ADVERTISEMENT

‘ಆರೋಗ್ಯವಂತ ಸಮಾಜಕ್ಕೆ ರಸವೈದ್ಯ ವಿಜ್ಞಾನ ಬಳಕೆಯಾಗಲಿ’

ರಸವೈದ್ಯ ತರಬೇತಿ ಶಿಬಿರದಲ್ಲಿ ಮಹಾಂತ ರುದ್ರೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 12:30 IST
Last Updated 8 ಮಾರ್ಚ್ 2019, 12:30 IST
ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಸವೈದ್ಯ ತರಬೇತಿ ಶಿಬಿರವನ್ನು ಹೆಬ್ಬಾಳದ ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಸವೈದ್ಯ ತರಬೇತಿ ಶಿಬಿರವನ್ನು ಹೆಬ್ಬಾಳದ ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಉದ್ಘಾಟಿಸಿದರು.   

ದಾವಣಗೆರೆ: ಆರೋಗ್ಯವಂತ ಸಮಾಜ ನಿರ್ಮಿಸಲು ರಸವೈದ್ಯ ವಿಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೆಬ್ಬಾಳದ ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ಪಾರಂಪರಿಕ ವೈದ್ಯ ಪರಿಷತ್‌–ಕರ್ನಾಟಕ ಹಾಗೂ ಪಾರಂಪರಿಕ ವೈದ್ಯ ಗುರುಕುಲ ಆಶ್ರಯದಲ್ಲಿ 10 ದಿನಗಳ ರಸವೈದ್ಯ ತರಬೇತಿ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ರಸವೈದ್ಯ ವಿಜ್ಞಾನವನ್ನು ಮಾನವನ ಉನ್ನತಿಗೂ ಬಳಸಬಹುದು; ನಾಶ ಮಾಡಲು ಬಳಸಬಹುದು. ಕಾಶ್ಮೀರದಲ್ಲಿ ಹಲವು ಪಂಡಿತರು ರಸವೈದ್ಯರಿದ್ದಾರೆ. ಅದರ ಜೊತೆಯಲ್ಲೇ ರಸಾಯನ ವಿಜ್ಞಾನ ದುರ್ಬಳಕೆ ಮಾಡಿಕೊಂಡು ಬಾಂಬ್‌ ಸ್ಫೋಟಗೊಳಿಸುವ ಮೂಲಕ ಸೈನಿಕರನ್ನು ಹತ್ಯೆಗೈದ ಉಗ್ರರು ಇದ್ದಾರೆ. ಮಾನವನ ರೋಗಗಳನ್ನು ನಿವಾರಿಸಿ, ಬದುಕಿನ ಮಟ್ಟವನ್ನು ಸುಧಾರಿಸಲು ರಸವೈದ್ಯ ವಿಜ್ಞಾನ ಬಳಕೆಯಾಗಬೇಕೆ ಹೊರತು ಅನನತಿಗೆ ಅಲ್ಲ’ ಎಂದು ಕಿವಿಮಾತು ಹೇಳಿದರು.

ADVERTISEMENT

ರೋಗಗಳನ್ನು ದೂರ ಮಾಡುವ ಶಕ್ತಿ ರಸವೈದ್ಯರಿಗೆ ಇದೆ. ಸಮಾಜವನ್ನು ಕಾಡುತ್ತಿರುವ ಕ್ಯಾನ್ಸರ್‌, ಏಡ್ಸ್‌ನಂತಹ ಗಂಭೀರ ಕಾಯಿಲೆಗಳಿಗೆ ರಸವೈದ್ಯ ಪದ್ಧತಿ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪಾರಂಪರಿಕ ವೈದ್ಯ ಪರಿಷತ್‌ ಅಧ್ಯಕ್ಷ ಗುರುಸಿದ್ದಪ್ಪ ನೇರ್ಲಗಿ, ‘ರಸವೈದ್ಯ ಅದ್ಭುತ ಜ್ಞಾನವಾಗಿದೆ. ಹಿಂದೆಲ್ಲ ಋಷಿ–ಮುನಿಗಳು ಗುರುಕುಲದಲ್ಲಿ ಈ ವಿದ್ಯೆಯನ್ನು ಹೇಳಿಕೊಡುತ್ತಿದ್ದರು. ಇಂದು ರಸವೈದ್ಯ ಪದ್ಧತಿ ಕ್ಷೀಣಿಸುತ್ತಿದೆ. ಅಂಗಡಿಯಲ್ಲಿ ಸಿಗುವ ಕಳಪೆ ಗುಣಮಟ್ಟದ ಔಷಧಗಳನ್ನು ತಂದು ವೈದ್ಯರು ಬಳಸುತ್ತಿದ್ದಾರೆ. ಅದರ ಬದಲು ತಾವೇ ಗಿಡಮೂಲಿಕೆಗಳನ್ನು ಬಳಸಿ ರಸೌಷಧ ಸಿದ್ಧಪಡಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ರೋಗ ನಿವಾರಣೆ ಮಾಡಲಿದೆ. ರಸವಿದ್ಯೆಯನ್ನು ಮತ್ತೆ ವೈಭವಕ್ಕೇರಿಸಬೇಕಾಗಿದೆ. ಅದಕ್ಕಾಗಿಯೇ 10 ದಿನಗಳ ರಸವೈದ್ಯ ತರಬೇತಿ ಶಿಬಿರ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ರಸವೈದ್ಯರು ವಾದ ಮಾಡುವುದನ್ನು ಬಿಟ್ಟು, ವೈದ್ಯ ವೃತ್ತಿ ಪಾಲಿಸುವ ಕಡೆಗೆ ಒತ್ತು ನೀಡಬೇಕು. ಆಗ ರೋಗವನ್ನು ನಿವಾರಿಸಲು ಸಾಧ್ಯವಾಗಲಿದೆ. ರಸವೈದ್ಯರು ಕೈಕೆಸರು ಮಾಡಿಕೊಂಡರೆ ಮಾತ್ರ ಮೊಸರು ತಿನ್ನಲು ಸಾಧ್ಯವಾಗಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಸವನಾಗದೇವ ಸ್ವಾಮೀಜಿ, ‘ಇಂಗಾಲ ಡೈಆಕ್ಸೈಡ್‌ನ ರೂಪವಾದ ಇದ್ದಿಲು ಪುಡಿ ಪುಡಿಯಾಗುತ್ತದೆ. ಆದರೆ, ಅದೇ ಇಂಗಾಲ ಡೈಆಕ್ಸೈಡ್‌ನ ಇನ್ನೊಂದು ರೂಪವಾದ ವಜ್ರ ಕಠೋರವಾಗಿರುತ್ತದೆ. ಅದೇ ರೀತಿ ಜ್ಞಾನ ಲಭ್ಯವಾದರೆ ಮಾನವ ಸಹಜ ಶಕ್ತಿಯು ಪರಮಾತ್ಮನ ಶಕ್ತಿ ಪಡೆದುಕೊಳ್ಳಬಹುದು. ನಿಸ್ವಾರ್ಥಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರಿ ಸಾಧಿಸಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಡಾ. ಟಿ.ಎನ್. ದೇವರಾಜ್‌ ಇದ್ದರು. ತರಬೇತುದಾರ ಮುದ್ದೇಬಿಹಾಳದ ಸುರೇಶ್‌ ಆಚಾರ್ಯ ಮಾತನಾಡಿದರು. ಶಿವಮೂರ್ತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.