ADVERTISEMENT

ಒಂದೂವರೆ ಲಕ್ಷ ಮೀನುಮರಿ ಚರಂಡಿ ಪಾಲು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 9:05 IST
Last Updated 16 ಫೆಬ್ರುವರಿ 2020, 9:05 IST
ಹರಪನಹಳ್ಳಿ ಮೀನುಗಾರಿಕೆ ಇಲಾಖೆ ಆವರಣದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿನ ನೀರು ಮತ್ತು ಮೀನಿನ ಮರಿಗಳು ಚರಂಡಿ ಪಾಲಾಗಿರುವುದನ್ನು ಪರಿಶೀಲಿಸುತ್ತಿರುವ ಜನಪ್ರತಿನಿಧಿಗಳು
ಹರಪನಹಳ್ಳಿ ಮೀನುಗಾರಿಕೆ ಇಲಾಖೆ ಆವರಣದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿನ ನೀರು ಮತ್ತು ಮೀನಿನ ಮರಿಗಳು ಚರಂಡಿ ಪಾಲಾಗಿರುವುದನ್ನು ಪರಿಶೀಲಿಸುತ್ತಿರುವ ಜನಪ್ರತಿನಿಧಿಗಳು   

ಹರಪನಹಳ್ಳಿ: ಪಟ್ಟಣದ ತಾಲ್ಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಮೀನು ಸಾಕಾಣಿಕೆಯ ತೊಟ್ಟಿಯ ನೀರನ್ನು ದುಷ್ಕರ್ಮಿಗಳು ಅಕ್ರಮವಾಗಿ ಹೊರಗಡೆ ಸಾಗಿಸಿದ್ದು, ಒಂದೂವರೆ ಲಕ್ಷ ಮೀನು ಮರಿಗಳು ಚರಂಡಿ ಪಾಲಾಗಿವೆ.

ಕಚೇರಿ ಆವರಣದಲ್ಲಿ ಮೀನುಗಾರರಿಗೆ ರಿಯಾಯಿತಿ ದರದಲ್ಲಿ ಮೀನು ಹಂಚಿಕೆ ಮಾಡಲು ಐದು ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ನಾಲ್ಕು ತೊಟ್ಟಿಗಳಲ್ಲಿ ಒಟ್ಟು 2 ಲಕ್ಷ, ಒಂದು ತೊಟ್ಟಿಯಲ್ಲಿ ಒಂದೂವರೆ ಲಕ್ಷ ಗೌರಿ ಜಾತಿಯ ಮೀನಿನ ಮರಿಗಳನ್ನು ಪೋಷಣೆ ಮಾಡಲಾಗುತ್ತಿತ್ತು.

ಅಕ್ರಮವಾಗಿ ಕಾಂಪೌಂಡ್‍ ಪ್ರವೇಶಿಸಿರುವ ಕಿಡಿಗೇಡಿಗಳು ದೊಡ್ಡ ತೊಟ್ಟಿಯ ಘಟ್ಟವನ್ನು ತೆಗೆದು, ನೀರು ಹೊರಗಡೆ ಬಿಟ್ಟಿದ್ದಾರೆ. ಸಿಬ್ಬಂದಿಗಳು ಶನಿವಾರ ಬೆಳಿಗ್ಗೆ ಕಚೇರಿಗೆ ಬಂದು ನೋಡಿದಾಗ, ತೊಟ್ಟಿಯಲ್ಲಿದ್ದ ನೀರು ಖಾಲಿಯಾಗಿತ್ತು. ತಳದಲ್ಲಿದ್ದ ನೀರಿನಲ್ಲಿ ಚಿಕ್ಕ ಮೀನುಗಳು ಸಾವನ್ನಪ್ಪಿವೆ.

ADVERTISEMENT

ಒಂದೂವರೆ ತಿಂಗಳಲ್ಲಿ ಮೀನುಗಳನ್ನು ಹೊರಗಡೆ ತೆಗೆದು ವಿವಿಧ ಕೆರೆಗಳಿಗೆ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿತ್ತು. ಯಾರು ಒಳಗಡೆ ಪ್ರವೇಶ ಮಾಡಿದ್ದಾರೆ ಎಂಬುದರ ಬಗ್ಗೆ ಈವರೆಗೂ ಮಾಹಿತಿ ಇಲ್ಲ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಇಲಾಖೆ ಸಿಬ್ಬಂದಿಗ ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜ್ ಪರಿಶೀಲನೆ ನಡೆಸಿದರು. ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.