ADVERTISEMENT

ಚುನಾವಣೆ ಮುಗಿಯುವವರೆಗೆ ವಿರಮಿಸದಿರಿ

ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬಿ.ಎಸ್‌. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 7:20 IST
Last Updated 21 ಏಪ್ರಿಲ್ 2022, 7:20 IST
ದಾವಣಗೆರೆಯ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಲಿಕೆಯ ಕಾಂಗ್ರೆಸ್ ಸದಸ್ಯರಾಗಿದ್ದ ಜೆ.ಎನ್ ಶ್ರೀನಿವಾಸ್ ಮತ್ತು ಅವರ ಪತ್ನಿ ಶ್ವೇತಾ ಅವರನ್ನು ಪಕ್ಷದ ಶಾಲು ಹಾಕಿ ಬಿಜೆಪಿಗೆ ಬರಮಾಡಿಕೊಂಡರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಲಿಕೆಯ ಕಾಂಗ್ರೆಸ್ ಸದಸ್ಯರಾಗಿದ್ದ ಜೆ.ಎನ್ ಶ್ರೀನಿವಾಸ್ ಮತ್ತು ಅವರ ಪತ್ನಿ ಶ್ವೇತಾ ಅವರನ್ನು ಪಕ್ಷದ ಶಾಲು ಹಾಕಿ ಬಿಜೆಪಿಗೆ ಬರಮಾಡಿಕೊಂಡರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ನರೇಂದ್ರ ಮೋದಿ ಕಳೆದ 7 ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ನಾವೂ ಅದೇ ರೀತಿ ಕೆಲಸ ಮಾಡಬೇಕಿದೆ. 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಮೋದಿ ನೀಡಿದ್ದಾರೆ. ಆ ಗುರಿ ತಲುಪುವವರೆಗೆ ಕಾರ್ಯಕರ್ತರು ವಿರಮಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಬುಧವಾರ ನಡೆದ ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಹರಿಹರ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಮನೆಯಲ್ಲಿ ಕೂರುತ್ತಾನೆ ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದರು. ನಾನು ಮನೆಯಲ್ಲಿ ಕೂರುವುದಿಲ್ಲ. ಈ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಬಿಜೆಪಿ 150 ಸ್ಥಾನಗಳನ್ನು ಪಡೆಯುವವರೆಗೆ ವಿ‌ರಮಿಸುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಕಾರ್ಯಕರ್ತರು ಎಲ್ಲಿ ಕರೆದರೂ ನಾವು ಬರಲು ಸಿದ್ಧರಿದ್ದೇವೆ. 1000 ಮಂದಿ ಸೇರಿಸಲು ಸಾಧ್ಯವಾಗುವಲ್ಲಿ ಸಮಾವೇಶಗಳನ್ನು ಮಾಡೋಣ. ಈ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಪಣತೊಡಬೇಕು’ ಎಂದರು.

ಕಾಂಗ್ರೆಸ್‌ ಹಣಬಲ, ತೋಳ್ಬಲ, ಹೆಂಡದ ಬಲ, ಜಾತಿಗಳ ನಡುವೆ ವಿಷ ಬೀಜ ಬಿತ್ತಿದ ಬಲಗಳ ಮೂಲಕ ಚುನಾವಣೆ ಗೆಲ್ಲುತ್ತಿತ್ತು. ಈಗ ಕಾಲ ಬದಲಾಗಿದೆ. ಇನ್ನು ಮುಂದೆ ಅವೆಲ್ಲ ನಡೆಯುವುದಿಲ್ಲ. ಜನರು ಜಾಗೃತಗೊಂಡಿದ್ದಾರೆ ಎಂದು ತಿಳಿಸಿದರು.

ಪ್ರತಿಗ್ರಾಮಗಳಲ್ಲಿ ಮಹಿಳೆಯರು ಒಟ್ಟಾಗಬೇಕು. 30–40 ಮಂದಿಗೆ ಒಂದು ಗುಂಪಿನಂತೆ ರಚನೆ ಮಾಡಬೇಕು. ಯುವಕರೂ ಅದೇ ರೀತಿ ಗುಂಪುಗಳನ್ನು ಮಾಡಬೇಕು. ಪರಿಶಿಷ್ಟ ಜಾತಿ, ಪಂಗಡದವರನ್ನು ಭೇಟಿಯಾಗಿ ಪಕ್ಷ ಬಲಪಡಿಸಬೇಕು. ಗ್ರಾಮಗಳ ಮುಖಂಡರ ಪಟ್ಟಿ ಮಾಡಿ ಭೇಟಿ ಮಾಡಬೇಕು ಎಂದು ಸಲಹೆ ನೀಡಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ಕಾಂಗ್ರೆಸ್‌ ಭ್ರಷ್ಟಾಚಾರಗಳ ತಾಯಿ. ಗರಿಬೀ ಹಠಾವೊ ಎಂದು ಘೋಷಣೆಯಷ್ಟೇ ಅವರದ್ದು. ಆದರೆ ಕಾಂಗ್ರೆಸ್‌ನವರ ಬಡತನವಷ್ಟೇ ದೂರವಾಯಿತು. ಬಡವರು ಬಡವರಾಗಿಯೇ ಉಳಿದರು. ನರೇಂದ್ರಮೋದಿ ಪ್ರಧಾನಿಯಾದ ಮೇಲೆ ಭ್ರಷ್ಟಾಚಾರ ಕಡಿಮೆಯಾಗಿದೆ’ ಎಂದು ಹೇಳಿದರು.

ಕಂದಾಯ ಸಚಿವ ಆರ್‌. ಅಶೋಕ್‌ ಮಾತನಾಡಿ, ‘ಡಬಲ್‌ ಎಂಜಿನ್‌ ಸರ್ಕಾರದ ಬಗ್ಗೆ ಉತ್ತರ ಪ್ರದೇಶದ ಚುನಾವಣೆ ಆಗುವವರೆಗೆ ಕಾಂಗ್ರೆಸ್‌ನವರು ಭಾರಿ ಮಾತನಾಡಿದರು. ಈಗ ಮಾತೇ ಎತ್ತುತ್ತಿಲ್ಲ. ಹಿಜಾಬ್‌ ಸಹಿತ ಎಲ್ಲ ಸಂದರ್ಭದಲ್ಲಿ ಕಾಂಗ್ರೆಸ್‌ ದ್ವಂದ್ವ ನಿಲುವು ತೆಗೆದುಕೊಳ್ಳುತ್ತಿದೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷನನ್ನು ಪೊಲೀಸರು ಹುಡುಕುತ್ತಿದ್ದಾರೆ. ಹೀಗೆ ಎಲ್ಲ ಕಡೆ ಕಾಂಗ್ರೆಸ್‌ ನೆಲಕಚ್ಚುತ್ತಿದೆ. ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು ಎಂಬುದು ಒಂದೇ ವಿಷಯ ಇರುವುದು. ಬಹು ಸಂಖ್ಯಾತರ ಬಗ್ಗೆ ಮಾತೇ ಇಲ್ಲ. ಗೇಟ್‌ಪಾಸ್‌ ತೆಗೆದುಕೊಳ್ಳಲು ತಯಾರಾಗಿದೆ. ಜೆಡಿಎಸ್‌ ಕಾಣೆಯಾಗಲಿದೆ’ ಎಂದು ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ‘ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಅವುಗಳನ್ನು ಬದಿಗೊತ್ತಿ ಚುನಾವಣೆಗೆ ಸಿದ್ಧರಾ ಗಬೇಕು. ಕಾರ್ಯಕರ್ತರು ಇನ್ನು ಒಂದು ವರ್ಷ ಮಲಗಬಾರದು’ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ. ಈ ಬಾರಿ ಹರಿಹರ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿಯೂ ಜಯಗಳಿಸುವ ಮೂಲಕ ಎಲ್ಲ 8 ಕ್ಷೇತ್ರಗಳನ್ನು ಗೆಲ್ಲಬೇಕು’ ಎಂದು ತಿಳಿಸಿದರು.

ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಪ್ರೊ. ಎನ್‌. ಲಿಂಗಣ್ಣ, ಎನ್‌. ರವಿಕುಮಾರ್‌, ನವೀನ್‌ ಕುಮಾರ್‌, ಮುಖಂಡರಾದ ಶಿವಲಿಂಗಪ್ಪ, ಕೆ.ಎಂ. ಸುರೇಶ್‌, ಜಯಮ್ಮ ಗೋಪಿನಾಯ್ಕ್‌, ಗಾಯತ್ರಿಬಾಯಿ ಖಂಡೋಜಿರಾವ್‌, ಜೀವನ್‌ಕುಮಾರ್‌, ಸುಧಾ ಜಯರುದ್ರೇಶ್‌ ಅವರೂ ಇದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌ ಕಾರ್ಯಕ್ರಮ ನಿರೂಪಿಸಿದರು.

ಶ್ರೀನಿವಾಸ್‌ ದಂಪತಿ ಬಿಜೆಪಿಗೆ

ಭಗತ್‌ ಸಿಂಗ್‌ ನಗರ ವಾರ್ಡ್‌ನ ಪಾಲಿಕೆ ಸದಸ್ಯ ಜೆ.ಎನ್‌. ಶ್ರೀನಿವಾಸ್‌ ಮತ್ತು ಅವರ ಪತ್ನಿ ಕೆಇಬಿ ಕಾಲೊನಿ ವಾರ್ಡ್‌ನ ಸದಸ್ಯೆ ಶ್ವೇತಾ ಶ್ರೀನಿವಾಸ್‌ ಅವರು ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಕಾಂಗ್ರೆಸ್‌ನಿಂದ ಪಾಲಿಕೆಗೆ ಆಯ್ಕೆಯಾದ ಮೇಲೆ ಮೊದಲ ಮೇಯರ್‌ ಚುನಾವಣೆಯಲ್ಲಿ ಮೇಯರ್‌ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಮಾಡಿಲ್ಲ ಎಂಬ ಕಾರಣಕ್ಕೆ ಆ ಚುನಾವಣೆ ಸಂದರ್ಭ ಗೈರಾಗಿದ್ದರು. ಬಳಿಕದ ಎರಡು ವರ್ಷವೂ ಮೇಯರ್‌ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಮಂಗಳವಾರ ಜಿಎಂಐಟಿಯಲ್ಲಿ ಬಿಜೆಪಿ ನಾಯಕರ ಜತೆಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬುಧವಾರ ಅಧಿಕೃತವಾಗಿ ಸೇರ್ಪಡೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.