ADVERTISEMENT

ಕನ್ನಡ ಭಾಷೆ ಶ್ರೀಮಂತಗೊಳಿಸಿ

ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 2:58 IST
Last Updated 6 ಏಪ್ರಿಲ್ 2021, 2:58 IST
ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಬರವಣಿಗೆಯಲ್ಲಿ ‘ಸರಿಗನ್ನಡ’ ಅಭಿಯಾನ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಪೆ.ನಾ. ಗೋಪಾಲರಾವ್ ಹಾಗೂ ಯಳನಾಡು ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಬರವಣಿಗೆಯಲ್ಲಿ ‘ಸರಿಗನ್ನಡ’ ಅಭಿಯಾನ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಪೆ.ನಾ. ಗೋಪಾಲರಾವ್ ಹಾಗೂ ಯಳನಾಡು ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಒಂದು ಭಾಷೆ ಶ್ರೀಮಂತವಾದರೆ ನಾವೂ ಶ್ರೀಮಂತರಾಗುತ್ತೇವೆ. ಅದು ಸರಿಯಾದರೆ ನಾವು ಸರಿಹೋಗುತ್ತೇವೆ. ‘ಸರಿಗನ್ನಡ’ ಎಂದರೆ ನಾವು ಸರಿಯಾದರೆ ಸಾಲದು. ಭಾಷೆಯನ್ನು ಸರಿಮಾಡಬೇಕು ಎಂದು ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟರು.

ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಇಲ್ಲಿನ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬರವಣಿಗೆಯಲ್ಲಿ ‘ಸರಿಗನ್ನಡ’ ಅಭಿಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಪುರಂದರದಾಸ, ಕನಕದಾಸ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರೆಲ್ಲಾ ಸರಿಯಾದ ಭಾಷೆಯನ್ನು ಬರೆದು ಜನರನ್ನು ಸರಿಯಾದ ದಾರಿಗೆ ತಂದರು’ ಎಂದು ಹೇಳಿದರು.

ADVERTISEMENT

‘ಎರಡು ಸಾವಿರ ವರ್ಷಗಳ ಹಿಂದೆಯೇ ನಮ್ಮ ಕನ್ನಡ ಕಾವ್ಯ ಚೆನ್ನಾಗಿತ್ತು. ಅವರ‍್ಯಾರು ತರಗತಿಗಳಲ್ಲಿ ಕಲಿತವರಲ್ಲ. ಅಕ್ಷರಗಳನ್ನು ಕಲಿತವರಷ್ಟೇ ಜಾಣರಲ್ಲ. ಅಕ್ಷರ ಜ್ಞಾನದಿಂದ ಜಾಣತನವನ್ನು ಅಳೆಯುವುದಲ್ಲ. ಬದಲಾಗಿ ಅವರ ಬದುಕಿನ ಮೌಲ್ಯಗಳ ಆಧಾರದ ಮೇಲೆ ಹೇಳಬೇಕು. ಹಿಂದಿನವರು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ವ್ಯಾಖ್ಯಾನಿಸಿದರು.

‘ಪಂಪ, ರನ್ನ ಅವರು ಸರಸ್ವತಿಯ ಭಂಡಾರವನ್ನು ಒಡೆದ ಕವಿಗಳು, ಬ್ಯಾಂಕ್‌ಗಳಿಗೆ ಕನ್ನ ಹಾಕಿದರೆ ಹಣ ಖರ್ಚಾಗುತ್ತದೆ. ಆದರೆ ವಿದ್ಯೆ ಖರ್ಚು ಮಾಡಿದಷ್ಟೂ ಜಾಸ್ತಿಯಾಗುತ್ತದೆ. ಬಸವಣ್ಣ, ಕುವೆಂಪು, ದ.ರಾ. ಬೇಂದ್ರೆ ಅವರೆಲ್ಲಾ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ಹೇಳಿದರು.

‘ಭಾಷೆ ಮನುಷ್ಯನ ಮನಸ್ಸನ್ನು ಸಂವಹನ ಮಾಡಲು, ಜ್ಞಾನವನ್ನು ಇನ್ನೊಂದು ಪೀಳಿಗೆಗೆ ಕಳುಹಿಸಲು ಇರುವ ಕೊಡುಗೆ. ಕಾಲಕಾಲಕ್ಕೆ ಭಾಷೆ ಬದಲಾವಣೆಯಾಗುತ್ತಿರುತ್ತದೆ. ಕನ್ನಡ ಸರಿಗನ್ನಡವಾಗಬೇಕಾದರೆ ವರ್ಣಮಾಲೆಯನ್ನು ಚೆನ್ನಾಗಿ ಕಲಿತಿರಬೇಕು. ಕನ್ನಡ ವರ್ಣಮಾಲೆ ವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಅರಮನೆ, ಗುರುಮನೆಗಳಲ್ಲಿ ಬೆಳೆದ ಶ್ರೀಮಂತ ಭಾಷೆ’ ಎಂದು ಶ್ಲಾಘಿಸಿದರು.

ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಬೆಂಗಳೂರಿನಲ್ಲಿ ಶೇ 23ರಷ್ಟು ಮಾತ್ರ ಕನ್ನಡ ಮಾತನಾಡುತ್ತಿದ್ದು, ಬೇರೆ ಭಾಷೆಯನ್ನು ಕಲಿಯಲು ನಮ್ಮ ವಿರೋಧವಿಲ್ಲ. ಆದರೆ ಬಳಸಬೇಕಾದ ಭಾಷೆ ಮಾತ್ರ ಕನ್ನಡವಾಗಬೇಕು. ಕನ್ನಡ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು, ಭಾಷೆಯಲ್ಲಿ ದೃಢತೆ ಹಾಗೂ ಶಕ್ತಿ ಇದೆ. ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಶ್ರೀಮಂತಗೊಳಿಸಬೇಕು’ ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ ‘ದ್ರಾವಿಡ ಭಾಷೆಗಳಲ್ಲಿ ಅತಿ ಹೆಚ್ಚು ಪದ ಸಂಪತ್ತುಗಳಿರುವುದು ಕನ್ನಡ ಹಾಗೂ ತೆಲುಗಿನಲ್ಲಿ. ಕನ್ನಡ ಭಾಷೆಯ ಪದ ಸಂಪತ್ತನ್ನು ಚೆನ್ನಾಗಿ ಬಳಸಿಕೊಳ್ಳದಿದ್ದರೆ ಭಾಷೆ ಸೊರಗುತ್ತದೆ’ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಭಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಟೋಲ್‌ಗಳಲ್ಲಿ ಪತ್ರಕರ್ತರ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಕನ್ನಡ ಮತ್ತು ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ‘ಡಿ’ಸೌಜ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಚಂದ್ರಣ್ಣ ಇದ್ದರು. ಪತ್ರಕರ್ತರಾದ ಪೆ.ನಾ. ಗೋಪಾಲರಾವ್, ಯಳನಾಡು ಮಂಜುನಾಥ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಇ.ಎಂ.ಮಂಜುನಾಥ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.