ADVERTISEMENT

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ

ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿರುವ 19,733 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 5:29 IST
Last Updated 22 ಏಪ್ರಿಲ್ 2022, 5:29 IST
ಮಲೇಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ದ್ವಿತೀಯ ಪಿಯೂಸಿ ಪರೀಕ್ಷೆ ಸಿದ್ಧತೆ ಸಾಗಿದ್ದು ವಿದ್ಯಾರ್ಥಿಗಳ ನೊಂದಣಿ ಸಂಖ್ಯೆ ಬರೆಯುವುದರಲ್ಲಿ ನಿರತ ಸಿಬ್ಬಂದಿ
ಮಲೇಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ದ್ವಿತೀಯ ಪಿಯೂಸಿ ಪರೀಕ್ಷೆ ಸಿದ್ಧತೆ ಸಾಗಿದ್ದು ವಿದ್ಯಾರ್ಥಿಗಳ ನೊಂದಣಿ ಸಂಖ್ಯೆ ಬರೆಯುವುದರಲ್ಲಿ ನಿರತ ಸಿಬ್ಬಂದಿ   

ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆಗಳು ಏಪ್ರಿಲ್‌ 22ಕ್ಕೆ ಆರಂಭಗೊಳ್ಳಲಿವೆ. ಜಿಲ್ಲೆಯಲ್ಲಿ 31 ಪರೀಕ್ಷಾ ಕೇಂದ್ರಗಳಲ್ಲಿ 19,733 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕಲಾ ವಿಭಾಗದಲ್ಲಿ 6302, ವಾಣಿಜ್ಯ ವಿಭಾಗದಲ್ಲಿ 4874, ವಿಜ್ಞಾನ ವಿಭಾಗದಲ್ಲಿ 8557 ವಿದ್ಯಾರ್ಥಿಗಳು ‌ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಪರೀಕ್ಷೆಯ ಕೇಂದ್ರಕ್ಕೆ ಒಬ್ಬ ಮುಖ್ಯ ಅಧೀಕ್ಷಕರು, ಒಬ್ಬ ಸಹ ಮುಖ್ಯ ಅಧೀಕ್ಷಕರು, ಒಬ್ಬ ಉತ್ತರ ಪತ್ರಿಕೆಯ ಪಾಲಕರು, ಒಬ್ಬ ಪ್ರಶ್ನೆಪತ್ರಿಕೆ ಪಾಲಕರು, ಒಬ್ಬ ಕಚೇರಿಯ ಅಧೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ.

ಪ್ರತಿ ಕೇಂದ್ರಕ್ಕೆ ಇಬ್ಬರುಪೊಲೀಸ್ ಕಾನ್‌ಸ್ಟೆಬಲ್‌ಗಳು, ಒಬ್ಬ ಆರೋಗ್ಯ ಸಹಾಯಕರು, 10ರಿಂದ 20 ಜನ ಕೊಠಡಿ ಮೇಲ್ವಿಚಾರಕರು ಕಾರ್ಯ ನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಡೆಸ್ಕ್‌, ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷೆಯ ಕೇಂದ್ರಕ್ಕೆ ಒಬ್ಬರು ಸಿಟ್ಟಿಂಗ್‌ ಸ್ಕ್ಯಾಡ್‌, ಒಂದು ಫ್ಲೈಯಿಂಗ್‌ ಸ್ಕ್ಯಾಡ್‌ ನೇಮಕ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಜ್‌ ತಿಳಿಸಿದ್ದಾರೆ.

ADVERTISEMENT

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಪರೀಕ್ಷೆಗೆ ಸಿದ್ಧತೆಗಳು ನಡೆದವು.

ಮಲೇಬೆನ್ನೂರು ವರದಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ದ್ವಿತೀಯ ಪಿಯೂಸಿ ಪರೀಕ್ಷೆ ಸಿದ್ಧತೆ ಸಾಗಿದ್ದು ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ ಮುಖ್ಯ ಅಧೀಕ್ಷಕ ಎಚ್.ಎಸ್. ರಂಗಪ್ಪ ತರಬೇತಿ ನೀಡಿದರು.

ಒಟ್ಟು 16 ಮಂದಿ ಮೇಲ್ವಿಚಾರಕರು ತರಬೇತಿ ವೇಳೆ ಹಾಜರಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಮಲೇಬೆನ್ನೂರು, ಕುಂಬಳೂರು, ಬೀರಲಿಂಗೇಶ್ವರ ಹಾಗೂ ಜಾಮಿಯಾ ವಿದ್ಯಾಸಂಸ್ಥೆಯ ಒಟ್ಟು 343 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ.

12 ದಿನ ಪರೀಕ್ಷೆ ನಡೆಯಲಿವೆ. ಪೊಲೀಸ್, ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೇಂದ್ರದ ಸುತ್ತ ಬಿಗಿ ಭದ್ರತೆ ವ್ಯವಸ್ಥೆ
ಮಾಡಿಕೊಳ್ಳಲಾಗಿದೆ. ಪರೀಕ್ಷಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಸೂಚಿಸಿದೆ. ಹಿಜಬ್ ಅಥವಾ ಯಾವುದೇ ತರಹದ ವಸ್ತ್ರ ಧರಿಸಿ ಬರುವಂತಿಲ್ಲ. ಪರೀಕ್ಷಾ ಕೇಂದ್ರದೊಳಗೆ ಯಾವುದೇ ತರಹದ ವಿದ್ಯುನ್ಮಾನ ಯಂತ್ರ, ಗಡಿಯಾರ, ಕ್ಯಾಲುಕ್ಯುಲೇಟರ್, ಇಯರ್ ಫೋನ್, ಮೊಬೈಲ್ ತರುವಂತಿಲ್ಲ ಎಂದು ತಿಳಿಸಿದರು.

ಗೀತಾ, ತಿಪ್ಪೇಸ್ವಾಮಿ, ರಂಗನಾಥ್ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.