ADVERTISEMENT

ಇಂಗ್ಲಿಷ್‌ ಸಾಹಿತ್ಯ ಅಧ್ಯಯನದಿಂದ ವಿಪುಲ ಅವಕಾಶ: ಚಿಂತಕ ಡಾ. ರಾಜೇಂದ್ರ ಚೆನ್ನಿ

​ಪ್ರಜಾವಾಣಿ ವಾರ್ತೆ
Published 17 ಮೇ 2019, 13:30 IST
Last Updated 17 ಮೇ 2019, 13:30 IST
ಶಿವಮೊಗ್ಗದ ಕಟೀಲ್ ಅಶೋಕ್‌ ಪೈ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಪ್ತಸಮಾಲೋಚನಾ ಕಾರ್ಯಕ್ರಮದಲ್ಲಿ ಚಿಂತಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿದರು
ಶಿವಮೊಗ್ಗದ ಕಟೀಲ್ ಅಶೋಕ್‌ ಪೈ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಪ್ತಸಮಾಲೋಚನಾ ಕಾರ್ಯಕ್ರಮದಲ್ಲಿ ಚಿಂತಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿದರು   

ಶಿವಮೊಗ್ಗ: ಇಂಗ್ಲಿಷ್‌ ಸಾಹಿತ್ಯ ಅಧ್ಯಯನದಿಂದ ಸಮಾಜ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಲಭ್ಯವಾಗುತ್ತವೆ ಎಂದುಚಿಂತಕ ಡಾ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಶುಕ್ರವಾರ ನಡೆದ ಆಪ್ತ ಸಮಾಲೋಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂಗ್ಲಿಷ್‌ ಸಾಹಿತ್ಯ ಅಧ್ಯಯನದಿಂದ ಮನುಷ್ಯನ ಜ್ಞಾನ ಮತ್ತು ಬೌದ್ಧಿಕಮಟ್ಟ ಹೆಚ್ಚುತ್ತದೆ. ಇಂಗ್ಲಿಷ್‌ ಸಾಹಿತ್ಯ ಬ್ರಿಟಿಷ್ ಸಾಹಿತ್ಯವಲ್ಲ. ಅದು ಜಗತ್ತಿನ ಶ್ರೇಷ್ಠ ಮತ್ತು ಎಲ್ಲ ಭಾಷೆಯ ಸಾಹಿತ್ಯಗಳ ಅಧ್ಯಯನವಾಗಿದೆ. ಇದರ ಅಧ್ಯಯನದಿಂದ ಕೇವಲ ಶಿಕ್ಷಕನಾಗುವುದಷ್ಟೇ ಅಲ್ಲ. ಬದಲಾಗಿ ಭಾಷಾಂತರಕಾರರಿಗೆ ಹೇರಳವಾದ ಅವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದರು.

ADVERTISEMENT

ಬೆಳ್ತಂಗಡಿ ಯುನಿಕ್‌ ಎಜು ಸ್ಕಿಲ್ಸ್‌ ಕಾಲೇಜಿನ ನಿರ್ದೇಶಕ ಸಲೀನ್, ‘ಬೀಜ ಮೊಳಕೆಯೊಡೆದು ಉತ್ತಮ ಗಿಡವಾಗಲು ಭೂಮಿಯ ಫಲವತ್ತತೆ ಎಷ್ಟು ಮುಖ್ಯವೋ ಉನ್ನತ ವ್ಯಾಸಂಗಕ್ಕೆ ದೊರಕುವ ಕಾಲೇಜಿನ ವಾತಾವರಣವೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಕಟೀಲ್ ಅಶೋಕ್‌ ಪೈ ಕಾಲೇಜು ಉನ್ನತ ವ್ಯಾಸಂಗಕ್ಕೆ ಉತ್ತಮ ವಾತಾವರಣ ಹೊಂದಿದೆ. ಅದರಲ್ಲೂ ಇಂಗ್ಲಿಷ್‌ ಸಾಹಿತ್ಯಕ್ಕೆ ಇಲ್ಲಿ ಪೂರಕವಾದ ವಾತಾವರಣವಿದೆ’ ಎಂದು ಅಭಿಪ್ರಾಯಪಟ್ಟರು.

ಮನಃಶಾಸ್ತ್ರಜ್ಞೆ ಕೆ.ಟಿ. ಶ್ವೇತಾ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಗಮನಿಸಬೇಕಾದ ಅಂಶಗಳ ಕುರಿತು ಮಾಹಿತಿ ನೀಡಿದರು.

ಡಿ.ಜಿ.ಪೂಜಾ, ‘ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕೌಶಲ, ಔದ್ಯೋಗಿಕ ಆಯ್ಕೆ, ತಂತ್ರಜ್ಙಾನ ಬಳಕೆ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ಸಂಧ್ಯಾಕಾವೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾನಸ ಟ್ರಸ್ಟ್‌ನ ನಿರ್ದೇಶಕಿ ಡಾ. ರಜನಿ ಪೈ, ಮುಕುಂದ್ ಪೈ ಇದ್ದರು.ವಿದ್ಯಾರ್ಥಿ ಸೋವಿನ್ ನಿರೂಪಿಸಿದರು. ಕುನಾಲ್ ಸ್ವಾಗತಿಸಿದರು. ಅನಿತಾ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.