ADVERTISEMENT

ಶಿಕ್ಷಕರ ಕೊರತೆ ನೀಗಿಸಲು ಶೀಘ್ರ ಕ್ರಮ

ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 13:17 IST
Last Updated 17 ಜನವರಿ 2019, 13:17 IST
ದಾವಣಗೆರೆ ತಾಲ್ಲೂಕಿನ ಆವರಗೊಳ್ಳದಲ್ಲಿರುವ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಗುರುವಾರ ಉದ್ಘಾಟಿಸಿದರು
ದಾವಣಗೆರೆ ತಾಲ್ಲೂಕಿನ ಆವರಗೊಳ್ಳದಲ್ಲಿರುವ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಗುರುವಾರ ಉದ್ಘಾಟಿಸಿದರು   

ದಾವಣಗೆರೆ: ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರ ಕೊರತೆ ಇದ್ದು, ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು.

ದಾವಣಗೆರೆ ತಾಲ್ಲೂಕಿನ ಆವರಗೊಳ್ಳದಲ್ಲಿರುವ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗೆ 24 ಸಿಬ್ಬಂದಿ ಬೇಕು. ಈಗ 14 ಭರ್ತಿಯಾಗಿವೆ. 10 ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಹಲವು ಪೋಷಕರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೇ ಪತ್ರ ಬರೆದು ಮನವಿ ಮಾಡಿದ್ದಾರೆ. ಅಲ್ಲದೇ, ವಿದ್ಯಾಲಯದ ಮುಖ್ಯಸ್ಥರು, ಜಿಲ್ಲಾಧಿಕಾರಿಗಳೂ ಈ ಬಗ್ಗೆ ಗಮನ ಸೆಳೆದಿದ್ದಾರೆ. ಹಾಗಾಗಿ, ಕೇಂದ್ರೀಯ ವಿದ್ಯಾಲಯದ ಬೆಂಗಳೂರು ಕ್ಷೇತ್ರದ ಉನ್ನತ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಹೇಳಿದರು.

ADVERTISEMENT

ಐದು ವರ್ಷಗಳ ಹಿಂದೆ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರಾದಾಗ ಬಾಡಿಗೆ ಮನೆಯಲ್ಲಿ ಶಾಲೆ ಪ್ರಾರಂಭಿಸಲಾಯಿತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಆವರಗೊಳ್ಳದಲ್ಲಿ ಜಮೀನು ಮಂಜೂರು ಮಾಡಲಾಯಿತು. ತಕ್ಷಣಕ್ಕೆ ಶಾಲಾ ಕಟ್ಟಡಕ್ಕೆ ₹ 13.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿತು ಎಂದು ಸಂಸದರು ಮಾಹಿತಿ ನೀಡಿದರು.

ಈಗ ಭವ್ಯವಾದ ಕಟ್ಟಡ ಎದ್ದು ನಿಂತಿದೆ. ಆದರೆ, ಶಿಕ್ಷಕರ ಕೊರತೆಯಿಂದ ಬಳಲುತ್ತಿದೆ. ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಶಿಕ್ಷಕರು ಇನ್ನಷ್ಟು ಶ್ರದ್ಧೆಯಿಂದ ಬೋಧನೆ ಮಾಡಬೇಕು. ಸಾಂಸ್ಕೃತಿಕ, ಕ್ರೀಡೆಗಳಲ್ಲೂ ವಿದ್ಯಾರ್ಥಿಗಳನ್ನು ಹೆಚ್ಚು, ಹೆಚ್ಚು ತರಬೇತುಗೊಳಿಸಬೇಕು ಎಂದು ಸೂಚನೆ ನೀಡಿದರು.

ಈ ಹಿಂದೆ ಸಂಸದರಿಗೆ ಪ್ರತಿ ವರ್ಷ ನಾಲ್ಕು ವಿದ್ಯಾರ್ಥಿಗಳಿಗೆ ಸೀಟು ಕೊಡಿಸುವ ಅಧಿಕಾರ ಇತ್ತು. ಈಗ ಅದನ್ನು 10ಕ್ಕೆ ಹೆಚ್ಚಿಸಲಾಗಿತ್ತು. ಇಷ್ಟಾದರೂ ಸುತ್ತಲಿನ ಹಳ್ಳಿಗಳ 25ಕ್ಕೂ ಹೆಚ್ಚು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟು ಕೊಡಿಸಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರಗಳನ್ನು ಸಾಕಷ್ಟು ವೆಚ್ಚ ಮಾಡುತ್ತಿವೆ. ಆದರೆ, ಸರ್ಕಾರಗಳ ಅನುಕೂಲಗಳನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳು ಪ್ರತಿಭಾ ಪಲಾಯನ ಮಾಡುತ್ತಿದ್ದಾರೆ. ಇದರಿಂದ ದೇಶಕ್ಕೆ ನಷ್ಟವಾಗುತ್ತಿದೆ. ನಮ್ಮ ದೇಶದಲ್ಲೇ ಈ ವಿದ್ಯಾರ್ಥಿಗಳ ಸೇವೆ ಸಿಗುವಂತೆ ಜಾಗೃತಿ ಮೂಡಿಸಬೇಕಿದೆ. ಅದಕ್ಕಾಗಿ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅದು ಪ್ರೌಢಶಿಕ್ಷಣ ಹಂತದಲ್ಲೇ ಒದಗಿಸಬೇಕಾಗಿದೆ ಎಂದು ಹೇಳಿದರು.

ಶಾಲಾ ಮಕ್ಕಳ ಪಠ್ಯಪುಸ್ತಕದ ಹೊರೆ ಹಾಗೂ ಹೋಂವರ್ಕ್‌ನ ಭಾರ ತಗ್ಗಿಸಲು ಇಸ್ರೊ ಮಾಜಿ ಅಧ್ಯಕ್ಷ ಪ್ರೊ. ಕಸ್ತೂರಿರಂಗನ್ ಅಧ್ಯಕ್ಷತೆಯ ಸಮಿತಿ ವರದಿ ಸಲ್ಲಿಸಿದ್ದು, ಅದನ್ನು ಕೇಂದ್ರ ಸರ್ಕಾರ ಪರಿಶೀಲಿಸಿ ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಶೋಷಿತರ ಮಕ್ಕಳಿಗೆ ಅವಕಾಶ ಕೊಡಿ:ಶಾಸಕ ಎಸ್‌.ಎ. ರವೀಂದ್ರನಾಥ್ ಮಾತನಾಡಿ, ‘ಸಂಸದ ಸಿದ್ದೇಶ್ವರ ಪ್ರಯತ್ನದಿಂದ ಕೇಂದ್ರೀಯ ವಿದ್ಯಾಲಯ ಜಿಲ್ಲೆಗೆ ಸ್ಥಾಪನೆಯಾಗಿದೆ. ಶಾಲೆಯ ಕಟ್ಟಡ, ಕಲಿಕಾ ವಾತಾವರಣ ಎಲ್ಲವೂ ಚೆನ್ನಾಗಿದೆ. ಇದೇ ರೀತಿ ಎಲ್ಲಾ ಶಾಲೆಗಳೂ ಇರಬೇಕು’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಿ ನೌಕರರ ಮಕ್ಕಳಿಗೆ ಬೇರೆಡೆ ಅವಕಾಶಗಳು ತುಂಬಾ ಇವೆ. ಹಾಗಾಗಿ, ಕೇಂದ್ರೀಯ ವಿದ್ಯಾಲಯದಲ್ಲಿ ಶೋಷಿತರು, ದಲಿತರ ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಕೇಂದ್ರೀಯ ವಿದ್ಯಾಲಯ ಬೆಂಗಳೂರು ಕ್ಷೇತ್ರದ ಉಪ ಆಯುಕ್ತ ಡಿ.ಟಿ.ಎಸ್‌. ರಾವ್ ಮಾತನಾಡಿ, ಕೇಂದ್ರೀಯ ವಿದ್ಯಾಲಯ ಕೇವಲ ಶಿಕ್ಷಣ ನೀಡುತ್ತಿಲ್ಲ. ರಾಷ್ಟ್ರೀಯತೆ, ಭಾರತೀಯತೆಯನ್ನೂ ಬೆಳೆಸುವ ಕೇಂದ್ರವಾಗಿದೆ ಎಂದರು.

ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ದಾವಣಗೆರೆ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಪಿ.ವಿ ಬೀಜು, ಧಾರವಾಡ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಮುರಳಿ ಕೃಷ್ಣ, ಬೆಂಗಳೂರು ಹೆಬ್ಬಾಳು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಪಿ.ಸಿ. ರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.