರ ಪ್ರಯಾಣಗಳಲ್ಲಿ ಇರುವವರನ್ನು, ಐಎಲ್‌ಐ, ಸಾರಿ ಇರುವವರನ್ನು ನಿರಂತರ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಡಾ. ಜಿ.ಡಿ. ರಾಘವನ್‌ ಮಾಹಿತಿ ನೀಡಿದರು.

ಹೊರ ರಾಜ್ಯಗಳಿಂದ ಹಾಗೂ ಕೊರೊನಾ ಹೆಚ್ಚಿರುವ ಹೊರ ಜಿಲ್ಲೆಗಳಿಂದ ಬರುವವರ ಮೇಲೆ ಇಗಾ ಇಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿ ಅವರು ಬಂದು ಇಳಿದ ಕೂಡಲೇ ಕ್ವಾರಂಟೈನ್‌ ವಿಧಿಸಲಾಗುತ್ತದೆ. ಏಳು ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ನಿವಾಸಿ ವೈದ್ಯಾಧಿಕಾರಿ ಡಾ.ಮಂಜುನಾಥ ಪಾಟೀಲ್‌, ಕೋವಿಡ್‌ ನೋಡಲ್‌ ಅಧಿಕಾರಿ ಡಾ.ಕೋಲ್ಕರ್‌ ಅವರೂ ಇದ್ದರು.

12 ಮಂದಿಗೆ ಕೊರೊನಾ ದೃಢ
ಜಿಲ್ಲೆಯಲ್ಲಿ 12 ಮಂದಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದೆ. ಮೂವರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 48ಕ್ಕೇರಿದೆ.

ಇಲ್ಲಿವರೆಗೆ 51,077 ಮಂದಿಗೆ ಕೊರೊನಾ ಬಂದಿದೆ. 50,421 ಮಂದಿ ಗುಣಮುಖರಾಗಿದ್ದಾರೆ. 608 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.