ADVERTISEMENT

ಒಬಿಸಿ ಪಟ್ಟಿಗೆ ಪಂಚಮಸಾಲಿ ಸಮಾಜ ಸೇರ್ಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 11:18 IST
Last Updated 29 ಫೆಬ್ರುವರಿ 2020, 11:18 IST
ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ   

ದಾವಣಗೆರೆ: ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಹಾಗೂ ಸಮಾಜಕ್ಕೆ ಪ್ರತ್ಯೇಕ ನಿಗಮಮಂಡಳಿ ಸ್ಥಾಪಿಸಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

‘ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಸಚಿವ ಸ್ಥಾನ‌ಕ್ಕಿಂತಲೂ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವುದು ಮುಖ್ಯ. 2 ‘ಎ’ ಕೊಡಬೇಕು. ಅದು ಆಗದಿದ್ದರೆ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿ ಮಂತ್ರಿ ಪರಮಾಧಿಕಾರ ಇದ್ದು, ಮುಂದಿನ ಅಧಿವೇಶನದಲ್ಲಿ ಚರ್ಚಿಸಿಕ್ಯಾಬಿನೆಟ್‌ನಲ್ಲಿ ನಿರ್ಧಾರ ತೆಗೆದುಕೊಂಡು ಸೇರಿಸುವ ಪ್ರಯತ್ನ ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ’ ಎಂದರು.

‘ಬೇರೆ ಸಮಾಜಗಳಿಗೆ ಇರುವಂತೆಯೇ ಪಂಚಮಸಾಲಿ ಸಮಾಜಕ್ಕೂ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸಚಿವ ಸಂಪುಟ ಸಂಬಂಧ ಈಗಾಗಲೇ ಶಾಸಕರ ಸಭೆ ಚರ್ಚಿಸಿದ್ದೇವೆ. ಪದೇ ಪದೇ ಸಮಾಜಕ್ಕೆ ಸಚಿವ ಸ್ಥಾನ ಕೇಳುವುದು ಮುಜುಗರ ಆಗುತ್ತಿದೆ. ಸ್ವಾಮೀಜಿಗಳಾದ ನಾವು ಸಲಹೆ ನೀಡಿದ್ದೇವೆ. 11 ಜನಕ್ಕೆ ಕೊಡುತ್ತೇವೆ ಎಂದು ಹೇಳಿ ಸಚಿವ ಸಂಪುಟ ವಿಸ್ತರಣೆ ವೇಳೆ ಮಹೇಶ್ ಕುಮಠಳ್ಳಿ ಅವರನ್ನ ಕೈ ಬಿಟ್ಟಿದ್ದು ಸಮಾಜಕ್ಕೆ ತಪ್ಪು ಸಂದೇಶ ತಲುಪಿಸಿದಂತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಕೊಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು’ ಎಂದರು.

ಮಹಾದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ನ್ಯಾಯಾಲಯದ ಆದೇಶದ ಕೆಲ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಹೋರಾಟಗಾರರಿಗೆ ಸಿಕ್ಕ ಜಯ ಆಗಿದೆ. ಉತ್ತರ ಕರ್ನಾಟಕದ ಜನ ಅಲ್ಪತೃಪ್ತರು ಎಂಬ ಆರೋಪವಿದೆ.

‘ನಿರಂತರ ಹೋರಾಟ ಮಾಡಿ ಹುಬ್ಬಳ್ಳಿ-ಧಾರವಾಡ ಸೇರಿ ಉತ್ತರ ಕರ್ನಾಟಕದ ಪ್ರಮುಖ ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆ ರಾಜ್ಯ ಸರ್ಕಾರ ಎಚ್ಚತ್ತುಕೊಳ್ಳಬೇಕು. ಮುಂದಿನ ಬಜೆಟ್‌ನಲ್ಲಿ ಮಹದಾಯಿ ಯೋಜನೆಗೆ ಹೆಚ್ಚು ಹಣ ಮೀಸಲಿಡಬೇಕು‌’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.