ADVERTISEMENT

ಪಾಲಿಕೆ ಚುನಾವಣೆ ಮುಂದೂಡಿಕೆ ಭೀತಿ

ಮೀಸಲಾತಿ ನಿಗದಿ ಅಸಮರ್ಪಕ: ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ ಜಯಣ್ಣ

ಬಾಲಕೃಷ್ಣ ಪಿ.ಎಚ್‌
Published 2 ನವೆಂಬರ್ 2019, 14:59 IST
Last Updated 2 ನವೆಂಬರ್ 2019, 14:59 IST
ಎಚ್‌. ಜಯಣ್ಣ
ಎಚ್‌. ಜಯಣ್ಣ   

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಗೆ ಕಾರ್ಮೋಡ ಕವಿಯುವ ಭೀತಿ ಎದುರಾಗಿದೆ. ಚುನಾವಣೆಗೆ ತಡೆ ನೀಡಬೇಕು ಎಂದು ಎಚ್‌. ಜಯಣ್ಣ ಹೈಕೋರ್ಟ್‌ಗೆ ಅಪೀಲು ಹೋಗಿರುವುದೇ ಇದಕ್ಕೆ ಕಾರಣ.

6ನೇ ವಾರ್ಡ್‌ ಆಗಿದ್ದ ಅಹ್ಮದ್‌ನಗರ ವಾರ್ಡ್‌ಗೆ 2007ರಲ್ಲಿ ಬಿಸಿಎಂ (ಎ) ಮೀಸಲಾತಿ ನಿಗದಿ ಮಾಡಲಾಗಿತ್ತು. 2013ರಲ್ಲಿ ಎಸ್‌ಸಿಗೆ ಮೀಸಲಾದರೂ ಅದರಂತೆ ಚುನಾವಣೆ ನಡೆಯಲಿಲ್ಲ. ಹಿಂದಿನ ಮೀಸಲಾತಿಯಂತೆ ಚುನಾವಣೆ ನಡೆಸಲು ಕೋರ್ಟ್‌ ಆದೇಶ ನೀಡಿತು. 2017ರಲ್ಲಿ ದಾವಣಗೆರೆ ಪಾಲಿಕೆಯ 41 ವಾರ್ಡ್‌ಗಳನ್ನು 45ಕ್ಕೆ ಹೆಚ್ಚಿಸಲಾಯಿತು. ಅಹ್ಮದ್‌ನಗರ 12ನೇ ವಾರ್ಡ್‌ ಆಯಿತು. ಆದರೆ ಮೀಸಲಾತಿ ಮಾತ್ರ ಎಸ್‌ಸಿಗೆ ಬಂದಿಲ್ಲ. ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ವಾರ್ಡ್‌ನಲ್ಲಿ ಮುಸ್ಲಿಮರು ಮೊದಲ ಸ್ಥಾನದಲ್ಲಿದ್ದರೆ, ಎಸ್‌ಸಿ ಸಮುದಾಯ ಎರಡನೇ ಸ್ಥಾನದಲ್ಲಿದೆ. ಮುಸ್ಲಿಮರಿಗೆ ಅವಕಾಶ ಸಿಕ್ಕಿದೆ. ರೊಟೇಶನ್‌ ಮಾದರಿಯಲ್ಲಿ ಮೀಸಲಾತಿ ಪುನರ್‌ನಿಗದಿ ಮಾಡಿ ಎಂದು ಅಹ್ಮದ್‌ನಗರದ ಎಚ್‌. ಜಯಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪಾಲಿಕೆಯ ಪರ ವಾದ ಮಂಡಿಸಿದ್ದ ಸರ್ಕಾರಿ ವಕೀಲರು ಪಾಲಿಕೆಯ ಎಲ್ಲ ವಾರ್ಡ್‌ಗಳನ್ನು ಪುನರ್‌ವಿಂಗಡಣೆ ಮಾಡಲಾಗಿದೆ ಎಂದು ತಿಳಿಸಿದ್ದರು. ಪುನರ್‌ವಿಂಗಡಣೆ ಆಗಿರುವುದರಿಂದ ಈ ಪ್ರಕರಣವನ್ನು ವಿಲೇ ಮಾಡಲಾಗಿದೆ ಎಂದು ಹೈಕೋರ್ಟ್‌ ತಿಳಿಸಿತ್ತು.

ADVERTISEMENT

ಎಲ್ಲ ವಾರ್ಡ್‌ಗಳನ್ನು ಪುನರ್‌ವಿಂಗಡಣೆ ಮಾಡಿಲ್ಲ. ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ವಾರ್ಡ್‌ಗಳನ್ನು ಹಾಗೂ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ವಾರ್ಡ್‌ಗಳನ್ನಷ್ಟೇ ವಿಭಜಿಸಲಾಗಿದೆ. ಈ ನಾಲ್ಕು ವಾರ್ಡ್‌ಗಳು ಎಂಟಾಗಿವೆ. ಹೀಗಾಗಿ ಚುನಾವಣೆಗೆ ತಡೆಯಾಜ್ಞೆ ನೀಡಬೇಕು. ರೊಟೇಶನ್‌ ಮಾದರಿಯಲ್ಲಿ ಮೀಸಲಾತಿ ನಿಗದಿ ಮಾಡಿದ ಬಳಿಕವೇ ಚುನಾವಣೆ ನಡೆಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಹೈಕೋರ್ಟ್‌ ವಿಭಾಗೀಯ ಪೀಠವು ನ.5ಕ್ಕೆ ಇದರ ವಿಚಾರಣೆಯನ್ನು ನಿಗದಿಪಡಿಸಿದೆ. ಹೈಕೋರ್ಟ್‌ ಅರ್ಜಿಯನ್ನು ವಜಾ ಮಾಡಿದರೆ ಚುನಾವಣೆ ನಿಗದಿಪಡಿಸಿದಂತೆ ನಡೆಯಲಿದೆ. ಪುರಸ್ಕರಿಸಿದರೆ ಚುನಾವಣೆ ಮುಂದಕ್ಕೆ ಹೋಗಲಿದೆ.

ಹೈಕೋರ್ಟ್‌ಗೆ ಮತ್ತೆ ಅಪೀಲು ಮಾಡಿರುವ ಬಗ್ಗೆ ಪ್ರತಿಕ್ರಿಯೆಗಾಗಿ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಅವರನ್ನು ಸಂಪರ್ಕಿಸಿದಾಗ, ‘ಈ ಬಗ್ಗೆ ಮಾಹಿತಿ ಇಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.