ದಾವಣಗೆರೆ: ದೇಶದಲ್ಲಿ ಪ್ರತಿದಿನಕ್ಕೆ 600 ಹೆಣ್ಣು ಭ್ರೂಣಗಳ ಹತ್ಯೆಯಾಗುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಗಂಡುಮಕ್ಕಳಿಗೆ ಮದುವೆಯಾಗಲು ಹುಡುಗಿ ಸಿಗದೇ ಒಂದೊಂದು ಹುಡುಗಿಯನ್ನು ನಾಲ್ಕೈದು ಮಂದಿ ಮದುವೆಯಾಗಬೇಕಾದ ದಿನ ಬರುತ್ತದೆ. ಹುಡುಗಿಯರೆಲ್ಲ ದ್ರೌಪದಿಯರಾಗಬೇಕಾಗುತ್ತದೆ ಎಂದು ಉಪನ್ಯಾಸಕಿ ಸುಮತಿ ಜಯಪ್ಪ ಹೇಳಿದರು.
ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಮಹಿಳಾ ಘಟಕವು ಭಾನುವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಹೆಣ್ಣು ಹುಟ್ಟುವ ಮೊದಲೇ ಅಂದರೆ ಹೊಟ್ಟೆಯಲ್ಲಿ ಇರುವಾಗಲೇ ಹೆಣ್ಣುಮಗು ಸವಾಲು ಎದುರಿಸಬೇಕಾಗುತ್ತದೆ. ಅಲ್ಲಿಂದ ಸಮಾಧಿಯವರೆಗೂ ಹೋರಾಟವೇ ಬದುಕಾಗುತ್ತದೆ. ಗಂಡಿನಂತೆ ಹೆಣ್ಣು ಕೂಡ ವಂಶೋದ್ಧಾರಕಿ ಎಂದು ತಿಳಿಯುವುದು ಅವಶ್ಯಕ. ಆದರೆ ಗಂಡು ದೊರೆ, ಹೆಣ್ಣು ಹೊರೆ ಎಂಬ ಭಾವವೇ ಅನೇಕರಲ್ಲಿ ಇಂದಿಗೂ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಜಗದ ಕಣ್ಣು. ಪುರುಷ ಏರಿದ ಎತ್ತರವನ್ನು ಈಗ ಏರಿದ್ದಾಳೆ. ಎಲ್ಲ ಸವಾಲನ್ನು ಸ್ವೀಕರಿಸಲು ಸಿದ್ಧಳಾಗಿದ್ದಾಳೆ. ಆದರೂ ಮಹಿಳೆ ಮತ್ತು ಪುರುಷರ ಮಧ್ಯೆ ಲಿಂಗಭೇದ ಮಾಡಲಾಗುತ್ತಿದೆ. ಮಹಿಳೆಯನ್ನು ನಿಯಂತ್ರಿಸಲಾಗುತ್ತದೆ. ಪುರುಷನಿಗೆ ಪೂರ್ಣ ಸ್ವಾತಂತ್ರ್ಯ ಕೊಡಲಾಗುತ್ತಿದೆ ಎಂದು ವಿಷಾದ ಪಡಿಸಿದರು.
ಸಂಸ್ಕಾರವನ್ನು ಹೆಣ್ಣುಮಗುವಿಗಷ್ಟೇ ಹೇಳಿ, ಗಂಡು ಮಗುವನ್ನು ಬೀದಿ ಬಸವಣ್ಣನ ತರಹ ಬಿಟ್ಟು ಬಿಡುತ್ತೀರಿ. ಗಂಡುಮಗುವಿಗೂ ಸಂಸ್ಕಾರ ಕಲಿಸಿಕೊಡಿ. ಮುಂದೆ ಬೆಳೆದಾಗ ತಪ್ಪುಗಳನ್ನು ಆಗ ಮಾಡುವುದಿಲ್ಲ ಎಂದು ಸಲಹೆ ನೀಡಿದರು.
ಸಂಬಂಧಗಳನ್ನು ಉಳಿಸಿಕೊಳ್ಳುವುದನ್ನು ಬಹಳ ಮುಖ್ಯ. ಪತಿ–ಪತ್ನಿ, ಅತ್ತೆ–ಸೊಸೆ ಸಂಬಂಧ ಚೆನ್ನಾಗಿರಲೇಬೇಕು. ಚಾಡಿ ಹೇಳುವುದರಿಂದ ಹಿಡಿದು ಕೆಲವು ವಿಚಾರಗಳಲ್ಲಿ ನಿಜವಾಗಿಯೂ ಹೆಣ್ಣುಮಕ್ಕಳು ಕೆಟ್ಟವರಾಗಿರುತ್ತಾರೆ. ಗಂಡು ಮಕ್ಕಳಲ್ಲಿ ಅಂಥ ಕೆಟ್ಟಬುದ್ಧಿ ಇರುವುದಿಲ್ಲ. ಇಂಥವುಗಳನ್ನು ಕೂಡ ಸರಿಪಡಿಸಿಕೊಳ್ಳಬೇಕು ಎಂದರು.
ಪಾಲಿಕೆ ಸದಸ್ಯೆ ಆಶಾ ಉಮೇಶ್ ಅತಿಥಿಯಾಗಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಶುಭಾಂಜಲಿ ಆರ್. ಕಠಾರೆ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ರಾಧಾಬಾಯಿ ದುಶ್ಚಂತಸಾ ಮೆಹರವಾಡೆ, ಕಾರ್ಯದರ್ಶಿ ಗಾಯತ್ರಿ ಮಂಜುನಾಥ್ ಉಪಸ್ಥಿತರಿದ್ದರು. ಚಂದಾ ಭೂತೆ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.