ADVERTISEMENT

ದಾವಣಗೆರೆ | ನಿಮ್ಮೊಳಗಿನ ಕಲಾವಿದನನ್ನು ಗುರುತಿಸಿ

ವಿದ್ಯಾರ್ಥಿಗಳಿಗೆ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:18 IST
Last Updated 26 ಜೂನ್ 2022, 4:18 IST
ದಾವಣಗೆರೆಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿವತಿಯಿಂದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶೃಂಗ–2ಕೆ22 ಕಾರ್ಯಕ್ರಮವನ್ನು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹಾಗೂ ಅಚಲಚಂದ್ ಜೈನ್  ಉದ್ಘಾಟಿಸಿದರು. ಕಾರ್ಯಕ್ರಮದ ಸಂಚಾಲಕ ರಾಹುಲ್ ಪಾಟೀಲ್, ಪ್ರಾಂಶುಪಾಲರಾದ ಗಣೇಶ್, ಕಲಾವಿದ ಆರ್.ಟಿ.ಅರುಣ್‌ಕುಮಾರ್ ಇದ್ದರು.
ದಾವಣಗೆರೆಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿವತಿಯಿಂದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶೃಂಗ–2ಕೆ22 ಕಾರ್ಯಕ್ರಮವನ್ನು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹಾಗೂ ಅಚಲಚಂದ್ ಜೈನ್  ಉದ್ಘಾಟಿಸಿದರು. ಕಾರ್ಯಕ್ರಮದ ಸಂಚಾಲಕ ರಾಹುಲ್ ಪಾಟೀಲ್, ಪ್ರಾಂಶುಪಾಲರಾದ ಗಣೇಶ್, ಕಲಾವಿದ ಆರ್.ಟಿ.ಅರುಣ್‌ಕುಮಾರ್ ಇದ್ದರು.   

ದಾವಣಗೆರೆ: ಕಲೆ ಎಲ್ಲರ ಹೃದಯದಲ್ಲಿ ಇದೆ. ಎಲ್ಲರಲ್ಲೂ ಒಬೊಬ್ಬ ಕಲಾವಿದ ಇದ್ದಾನೆ. ಅದನ್ನು ಗುರುತಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

ದಾವಣಗೆರೆಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿವತಿಯಿಂದ ಇಲ್ಲಿನ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶೃಂಗ–2ಕೆ22 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೀವನದಲ್ಲಿ ಏನೆಲ್ಲಾ ಆಗಬಹುದೋ ಅವುಗಳೆಲ್ಲವನ್ನೂ ರಂಗಭೂಮಿ ವೇದಿಕೆಯಲ್ಲಿ ಮಾಡುತ್ತೇವೆ. ಬಣ್ಣ ಹಚ್ಚಿದರೆ ಮಾತ್ರ ಕಲಾವಿದರಾಗುವುದಿಲ್ಲ. ಮಾತನಾಡುವುದು, ನೋಡುವುದು, ಬಟ್ಟೆ ತೊಡುವುದು, ಹಾಡುವುದು, ಕಲಿಕೆ ಎಲ್ಲವೂ ಒಂದು ಕಲೆಯೇ. ಅದನ್ನು ಗುರುತಿಸಬೇಕು. ನಮ್ಮನ್ನು ಯಾರೂ ಗುರುತಿಸುವುದಿಲ್ಲ. ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ನಾನು ಯಾವ ಕಾಲೇಜು ಮೆಟ್ಟಿಲನ್ನೂ ಹತ್ತಿಲ್ಲ. ಆದರೆ ನನ್ನ ಚೌಡಿಕೆ ಪದಗಳು ನನ್ನನ್ನು ನೂರಾರು ಕಾಲೇಜು ಮೆಟ್ಟಿಲುಗಳನ್ನು ಹತ್ತಿಸಿವೆ. ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ನನ್ನ ಜೀವನ ಚರಿತ್ರೆಯನ್ನು ಸಾವಿರಾರು ಮಕ್ಕಳು ಓದಿದ್ದಾರೆ. ಗುಲಬರ್ಗಾ ಮೈಸೂರು, ರಾಯಚೂರು ವಿಶ್ವವಿದ್ಯಾಲಯಗಳಲ್ಲಿ ನನ್ನ ಜೀವನ ಚರಿತ್ರೆಯನ್ನು ಪಠ್ಯವನ್ನಾಗಿ ಅಳವಡಿಸಲಾಗಿದೆ. ಕಾಲೇಜು ಮೆಟ್ಟಿಲು ಹತ್ತದ ನನ್ನ ಪಠ್ಯವನ್ನು ಲಕ್ಷಾಂತರ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಓದುತ್ತಿದ್ದಾರೆ ಎಂದರೆ ಅದು ಕಲೆಗಿರುವ ಶಕ್ತಿ’ ಎಂದರು.

‘ಮುಂದೆ ಹೆಜ್ಜೆ ಇಡಿ, ಹಿಂದೆ ಇಡಬೇಡಿ, ಅನುತ್ತೀರ್ಣರಾದವರು ಧೃತಿಗೆಡಬೇಕಿಲ್ಲ. ಜೀವನದಲ್ಲಿ ಸೋಲನ್ನು ಅನುಭವಿಸಬೇಕು. ಕಷ್ಟಗಳನ್ನು ಅನುಭವಿಸಿದರೆ ಮುಂದೆ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಒಂದೊಂದೇ ಮೆಟ್ಟಿಲನ್ನು ಹತ್ತುತ್ತಾ ಹೋಗಬೇಕು. ಕಷ್ಟಗಳನ್ನು ಸಹಿಸಿಕೊಳ್ಳುತ್ತಾ ಮುಂದೆ ಸಾಗಬೇಕು. ಆದರೆ ನಾವು ಬಂದ ದಾರಿಯನ್ನು ಮರೆಯಬಾರದು’ ಎಂದು ಸಲಹೆ ನೀಡಿದರು.

ಗುರುವಿಗೆ ಕಪಾಳ ಮೋಕ್ಷ ಮಾಡಿ ಕಷ್ಟ ಅನುಭವಿಸಿದೆ:‘ತಂದೆ–ತಾಯಿ ಹಾಗೂ ಗುರುಗಳನ್ನು ನಿಮ್ಮ ಕೊನೆಯ ಉಸಿರು ಇರುವವರೆಗೂ ಮರೆಯಬಾರದು. ಹಿಂದೊಮ್ಮೆ ಗುರುವಿಗೆ ಕಪಾಳ ಮೋಕ್ಷ ಮಾಡಿ ಅವರನ್ನು ಬಿಟ್ಟು ಬಂದೆ. ಬೇರೊಬ್ಬ ಗುರುವಿನ ಜೊತೆಯಲ್ಲಿದ್ದಾಗ ಒಬ್ಬರ ಸಹವಾಸ ಮಾಡಿ ಹಣ ಕಳೆದುಕೊಂಡು ಬೀದಿ ಪಾಲಾದೆ. ಆ ಬಳಿಕ ಕಪಾಳಮೋಕ್ಷ ಮಾಡಿದ ಕ್ಷಮೆ ಕೇಳಿ ಅವರ ಬಳಿ ಸೇರಿಕೊಂಡೆ. ಗುರುವಿಗೆ ಹೊಡೆದ ಆ ಹೊಡೆತ ಇಡೀ ಬದುಕನ್ನೇ ಹಾಳುತು’ ಎಂದು ಸ್ಮರಿಸಿಕೊಂಡರು.

ಜೈನ್‌ ಇನ್‌ಸ್ಟಿಟ್ಯೂಟ್ ಟೆಕ್ನಾಲಜಿ ಅಧ್ಯಕ್ಷ ಅಚಲ್‌ಚಂದ್ ಜೈನ್, ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್‌ ಡಿ.ಬಿ., ಶೃಂಗ ಕಾರ್ಯಕ್ರಮದ ಸಂಚಾಲಕರಾದ ಡಾ.ರಾಹುಲ್ ಪಾಟೀಲ್, ಶ್ವೇತಾ, ಮೇಘನಾ ಇದ್ದರು.

ಕಣ್ಣೀರಿಟ್ಟ ಜೋಗತಿ
ತಮ್ಮ ಬಾಲ್ಯದ ದಿನಗಳಲ್ಲಿ ನಡೆದ ಕಹಿ ಘಟನೆಯನ್ನು ನೆನಪಿಸಿಕೊಂಡ ಮಂಜಮ್ಮ ಜೋಗತಿ ಕಣ್ಣೀರಿಟ್ಟರು.

‘ನಮ್ಮ ತಂದೆ ಕುಕ್ಕುವಾಡ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಹಿರಿಯೂರು,ಹರಿಹರ, ಕೆ.ಟಿ.ಜೆ. ನಗರಗಳಲ್ಲಿದಿನಗಳನ್ನುಕಳೆದೆ.ಹೈಸ್ಕೂಲ್ಮೈದಾನದಲ್ಲಿ6ಮಂದಿಕುಡುಕರುನನ್ನಮೇಲೆದೌರ್ಜನ್ಯವೆಸಗಿದರುಎಂದುಕಣ್ಣೀರಿಟ್ಟರು. ಫುಟ್ಬಾಲ್ ರೀತಿಯಲ್ಲಿ ನನ್ನನ್ನು ಚೆಂಡಾಡಿದರು. ಆ ಗಾಯವನ್ನು ಅಳಿಸಲು ಸಾಧ್ಯವಾಗುತ್ತಿಲ್ಲ. ಪದ್ಮಶ್ರೀ ಪ್ರಶಸ್ತಿ ಬಂದರೂ ಹಿಂದಿನ ದಾರಿ ಮರೆಯುವುದಿಲ್ಲ. ಈ ಪ್ರಶಸ್ತಿ, ಕರುನಾಡ ಜನರಿಗೆ, ನನ್ನ ಕಲೆಗೆ ಸಂದ ಪ್ರಶಸ್ತಿ’ಎಂದರು.

‘ಅರುಣ’ರಾಗಕ್ಕೆ ವಿದ್ಯಾರ್ಥಿಗಳು ಫಿದಾ
ಕಲಾವಿದ ಆರ್.ಟಿ. ಅರುಣ್‌ಕುಮಾರ್ ತಮ್ಮ ಕಂಠದಲ್ಲೇ ಸಂಗೀತದ ವಿವಿಧ ರಾಗಗಳನ್ನು ಅನುಕರಣೆ ಮಾಡಿ ವಿದ್ಯಾರ್ಥಿಗಳ ಮನಗೆದ್ದರು.

ಆರಂಭದಲ್ಲಿ ತಮ್ಮ ಕಂಠದಿಂದ ಬುಲೆಟ್ ಬೈಕ್, ಜೀಪ್‌, ಏರೋಪ್ಲೇನ್‌ಗಳ ಶಬ್ದ ಹೊರಡಿಸಿದರು. ಬಳಿಕ ವಿವಿಧ ಟ್ಯೂನ್‌ಗಳನ್ನು ತಮ್ಮ ಕಂಠಸಿರಿಯಲ್ಲಿ ಮೊಳಗಿಸಿದರು. ಬಳಿಕ ಮಂಜಮ್ಮ ಜೋಗತಿ ಅವರು ಹಾಡಿದ ಚೌಡಿಕೆ ಪದಗಳಿಗೂ ಸಂಗೀತವಾದರು. ವಿದ್ಯಾರ್ಥಿಗಳು ಶಿಳ್ಳೆ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಬಳಿಕ ಅವರು ಜೀವನದಲ್ಲಿ ಅನುಭವಿಸಿದ ಸಂಕಷ್ಟಗಳನ್ನು ವಿವರಿಸಿದರು. ‘ನನಗೆ ಅಪಘಾತವಾದಾಗ ಸ್ನೇಹಿತರು ನನ್ನ ನೆರವಿಗೆ ಬಂದರು. 10 ವರ್ಷಗಳ ಕಾಲ ಕ್ಯಾನ್ಸರ್‌ಗೆ ಅನ್ನು ಗೆದ್ದು ಬಂದೆ’ ಎಂದು ಅರುಣ್‌ಕುಮಾರ್ ಹೇಳಿದರು.

‘ಸಿನಿಮಾ ನಾಯಕರನ್ನು ಅನುಕರಿಸುವ ಬದಲು ನಿಜವಾದ ನಾಯಕರಾಗಬೇಕು. ಬೇರೆ ಸ್ಟಾರ್‌ಗಳನ್ನು ಕರೆಸಿ ಖುಷಿಪಡುವ ಬದಲು ನೀವೆ ಸ್ಟಾರ್‌ಗಳಾಗಿ, ನೀವೆ ಟ್ಯೂನ್ ಹಾಕಿ, ನೃತ್ಯ ಮಾಡಿ. ಹೊಸ ಹೊಸ ವಿಷಯಗಳನ್ನು ಕಲಿಯಬೇಕು. ನಿಮ್ಮಲ್ಲೂ ನಾಯಕರು ಇದ್ದಾರೆ ಅವರನ್ನು ಪ್ರೋತ್ಸಾಹಿಸಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.