ಹೊನ್ನಾಳಿ: ತಾಲ್ಲೂಕಿನ ನೇರಲಗುಂಡಿ ಭಾಗದಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದು, ಭಾರಿ ಪ್ರಮಾಣದ ಹಾನಿಯುಂಟಾಗಿದೆ.
ಕಮ್ಮಾರಗಟ್ಟೆ ನೇರಲಗುಂಡಿ ರಸ್ತೆ ಮಧ್ಯದಲ್ಲಿ ಇರುವ ಸೇತುವೆ ಸಂಪೂರ್ಣ ಕಿತ್ತುಹೋಗಿದ್ದು, ರಸ್ತೆಯ ಡಾಂಬರು ಹಾಗೂ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ಈ ಭಾಗದ ಸಾರ್ವಜನಿಕರ ಸಂಚಾರ ಸ್ಥಗಿತಗೊಂಡಿದೆ.
ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಸವಾರರು ಸಾಕಷ್ಟು ಪ್ರಯಾಸಪಟ್ಟು ತಮ್ಮ ಊರುಗಳಿಗೆ ತಲುಪುವ ದುಃಸ್ಥಿತಿ ಒದಪಿದೆ. ನೇರಲಗುಂಡಿ ಕಮ್ಮಾರಗಟ್ಟೆ ಭಾಗದ ರಸ್ತೆ ಪಕ್ಕದಲ್ಲಿನ ತೋಟದ ಅಡಿಕೆ ಗಿಡಗಳು ಬುಡಸಮೇತ ನೆಲಕ್ಕುರುಳಿವೆ. ಗ್ರಾಮದ ಎರಡು ಬೀದಿಗಳಲ್ಲಿನ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ದವಸ, ಧಾನ್ಯ ಸಂಪೂರ್ಣ ಹಾಳಾಗಿದೆ.
ಮನೆಯೊಳಗೆ ನುಗ್ಗಿದ ನೀರನ್ನು ಹೊರಕ್ಕೆ ಹಾಕಲು ನಿವಾಸಿಗಳು ಹರಸಾಹಸಪಟ್ಟು ಹೈರಾಣರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನೇರಲಗುಂಡಿ ಭಾಗದಲ್ಲಿನ ತೋಟಗಳಿಗೆ ನೀರು ಅತ್ಯಂತ ರಭಸದಿಂದ ನುಗ್ಗಿದ್ದರಿಂದ ತೋಟದಲ್ಲಿ ಹಾಕಿದ್ದ ವಡ್ಡುಗಳು ಕಿತ್ತುಹೋಗಿವೆ ಎಂದು ಗ್ರಾಮದ ಮುಖಂಡ ದೇವರಾಜನಾಯ್ಕ ಹಾಗೂ ವೀರಭದ್ರಪ್ಪ ದೂರಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ರಸ್ತೆ, ಸೇತುವೆ ಹಾಳಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಅಂದಾಜು ಮಾಡಬೇಕು. ತೋಟದಲ್ಲಿನ ಅಡಿಕೆ ಗಿಡಗಳ ಹಾನಿ ಪ್ರಮಾಣವನ್ನು ಗುರುತಿಸಿ ಪರಿಹಾರ ನೀಡಬೇಕು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.