ADVERTISEMENT

ಮಾನವೀಯ ಸೇವೆಯ ಮಲ್ಲಿಕಾರ್ಜುನರ ಮರೆಯದಿರಿ

ಎಸ್‌ಎಸ್‌ಎಂ 55ನೇ ಜನ್ಮದಿನೋತ್ಸವ ಉದ್ಘಾಟಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 5:08 IST
Last Updated 23 ಸೆಪ್ಟೆಂಬರ್ 2022, 5:08 IST
ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಜನ್ಮದಿನದ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು (ಎಡಚಿತ್ರ). ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಜನ್ಮದಿನದ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು (ಎಡಚಿತ್ರ). ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಜಿಲ್ಲೆಯಲ್ಲಿ ಮಾನವೀಯತೆ ಮತ್ತು ಸೇವೆಗೆ ಎಸ್‌.ಎಸ್‌. ಮಲ್ಲಿಕಾರ್ಜುನ ಕುಟುಂಬ ಮೀಸಲಾಗಿದೆ. ಜಿಲ್ಲೆ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ್ದರೂ ಮತದಾರರು ಕಳೆದಬಾರಿ ಅವರ ಕೈ ಹಿಡಿಯಲಿಲ್ಲ. ಇದರಿಂದ ಮತದಾರರಿಗೆ ಏನಾದರೂ ಲಾಭವಾಯಿತೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಲ್ಲಿಕಾರ್ಜುನರ ಕೆಲಸವನ್ನು ಮರೆಯಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಎಸ್‌ಎಸ್‌ಎಂ ಅಭಿಮಾನಿ ಬಳಗವು ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ 55ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯನ್ನು ಆರೋಗ್ಯ, ವಿದ್ಯೆ, ವ್ಯಾಪಾರ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಶಕ್ತಿಕೇಂದ್ರವನ್ನಾಗಿ ಎಸ್ಎಸ್‌ಎಂ ಕುಟುಂಬ ಮಾಡಿದೆ. ಕಳೆದ ಬಾರಿ ಸೋಲಿಸಿದ ಮತದಾರರ ಕುಟುಂಬಗಳಿಗೆ ಉದ್ಯೋಗ ಸಿಕ್ಕಿತೇ? ಖಾತೆಗೆ ಹಣ ಬಂತೇ? ಭ್ರಷ್ಟಾಚಾರ ರಹಿತ ಆಡಳಿತ ಬಂತೇ? ಬದಲಾವಣೆಯ ಗಾಳಿ ಬೀಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಗೆಲ್ಲಬೇಕು’ ಎಂದು ತಿಳಿಸಿದರು.

ADVERTISEMENT

ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಲ್ಲಿಕಾರ್ಜುನ ಮತ್ತು ನಾನು ಒಟ್ಟಿಗೆ ಸಚಿವರಾಗಿ ಕೆಲಸ ಮಾಡಿದ್ದೆವು. ಶಾಮನೂರು ಶಿವಶಂಕರಪ್ಪ ಕೂಡ ಇದ್ದರು. ಬದುಕು ಬದಲಾವಣೆ ಮತ್ತು ಅಭಿವೃದ್ಧಿಯ ಬಗ್ಗೆಯೇ ಅಪ್ಪ, ಮಗ ನಿರಂತರ ಚಿಂತನೆ ಮಾಡಿದವರು. ಕಳೆದ ಬಾರಿ ಕೊರೊನಾ ಬಂದಾಗ ಎಲ್ಲರಿಗೂ ಲಸಿಕೆ ಕೊಡಿಸಲು ಪ್ರಧಾನಿ ನರೇಂದ್ರ ಮೋದಿಗೆ ಸಾಧ್ಯವಾಗದೇ ಇದ್ದಾಗ ಸ್ವತಃ ಖರೀದಿಸಿ 60 ಸಾವಿರ ಮಂದಿಗೆ ಉಚಿತವಾಗಿ ಲಸಿಕೆ ನೀಡಿ ದೇಶದಲ್ಲಿಯೇ ದಾಖಲೆ ಬರೆದ ಕುಟುಂಬ ಇದು ಎಂದು ಶ್ಲಾಘಿಸಿದರು.

ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆಯನ್ನು ಅವರು ಬೇಡವೆಂದರೂ ನಾವು ಮಾಡಿದೆವು. ಅದಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಮಂದಿ ಭಾಗವಹಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡುಗುವಂತೆ ಆಗಿತ್ತು. ನನ್ನ ಜನ್ಮ ದಿನ ಕೂಡ ಆಚರಣೆ ಬೇಡ. ಈ ಸಮಯದಲ್ಲಿ ಬೇರೆ ದೇಶಕ್ಕೆ ಹೋಗಿರುತ್ತೇನೆ ಎಂದು ಹೇಳಿದರೂ ಅಭಿಮಾನಿ ಬಳಗ ಕೇಳಲಿಲ್ಲ. ಒತ್ತಾಯಪೂರ್ವಕವಾಗಿ ನನ್ನ ಕಟ್ಟಿ ಹಾಕಿದರು. ಈಗ ಈ ಸನ್ಮಾನದ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ’ ಎಂದು ಹೇಳಿದರು.

‘ಅಭಿಮಾನಿ ಬಳಗವು ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆ. 5555 ಯುನಿಟ್‌ ರಕ್ತ ಸಂಗ್ರಹ, ಜನರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಮುಂತಾದವುಗಳನ್ನು ಹಮ್ಮಿಕೊಂಡಿತು. ನಮ್ಮ ವೈದ್ಯರು, ಸಿಬ್ಬಂದಿ ಸಹಕಾರ ನೀಡಿದರು’ ಎಂದು ಕೃತಜ್ಞತೆ ಸಲ್ಲಿಸಿದರು.

ಎಸ್‌ಎಸ್ ಕೇರ್‌ ಟ್ರಸ್ಟ್‌ ವತಿಯಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಕ್ಯಾನ್ಸರ್‌ ಸಹಿತ ಯಾವುದೇ ಕಾಯಿಲೆ ಇದ್ದರೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿದಿನ 30–40 ರೋಗಿಗಳು ಬರುತ್ತಿದ್ದಾರೆ. ಇದಲ್ಲದೇ ಡಯಾಲಿಸಿಸ್‌ ಅನ್ನೂ ಉಚಿತವಾಗಿ ಮಾಡಲಾಗುತ್ತಿದೆ. ವಾರಕ್ಕೆ ಎರಡು ಮೂರು ಬಾರಿ ಡಯಾಲಿಸಿಸ್‌ ಮಾಡಬೇಕಾಗುತ್ತದೆ. ವಾರಕ್ಕೆ ₹ 3000 ವೆಚ್ಚವಾಗುತ್ತದೆ. ಅದನ್ನು ಈ ಟ್ರಸ್ಟೇ ಭರಿಸುತ್ತಿದೆ. ಔಷಧದ ವೆಚ್ಚವನ್ನು ಮಾತ್ರ ರೋಗಿ ಕಡೆಯವರು ನೀಡಬೇಕಾಗುತ್ತದೆ ಎಂದು ವಿವರಿಸಿದರು.

‘ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಕಳೆದ ಚುನಾವಣೆ ಸಂದರ್ಭದಲ್ಲಿ ಬೊಗಳೆ ಬಿಟ್ಟಿದ್ದರಿಂದ ಬಿಜೆಪಿ ಆಯ್ಕೆಯಾಗಿದೆ. ಈ ಬಾರಿ ಅದು ನಡೆಯಲ್ಲ. ಜಿಲ್ಲೆಯಲ್ಲಿ ಅತ್ಯುತ್ತಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಗೆಲ್ಲಿಸಿ ಕಳುಹಿಸಬೇಕು. ನಮ್ಮ ಸರ್ಕಾರ ಯಾವತ್ತೂ ₹ 40 ಪರ್ಸೆಂಟ್‌ ಸರ್ಕಾರ ಆಗುವುದಿಲ್ಲ’ ಎಂದು ಭರವಸೆ ನೀಡಿದರು.

ಶಾಸಕರಾದ ಶಾಮನೂರು ಶಿವಶಂಕರಪ್ಪ, ರಾಜಶೇಖರ ಪಾಟೀಲ, ಮಾಜಿ ಶಾಸಕ ಸಂಗಮೇಶ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಎಸ್‌ಎಸ್‌ಎಂ ಅಭಿಮಾನಿ ಬಳಗದ ಸದಸ್ಯರು ಇದ್ದರು.

ಬಾರದ ಸಿದ್ದರಾಮಯ್ಯ

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಬೇಕಿತ್ತು. ಆದರೆ ಅವರ ಗೈರು ಕಂಡು ಬಂತು.

‘40 ಪರ್ಸೆಂಟ್‌ ಬಗ್ಗೆ ಮತ್ತು ಎಸ್‌ಸಿ, ಎಸ್‌ಟಿ ಮೀಸಲಾತಿ ಬಗ್ಗೆ ಮಹತ್ವದ ಚರ್ಚೆಗೆ ಅಧಿವೇಶನದಲ್ಲಿ ಸ್ಪೀಕರ್‌ ಅವಕಾಶ ಮಾಡಿಕೊಟ್ಟಿದ್ದರಿಂದ ಸಿದ್ದರಾಮಯ್ಯ ಅನಿವಾರ್ಯವಾಗಿ ಚರ್ಚೆಯಲ್ಲಿ ಭಾಗವಹಿಸಬೇಕಿದ್ದರಿಂದ ಅವರು ಬಂದಿಲ್ಲ. ಅವರ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ’ ಎಂದು ಯತೀಂದ್ರ ಸ್ಪಷ್ಟನೆ ನೀಡಿದರು.

ನಿಯಂತ್ರಣಕ್ಕೆ ಹರಸಾಹಸ

ಎಸ್‌ಎಸ್‌ ಮಲ್ಲಿಕಾರ್ಜುನ ಅವರ ಅಭಿಮಾನಿಗಳನ್ನು ನಿಯಂತ್ರಿಸುವುದೇ ಹರಸಾಹಸದ ಕೆಲಸವಾಯಿತು. ವೇದಿಕೆಯಲ್ಲಿ ಅತಿಥಿಗಳೇ ಕಾಣದಷ್ಟು ತುಂಬಿ ಹೋಗಿದ್ದರು. ಕೆಳಗೆ ಹೋಗಲು ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರ ಜತೆಗೆ ದರ್ಶನ್‌ ಅಭಿಮಾನಿಗಳು ವೇದಿಕೆಯ ಮುಂದೆ ಕೇಕೆ ಹಾಕುವುದನ್ನೂ ನಿಯಂತ್ರಿಸುವುದು ಕಷ್ಟವಾಯಿತು. ದರ್ಶನ್‌ ಸಂಜೆ ಬರುತ್ತಾರೆ, ಈಗಲ್ಲ ಅಂದರೂ ಯುವಕರು ಕೇಳಲಿಲ್ಲ.

ಚುನಾವಣಾ ಕಹಳೆ

ಎಸ್‌.ಎಸ್‌. ಮಲ್ಲಿಕಾರ್ಜುನ ಅವರ 55ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದವರೆಲ್ಲ ಮುಂದಿನ ಚುನಾವಣೆಯನ್ನು ಮುಂದಿಟ್ಟುಕೊಂಡೇ ಮಾತನಾಡಿದರು.

l ಮಲ್ಲಿಕಾರ್ಜುನ ಅವರು ಗೆಲ್ಲುವುದಲ್ಲದೇ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ ಎಂಬ ವಿಶ್ವಾಸ ಇದೆ.

– ಯತೀಂದ್ರ ರಾಕೇಶ್‌, ಶಾಸಕ

l ₹ 1 ಕೂಡ ಕಮಿಷನ್‌ ಪಡೆಯದೇ ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡಿಯೂ ಕಳೆದ ಬಾರಿ ಗೆಲ್ಲದ ನೋವು ಮಲ್ಲಿಕಾರ್ಜುನರಲ್ಲಿ ಇದೆ.

–ಎಂ.ಬಿ. ಪಾಟೀಲ, ಶಾಸಕ

l ಮುಂದಿನ ಚುನಾವಣೆಯಲ್ಲಿ ಅತಿಹೆಚ್ಚು ಮತಗಳಿಂದ ಎಸ್‌ಎಸ್‌ಎಂ ಅವರನ್ನು ಗೆಲ್ಲಿಸಿಕೊಂಡು ಬನ್ನಿ.

–ಪಿ.ಟಿ. ಪರಮೇಶ್ವರ ನಾಯ್ಕ್‌, ಶಾಸಕ

l ಕ್ಲಾಕ್‌ ಟವರ್‌ ಮಾಡಿದ್ದು ಎಸ್‌ಎಸ್‌ಎಂ, ಶೆಲ್‌ ಹಾಕಲೂ ಬಿಜೆಪಿಗೆ ಆಗುತ್ತಿಲ್ಲ. ಪಿ.ಬಿ. ರೋಡ್‌ ಸುಂದರಗೊಳಿಸಿದ್ದು ಎಸ್‌ಎಸ್‌ಎಂ, ಬಲ್ಬು ಹೋದರೂ ಬಿಜೆಪಿಗೆ ಬದಲಾಯಿಸಲಾಗುತ್ತಿಲ್ಲ.

–ನಿಕೇತ್‌ರಾಜ್‌ ಮೌರ್ಯ, ಕೆಪಿಸಿಸಿ ವಕ್ತಾರ

l ಕ್ರಿಯಾಶೀಲ ರಾಜಕಾರಣಿ ಮಲ್ಲಿಕಾರ್ಜುನ್ ಸೋತಿದ್ದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ.

–ಎಚ್‌. ಆಂಜನೇಯ, ಮಾಜಿ ಸಚಿವ

l 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ. ಎಸ್ಎಸ್‌ಎಂ ಸಚಿವರಾಗೇ ಆಗುತ್ತಾರೆ.

–ಎಸ್‌. ರಾಮಪ್ಪ, ಶಾಸಕ

l ಜಿಲ್ಲೆಗೆ ನೀರು ನೀಡಿದ ಮಲ್ಲಿಕಾರ್ಜುನ್‌ ಮತ್ತು ಸಚಿವರಾಗುವರು.

–ಕೆ.ಎಸ್‌. ಬಸವಂತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ

l 2023ರ ಚುನಾವಣೆಯ ವಿಜಯೋತ್ಸವಕ್ಕೆ ಇದು ದಿಕ್ಸೂಚಿ.

–ಡಿ.ಜಿ. ಶಾಂತನಗೌಡ, ಮಾಜಿ ಶಾಸಕ

l ಅವರೂ ಗೆದ್ದು, ಉಳಿದವರನ್ನೂ ಗೆಲ್ಲಿಸಿಕೊಂಡು ಬರಲಿ

–ಎಚ್‌.ಪಿ. ರಾಜೇಶ್‌, ಮಾಜಿ ಶಾಸಕ

l 56ನೇ ಜನ್ಮ ದಿನವನ್ನು ಸಚಿವರಾಗಿ ಆಚರಿಸಲಿ

–ತೇಜಸ್ವಿ ಪಟೇಲ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ

l ರಾಜ್ಯ ರಾಜಕಾರಣದ ಅಪರೂಪದ ರಾಜಕಾರಣಿಗಳಲ್ಲಿ ಎಸ್‌ಎಸ್ಎಂ ಒಬ್ಬರು

–ವಿ.ಎಸ್‌. ಉಗ್ರಪ್ಪ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.