ದಾವಣಗೆರೆ: ಧಾರ್ಮಿಕ ಸಂಕೇತಗಳ ಮೂಲಕ ಜನರನ್ನು ಕಟ್ಟಿ ಹಾಕಲಾಗಿತ್ತು. ಅದು ಬೌದ್ಧಿಕ ರಾಜಕಾರಣವಾಗಿತ್ತು. ಆ ಸಂಕೇತಗಳನ್ನು ಒಡೆದವರು ವಚನಕಾರರು ಎಂದು ಸಾಹಿತಿ ಹಾವೇರಿಯ ಡಾ. ಅನಸೂಯ ಕಾಂಬಳೆ ಹೇಳಿದರು.
‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಅವರು ‘ವಚನ ಸಾಹಿತ್ಯ ಮತ್ತು ಸಾಮಾಜಿಕ ಒಳಗೊಳ್ಳುವಿಕೆ’ ಬಗ್ಗೆ ಮಾತನಾಡಿದರು.
ಜನರ ಅಜ್ಞಾನ ಮತ್ತು ಭಯವನ್ನು ಬಳಸಿಕೊಂಡು ಇಹದ ಚಿಂತನೆಯ ಬದಲು ಪರದ ಚಿಂತನೆಗೆ ಜನರನ್ನು ತಿರುಗಿಸಲಾಗಿದೆ. ಮತ್ತೆ ಇಹದ ಚಿಂತನೆಗೆ ತರಬೇಕು ಎಂದು ಬುದ್ಧ ಹೇಳಿದ್ದ. ಅದನ್ನೇ ವಚನಕಾರರು ಮಾಡಿ ತೋರಿಸಿದ್ದರು.
ದೇಗುಲ ಮೊದಲನೇ ಸಂಕೇತ. ದೇಗುಲ ನಿರಾಕರಿಸಿ ದೇಹವೇ ದೇಗುಲ ಎಂದು ಅದನ್ನು ಒಡೆದರು. ದೇವಭಾಷೆ ಶ್ರೇಷ್ಠ ಎಂದಿದ್ದಾಗ ಅದರ ಬದಲು ಜನಭಾಷೆಯನ್ನು ಬಳಸಿದರು. ಒಣ ಪಾಂಡಿತ್ಯದ ಗೋಷ್ಠಿಯನ್ನು ಪುಂಡರಗೋಷ್ಠಿ ಎಂದು ಕರೆದ ವಚನಕಾರರು ಅದರ ಬದಲು ಅನುಭವ ಗೋಷ್ಠಿಯನ್ನು ನಡೆಸಿದರು. ಜಾತಿಯಿಂದ, ವೃತ್ತಿಯಿಂದ ಕೀಳು ಎಂದು ಗುರುತಿಸಲಾಗಿದ್ದವರನ್ನು ಅಪ್ಪಿಕೊಂಡು ಕಾಯಕವೇ ಶ್ರೇಷ್ಠ ಎಂದು ಘನತೆ ತಂದರು ಎಂದು ವಿಶ್ಲೇಷಿಸಿದರು.
ಶರಣ ಸತಿ ಲಿಂಗಪತಿ ಎನ್ನುವ ತತ್ವ ತಂದರು. ಮಹಿಳೆಯರನ್ನು ಶೋಷಿಸಲು ಪಣ್ಯಶ್ರೀ ಎಂದು ಕರೆಯುವುದನ್ನು ಬದಲಾಯಿಸಿ ಪುಣ್ಯಶ್ರೀ ಎಂದು ಆಕೆಯನ್ನು ಶೋಷಣೆಯಿಂದ ಮುಕ್ತಗೊಳಿಸಿದರು. ಕಾಯಕವೇ ಕೈಲಾಸ ತತ್ವವನ್ನು ಬೋಧಿಸಿದರು ಎಂದರು.
ದಾನ ಎಂದರೆ ದಾನ ನೀಡಲು ಒಪ್ಪಿದವರಿಂದ ಕಿತ್ತುಕೊಳ್ಳುವುದಾಗಿತ್ತು. ಬಲಿಯ ದಾನದ ಕತೆ ಇದಕ್ಕೆ ಉದಾಹರಣೆ. ದಾನ ನೀಡಲು ಒಪ್ಪದವರನ್ನು ಪರೋಕ್ಷ ಯುದ್ಧ ಸಾರಿ ಮುಗಿಸುವ ಕುತಂತ್ರ ನಡೆಯುತ್ತಿತ್ತು. ಅದನ್ನು ಪ್ರಹ್ಲಾದ–ಹಿರಣ್ಯಕಶಿಪು ಕತೆಯಲ್ಲಿ ಕಾಣಬಹುದು. ಇಂಥ ಕಿತ್ತುಕೊಳ್ಳುವ ದಾನದ ಬದಲು ದಾಸೋಹ ಪದ್ಧತಿಯನ್ನು ತಂದವರು ವಚನಕಾರರು ಎಂದು ತಿಳಿಸಿದರು.
ವಚನಕಾರರಲ್ಲಿ ಜಾತಿ ವಿನಾಶದ ಕಲ್ಪನೆ ಬಗ್ಗೆ ಡಾ.ರಾಜೇಂದ್ರ ಚೆನ್ನಿ ಮಾತನಾಡಿ, ‘ನಾಗರಿಕತೆಗೆ ಜಾತಿ ಒಂದು ಶಾಪ. ಜಾತಿಯ ವಿಶ್ಲೇಷಣೆ ಮತ್ತು ಅದರ ವಿನಾಶದ ಬಗ್ಗೆ ಅಂಬೇಡ್ಕರ್, ಲೋಹಿಯಾ 20ನೇ ಶತಮಾನದಲ್ಲಿ ನಡೆಸಿದ್ದರು. ಅದರ ಬೀಜ 12ನೇ ಶತಮಾನದ ವಚನಗಳಲ್ಲಿ ಇದೆ. ಧರ್ಮದ ಹೆಸರಲ್ಲಿ ನಡೆಯುವ ಅನಾಚಾರಗಳನ್ನು ವಚನಕಾರ್ತಿಯರು ತಿಳಿಸಿದ್ದನ್ನು ಕಾಣಬಹುದು’ ಎಂದರು.
ಸಹಪಂಕ್ತಿ ಭೋಜನ ಮಾಡಬೇಕು. ಆದರೆ ಇದರಿಂದ ಜಾತಿ ವಿನಾಶ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಅಂತರ್ಜಾತಿ ವಿವಾಹ ನಡೆಯಬೇಕು. ಇದೂ ಪರಿಪೂರ್ಣ ಅಲ್ಲ. ಜಾತಿಗೆ ಬೆಂಬಲವಾಗಿ ನಿಂತಿರುವ ಧರ್ಮಗ್ರಂಥಗಳನ್ನು, ಶಾಸ್ತ್ರಗಳನ್ನು ವಿರೋಧಿಸಬೇಕು. ಆಗ ಜಾತಿ ನಿರ್ಮೂಲನೆ ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದರು. ಇದನ್ನೇ ವಚನಕಾರರು ಮಾಡಿದ್ದರು. ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ ಎಂದು ವಚನಕಾರರು ಹೇಳಿದ್ದರು ಎಂದು ವಿಶ್ಲೇಷಿಸಿದರು.
ಮೌಲ್ಯಗಳ ಅವನತಿಯ, ಮನುಷ್ಯ ಸಂಬಂಧಗಳು ನಾಶವಾಗುವ ಈ ಕಾಲದಲ್ಲಿ ರಾಜಕೀಯವಾಗಿಮ ಸಾಮಾಜಿಕವಾಗಿ ನಿತ್ಯದ ಬದುಕಿನ ಭಾಗವಾಗಿ ವಚನಗಳು ಬರಬೇಕು ಎಂದು ಆಶಿಸಿದರು.
ಬಸವ ಬಳಗದ ಸಂಚಾಲಕ ವಿ. ಸಿದ್ಧರಾಮ ಶರಣ ಅಧ್ಯಕ್ಷತೆ ವಹಿಸಿದ್ದರು. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ, ಹದಡಿ ಮುರಳೀಧರ ವಿದ್ಯಾರಣ್ಯ ಸ್ವಾಮೀಜಿ, ಬಿ.ಎ. ಇಬ್ರಾಹಿಂ ಸಖಾಫಿ, ಮುಖಂಡರಾದ ಎಸ್.ಎಸ್. ಪಾಟೀಲ್, ಕೆ.ಆರ್. ಜಯದೇವಪ್ಪ, ಎಚ್.ಕೆ. ರಾಮಚಂದ್ರಪ್ಪ, ಶಿವಕುಮಾರ್, ಲೋಕಿಕೆರೆ ನಾಗರಾಜ್, ಡಾ. ಮಂಜುನಾಥ ಕುರ್ಕಿ, ಶ್ರೀಧರ ಎಮ್ಮನಬೇತೂರು, ಮುದ್ದೇಗೌಡ ಗಿರೀಶ್, ಬಸವರಾಜ್ ಶಿವಗಂಗಾ, ಶಶಿಧರ ಎಮ್ಮನಬೇತೂರು ಅವರೂ ಇದ್ದರು.
ಕಾರ್ಯಕ್ರಮದ ಬಳಿಕ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಂಡಿತು.
‘ಉದ್ಯೋಗವೇ ಜಾತಿಯಾಗಿ ತೊಂದರೆ’
ಉದ್ಯೋಗಕ್ಕೇ ಜಾತಿ ಹಚ್ಚಿದ್ದರಿಂದ ಇಂದು ಹಲವು ಉದ್ಯೋಗಗಳು ನಾಶವಾಗುತ್ತಿವೆ. ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ ಮಾಡುವವರು ಕಡಿಮೆಯಾಗಿದ್ದಾರೆ. ಅದು ಜಾತಿಗೆ ಸೀಮಿತಗೊಳಿಸದೇ ಹೋಗಿದ್ದರೆ ಅದನ್ನು ಎಲ್ಲರೂ ಮಾಡುತ್ತಿದ್ದರು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
‘ಜಾತಿಯಲ್ಲಿ ಹುಟ್ಟಿರಬಹುದು. ಜಾತಿಯನ್ನು ಮೀರಿ ಬದುಕಲು ಸಾಧ್ಯವಿಲ್ಲ ಎಂಬ ಭ್ರಮೆಯಿಂದ ಹೊರಬರಬೇಕು. ಬಸವಣ್ಣ ಅಂಥ ಕೆಲಸ ಮಾಡಿ ತೋರಿಸಿದ್ದಾರೆ. ನಿತ್ಯ ಬಸವಣ್ಣನನ್ನೇ ಜಪಿಸುವ ನಮಗೆ ಯಾಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದರು.
‘ಮತ್ತೆ ಕಲ್ಯಾಣವು ಅಂಥ ಅಂತರಂಗದ ಬೆಳಕು ಮೂಡಿಸಬೇಕು. ನಾವು ಬದಲಾಗದೇ ಇನ್ನೊಬ್ಬರ ಕಡೆಗೆ ಕೈ ತೋರಿಸಿದರೆ ಬದಲಾವಣೆ ಎಂಬುದು ಭ್ರಮೆಯಾಗುತ್ತದೆ. ನಾವು ಬದಲಾಗುತ್ತಾ ನಮ್ಮ ಮಕ್ಕಳಿಗೂ ವಚನಗಳನ್ನು ಹೇಳಿಕೊಟ್ಟು ಬದಲಾವಣೆ ತರೋಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.