ADVERTISEMENT

ಕನಿಷ್ಟ ಸೌಲಭ್ಯವೂ ಇಲ್ಲದ ಕಾರ್ಯಗಾರ: ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 13:11 IST
Last Updated 18 ಅಕ್ಟೋಬರ್ 2019, 13:11 IST

ಹೊಸನಗರ: ‘ಇಲ್ಲಿ ಖುರ್ಚಿ ಇಲ್ಲ, ನಾವು ನೂರಾರು ಮಂದಿ ಇದ್ದೇವೆ. ಎಲ್ಲಿ ಕುಳಿತುಕೊಳ್ಳುವುದು. ಹೋಗಲಿ, ಊಟವಾದರೂ ಹಾಕಿ ಎಂದರೆ ಊಟ ಖಾಲಿ ಆಗಿದೆ ಎಂದರು. ಇಂತಹ ಅವ್ಯವಸ್ಥೆಯ ಕಾರ್ಯಗಾರವನ್ನು ಯಾವ ಕರ್ಮಕ್ಕೆ ಮಾಡುತ್ತೀರಿ? ನಾವು ನಮ್ಮ ಕೆಲಸ ಬಿಟ್ಟು ಬಂದಿದ್ದೇವೆ. ಇಲ್ಲಿ ನಮ್ಮನ್ನು ಕೇಳುವವರೆ ಇಲ್ಲವಾಗಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯರು ಹರಿಹಾಯ್ದರು.

ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬಾಲ ವಿಕಾಸ ಮಹಿಳಾ ಸಮಿತಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಎರ್ಪಡಿಸಿದ್ದ ಉಪಗ್ರಹ ಆಧಾರಿತ ತರಬೇತಿ ಕಾರ್ಯಾಗಾರದಲ್ಲಿನ ಅವ್ಯವಸ್ಥೆಯನ್ನು ಕಂಡು ಅಂಗನವಾಡಿ ಕಾರ್ಯಕರ್ತೆಯರು ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕಾರ್ಯಾಗಾರವನ್ನು ಬೇಕಾಬಿಟ್ಟಿಯಾಗಿ ಆಯೋಜಿಸಲಾಗಿದೆ. ಇಲ್ಲಿ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ. ನಾಮಕಾವಸ್ಥೆ ಕಾರ್ಯಕ್ರಮ ಮಾಡಲಾಗಿದೆ’ ಎಂದು ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ತಾರಾ ಮತ್ತ ಪ್ರಧಾನ ಕಾರ್ಯದರ್ಶಿ ಲೀಲಾವತಿ ದೂರಿದರು.

ಖುರ್ಚಿ ಇಲ್ಲ, ಊಟವೂ ಇಲ್ಲ...
ಕನಿಷ್ಟ ಸೌಲಭ್ಯವನ್ನು ನೀಡಲಾಗದ ಇಂತಹ ಕಾರ್ಯಾಗಾರಗಳನ್ನು ಯಾತಕ್ಕಾಗಿ ಆಯೋಜಿಸಬೇಕು. ನಮ್ಮನ್ನು ಕುರಿಗಳು ಎಂದು ತಿಳಿದಿದ್ದಾರೆಯೇ ಎಂದು ಪ್ರಶ್ನಿಸಿದ ಅಧ್ಯಕ್ಷೆ ತಾರಾ, ಕಾರ್ಯಾಗಾರದಲ್ಲಿ ಸುಮಾರು 750ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದೆವು. ಎಲ್ಲರಿಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿರಲಿಲ್ಲ. ಒಬ್ಬರ ಮೇಲೋಬ್ಬರು ಕುಳಿತುಕೊಳ್ಳಬೇಕಾಯಿತು. ಕನಿಷ್ಟ ಊಟದ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಕೇವಲ 70- 80 ಜನರಿಗೆ ಸಾಕಾಗುವಷ್ಟು ಊಟ ತರಿಸಲಾಗಿತ್ತು. ಹಲವರು ಉಪವಾಸ ಆಚರಿಸಬೇಕಾಯಿತು. ಕಾರ್ಯಾಗಾರಕ್ಕೆ ಕಡ್ಡಾಯವಾಗಿ ಬರಬೇಕು ಎಂದು ಠರಾವು ಹೊರಡಿಸುವ ಅಧಿಕಾರಿಗಳು ಹಾಜರಾಗುವವರಿಗೆ ವಾಹನ ಭತ್ಯೆ ನೀಡುತ್ತಿಲ್ಲ. ನಮ್ಮ ಕೈಯಿಂದಲೇ ಹಣ ಹಾಕಿಕೊಂಡು ಬರಬೇಕಾಗಿದೆ’ ಎಂದು ಅಳಲು ತೋಡಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.