ADVERTISEMENT

ಕೇದಾರ ದೇಗುಲಕ್ಕೆ ಕಿರೀಟದ ಮೆರುಗು

ಕಣ್ವಕುಪ್ಪೆ ಗವಿಮಠದಿಂದ ವಜ್ರಖಚಿತ ಕಿರೀಟ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 7:55 IST
Last Updated 1 ಏಪ್ರಿಲ್ 2021, 7:55 IST
ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ನಡೆದ ಸಮಾರಂಭದಲ್ಲಿ ಕೇದಾರ ಶ್ರೀಗೆ ಕಣ್ವಕುಪ್ಪೆ ಸ್ವಾಮೀಜಿ ಅವರು ವಜ್ರಖಚಿತ ಬಂಗಾರದ ಕಿರೀಟವವನ್ನು ಸಮರ್ಪಿಸಿದರು.
ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ನಡೆದ ಸಮಾರಂಭದಲ್ಲಿ ಕೇದಾರ ಶ್ರೀಗೆ ಕಣ್ವಕುಪ್ಪೆ ಸ್ವಾಮೀಜಿ ಅವರು ವಜ್ರಖಚಿತ ಬಂಗಾರದ ಕಿರೀಟವವನ್ನು ಸಮರ್ಪಿಸಿದರು.   

ಜಗಳೂರು: ಪಂಚಪೀಠಗಳಲ್ಲಿ ಒಂದಾದ ಕೇದಾರನಾಥ ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿರುವ ವಜ್ರ ಖಚಿತ ಚಿನ್ನದ ಕಿರೀಟವನ್ನು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಕೇದಾರ ಪೀಠದ ಭೀಮಾಶಂಕರ ಭಗವಾತ್ಪಾದರಿಗೆ ಭಕ್ತರ ಸಮ್ಮುಖದಲ್ಲಿ ಈಚೆಗೆ ಅರ್ಪಿಸಿದರು.

ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವಜ್ರಖಚಿತ ಚಿನ್ನದ ಕಿರೀಟ ಸಮರ್ಪಿಸಲಾಯಿತು.

ಜಲಪ್ರಳಯದ ನಂತರ ಕೇದಾರನಾಥನ ಕಿರೀಟಕ್ಕೆ ಧಕ್ಕೆಯಾಗಿತ್ತು. ದೇಶದ ವಿವಿಧ ರಾಜ್ಯಗಳ ಭಕ್ತರು ಕಾಣಿಕೆಯಾಗಿ ನೀಡಿದ ಬಂಗಾರದಲ್ಲಿ 1 ಕೆ.ಜಿ‌. ತೂಕದ ಕಿರೀಟ ಮಾಡಿಸಿ ಕೇದಾರ ಸನ್ನಿಧಿಗೆ ಅರ್ಪಿಸಲಾಯಿತು.

ADVERTISEMENT

ಕೇದಾರಪೀಠದ ಭೀಮಾಶಂಕರ ಭಗವಾತ್ಪಾದರು, ‘ಮುಂಬರುವ ಮೇ ತಿಂಗಳಲ್ಲಿ ಈ ವರ್ಷದ ಕೇದಾರನಾಥನ ದರ್ಶನ ಪ್ರಾರಂಭವಾಗಲಿದ್ದು, ಭಕ್ತರು ಚಿನ್ನದ ಕಿರೀಟವನ್ನು ಕಣ್ತುಂಬಿಕೊಳ್ಳಲಿದ್ದಾರೆ‌. ಈ ಹಿಂದೆ ಜಲಪ್ರಳಯದಿಂದ ಹಿಮಾಲಯದ ಕೇದಾರನಾಥನ ಚಿನ್ನದ ಕಿರೀಟ ಮುಡಿಯಲ್ಲಿ ಇರಲಿಲ್ಲ. ಹಾಗಾಗಿ ಭಕ್ತರಲ್ಲಿ ನಿರಾಸೆಯಾಗಿತ್ತು. ಈಗ ಕೇದಾರನಾಥನಿಗೆ ಒಂದು ಕೆಜಿ ತೂಕದ ವಜ್ರಖಚಿತ ಕಿರೀಟವು ಸಿದ್ಧಗೊಂಡಿರುವುದು ಸಂತೋಷದ ಸಂಗತಿ’ ಎಂದರು.

‘ಭಕ್ತರ ಸಹಕಾರದಿಂದ ತಾಲ್ಲೂಕಿನ ಕಣ್ವಕುಪ್ಪೆಮಠದ ಶ್ರೀ ನೇತೃತ್ವದಲ್ಲಿ ಕೇದಾರ ಪೀಠಕ್ಕೆ ಈ ಕಿರೀಟವು ರವಾನೆಯಾಗಲಿದೆ. ಇದೇ ವರ್ಷ ಮೇ ತಿಂಗಳಲ್ಲಿ ಕೇದಾರನಾಥನ ದೇವಾಲಯದ ಬಾಗಿಲು ತೆರೆಯುತ್ತದೆ. 8 ವರ್ಷದ ಬಳಿಕ ನಮಗೆ ಸಮಾಧಾನ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಕಣ್ಣು ಕುಪ್ಪೆ ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ‘6 ತಿಂಗಳ ಕಾಲ ದೀಪ ಬೆಳಗುತ್ತಲೇ ಇರುವುದು ವಿಶೇಷ. ವರ್ಷದಲ್ಲಿ ಆರು ತಿಂಗಳು ಮುಚ್ಚಲ್ಪಡುವ ದೇವಾಲಯದಲ್ಲಿ ದೇವತೆಗಳು ಬಂದು ತಮ್ಮ ಆರಾಧ್ಯ ದೈವ ಶಿವನನ್ನು ಪೂಜಿಸಿ ದೀಪವನ್ನು ಬೆಳಗುತ್ತಾರೆ ಎಂಬ ಪ್ರತೀತಿ ಇದೆ. ಈ ದೀಪವನ್ನು ನೋಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿದರು.

ಚಲನಚಿತ್ರ ನಟ ಜಗ್ಗೇಶ್, ಶಾಸಕ ಎಸ್.ವಿ. ರಾಮಚಂದ್ರ, ಮಾಜಿ ಶಾಸಕ ಎಚ್.ಪಿ. ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.