ADVERTISEMENT

ಡ್ರ್ಯಾಗನ್‌ ಫ್ರೂಟ್ ಬೆಳೆದು ಯಶ ಕಂಡ ರೈತ

ಕಡಿಮೆ ನೀರಿದ್ದರೂ ಬೆಳೆಯಬಹುದಾದ ಬೆಳೆ

ಡಿ.ಕೆ.ಬಸವರಾಜು
Published 21 ಆಗಸ್ಟ್ 2019, 10:16 IST
Last Updated 21 ಆಗಸ್ಟ್ 2019, 10:16 IST
ದಾವಣಗೆರೆಯ ಸಿದ್ಧನೂರಿನಲ್ಲಿ ಎಸ್.ಎಂ. ಪ್ರಶಾಂತ್ ಅವರು ಬೆಳೆದಿರುವ ಡ್ರ್ಯಾಗನ್ ಫ್ರೂಟ್
ದಾವಣಗೆರೆಯ ಸಿದ್ಧನೂರಿನಲ್ಲಿ ಎಸ್.ಎಂ. ಪ್ರಶಾಂತ್ ಅವರು ಬೆಳೆದಿರುವ ಡ್ರ್ಯಾಗನ್ ಫ್ರೂಟ್   

ದಾವಣಗೆರೆ: ‘ಈ ಭಾಗದಲ್ಲಿ ನೀರಿನ ಅಭಾವ ಇದೆಯಲ್ಲಾ ಸಾರ್‌, ಈ ಬೆಳೆಗೆ 10 ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು. ಹಣ್ಣನ್ನು ವಿಷ ಮಾಡಬಾರದು ಎಂದು ನಾನು ರಾಸಾಯನಿಕ ಗೊಬ್ಬರ ಬಳಸಿಲ್ಲ...’

ದಾವಣಗೆರೆ ತಾಲ್ಲೂಕಿನ ಆನಗೋಡು ಹೋಬಳಿಯ ಸಿದ್ಧನೂರಿನ ರೈತ ಪ್ರಶಾಂತ್ ಅವರ ಮಾತುಗಳಿವು. ಒಂದು ಎಕರೆಯಲ್ಲಿ ವಿದೇಶಿ ಬೆಳೆ ಡ್ರ್ಯಾಗನ್ ಫ್ರೂಟ್ ಅನ್ನು ಬೆಳೆದು ಯಶಸ್ಸು ಕಂಡಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಗೆ ಹೋದಾಗ ಈ ಹಣ್ಣನ್ನು ಕಂಡ ಪ್ರಶಾಂತ್ ದಾವಣಗೆರೆಯಲ್ಲೂ ಏಕೆ ಬೆಳೆಯಬಾರದು ಅಂದುಕೊಂಡರು. ಅಷ್ಟೇ ಅಲ್ಲ ಅದನ್ನು ಬೆಳೆದು ತೋರಿಸಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಹಾಯಧನವೂ ಇವರ ನೆರವಿಗೆ ಬಂತು.

ADVERTISEMENT

ಜೀವಾಮೃತದಿಂದ ಭರ್ಜರಿ ಫಸಲು:

‘ಹಣ್ಣನ್ನು ವಿಷ ಮಾಡಬಾರದು ಎಂದು ನಾನು ರಾಸಾಯನಿಕ ಗೊಬ್ಬರ ಬಳಸಲಿಲ್ಲ. ಜೀವಾಮೃತ ತಯಾರಿಸಿ ಅದನ್ನೇ ಹಾಕಿದೆ. ಸಂಪೂರ್ಣವಾಗಿ ಆರ್ಗ್ಯಾನಿಕ್ ಪದ್ಧತಿ ಅನುಸರಿಸಿದೆ. ಇದರ ಬಗ್ಗೆ ನನಗೆ ತಿಳಿದಿರಲಿಲ್ಲ. ಅಧಿಕಾರಿಗಳು ಬಂದು ಸಲಹೆ ನೀಡಿದ ಮೇಲೆ ಅದರ ಮಹತ್ವ ಅರಿತುಕೊಂಡೆ. ನಿಜವಾಗಿಯೂ ಜೀವಾಮೃತ ಒಳ್ಳೆಯದು. ಬೆಳೆ ಚೆನ್ನಾಗಿ ಬಂದಿದೆ. ಹಣ್ಣಿನ ಕಾಂಡಾ ವಿಸ್ತಾರವಾಗಿ ಬಂದಿದೆ. ಭರ್ಜರಿ ಫಸಲು ಬರುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಪ್ರಶಾಂತ್.

‘ಒಂದು ಕೆ.ಜಿ ಡ್ರ್ಯಾಗನ್ ಫ್ರೂಟ್‌ಗೆ ಪ್ರಸ್ತುತ ₹ 240 ಇದೆ. ಫಸಲು ಉತ್ತಮವಾಗಿ ಬಂದರೆ ಒಂದು ಹಣ್ಣು 700 ಗ್ರಾಂವರೆಗೂ ಬರುತ್ತದೆ. ಉತ್ತಮ ಲಾಭ ಪಡೆಯಬಹುದು. 25ರಿಂದ 30 ವರ್ಷದವರೆಗೂ ಹಣ್ಣು ಬರುತ್ತದೆ. ಸಸಿ ನೆಟ್ಟ 8 ತಿಂಗಳಿಗೆ ಹೂವು ಬಿಡುತ್ತದೆ. ಮೇ ತಿಂಗಳಿಂದ ಸೆಪ್ಟೆಂಬರ್‌ವರೆಗೂ ಹೂವು ಬಿಡುವ ಸಮಯ. ಹೂವು ಬಂದ 40 ದಿನಗಳಿಗೆ ಹಣ್ಣು ಬಿಡುತ್ತದೆ. ನಂತರ ಕಟಾವು ಮಾಡಬಹುದು. ಸೆಪ್ಟೆಂಬರ್‌ನಿಂದ ಮೇವರೆಗೆ ವಿಶ್ರಾಂತಿ ಸಮಯ. ಈ ಸಮಯದಲ್ಲಿ ಜೀವಾಮೃತ ಕೊಟ್ಟು ಉಪಚಾರ ಮಾಡಿದರೆ ಉತ್ತಮ ಫಸಲು ಪಡೆಯಬಹುದು’ ಎಂದು ಹೇಳುತ್ತಾರೆ.

ಔಷಧೀಯ ಗುಣ:

‘ಡ್ರ್ಯಾಗನ್ ಫ್ರೂಟ್‌ನಲ್ಲಿ ಮೀನಿನಲ್ಲಿ ಇರುವ ಒಮೆಗಾ–3, ಒಮೆಗಾ–6 ಅಂಶ ಸಿಗುತ್ತದೆ. ಔಷಧೀಯ ಗುಣವುಳ್ಳ ಹಣ್ಣು ಇದಾಗಿದೆ. ಮಧುಮೇಹ, ಧಿಕ ರಕ್ತದೊತ್ತಡವನ್ನು (ಬಿಪಿ) ಇದರಿಂದ ನಿಯಂತ್ರಿಸಬಹುದು. ಗರ್ಭಿಣಿಯರಿಗಂತೂ ಇದು ಉತ್ತಮ ಹಣ್ಣು. ಮಹಾರಾಷ್ಟ್ರದಲ್ಲಿ ವೈದ್ಯರೇ ಈ ಹಣ್ಣು ತಿನ್ನುವಂತೆ ಸಲಹೆ ನೀಡುತ್ತಾರೆ’ ಎಂದು ಹೇಳುತ್ತಾರೆ ಪ್ರಶಾಂತ್‌.

₹ 40 ಸಾವಿರ ಸಬ್ಸಿಡಿ:

‘ಡ್ರ್ಯಾಗನ್ ಫ್ರೂಟ್‌ ಬೆಳೆಯುವವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಎಕರೆಗೆ ₹ 40 ಸಾವಿರದವರೆಗೂ ‍ಪ್ರೋತ್ಸಾಹ ಧನ ಸಿಗುತ್ತದೆ. ಪ್ರಶಾಂತ್ ಅವರು ₹ 3 ಲಕ್ಷ ವೆಚ್ಚದಲ್ಲಿ ಹನಿ ನಿರಾವರಿ ಅಳವಡಿಸಿಕೊಂಡು ಹಣ್ಣನ್ನು ಬೆಳೆದಿದ್ದಾರೆ’ ಎಂದು ಹೇಳುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿ ವಿಜಯ್‌ಕುಮಾರ್ ಹಾಗೂ ವಿಷಯ ತಜ್ಞೆ ಅಪೂರ್ವ.

‘ಈ ಹಣ್ಣನ್ನು ಬೆಳೆದವರು ಎರಡು ವರ್ಷಗಳಿಗೆ ಹೆಚ್ಚಿನ ಆದಾಯ ಪಡೆಯಬಹುದು. ಸ್ಥಳೀಯವಾಗಿಯೂ ಉತ್ತಮ ಮಾರುಕಟ್ಟೆ ಇದೆ. ಒಂದು ಹಣ್ಣಿಗೆ ₹ 100 ಬೆಲೆ ಬರುತ್ತದೆ. ಒಂದು ಗಿಡಕ್ಕೆ 2ರಿಂದ 3 ಕೆ.ಜಿ ಹಣ್ಣು ಬೆಳೆಯಬಹುದು. ಜೀವಾಮೃತ ಹಾಗೂ ಕೋಳಿ ಗೊಬ್ಬರ ಬಳಕೆಯಿಂದ ಹೂವು ಚೆನ್ನಾಗಿ ಬರುತ್ತದೆ. ಈ ಹಣ್ಣನ್ನು ಮಿಶ್ರ ಬೆಳೆಯಾಗಿ ಬೆಳೆಯದೇ ಏಕ ಬೆಳೆಯಾಗಿ ಬೆಳೆಯಬೇಕು. ಈ ಹಣ್ಣಿಗೆ ಬೆಳಕು ಬೇಕು’ ಎಂದು ಅವರು ಸಲಹೆ ನೀಡಿದರು.

‘ಹೆಚ್ಚಿನ ಖರ್ಚು ಇರುವುದರಿಂದ ರೈತರು ಮುಂದೆ ಬರುತ್ತಿಲ್ಲ. ಆದರೆ, ಒಂದು ಸಲ ಬೆಳೆದರೆ ಅನೇಕ ವರ್ಷಗಳ ಕಾಲ ಹಣ್ಣು ಬರುತ್ತದೆ. ಮಾರುಕಟ್ಟೆಯಲ್ಲೂ ಹಣ್ಣಿಗೆ ಹೆಚ್ಚು ಬೇಡಿಕೆ ಇದೆ’ ಎಂದು ಹೇಳಿದರು.

ಮಾಹಿತಿಗೆ: 8618467645 ಸಂಪರ್ಕಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.