ದಾವಣಗೆರೆ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣಾ ಅಖಾಡಕ್ಕೆ ನಾವೂ ಸಿದ್ಧರಿದ್ದೇವೆ. ತಾಕತ್ತಿದ್ದರೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸ್ಪರ್ಧೆ ಮಾಡಲಿ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿ.ಎಸ್.ಯಡಿಯೂರಪ್ಪ ಅವರ ಕೈಕಾಲು ಹಿಡಿದು ಪಕ್ಷಕ್ಕೆ ಬಂದಿರುವ ನೀನು (ಯತ್ನಾಳ) ನನಗೆ ಲೆಕ್ಕವೇ ಅಲ್ಲ. ನೀನೊಬ್ಬ 420. ನಿನ್ನಂತ ವಿಕೃತ ಮನಸ್ಸು ನನಗಿಲ್ಲ. ನೀನು ಒಂದು ಹೆಜ್ಜೆ ಮುಂದಿಟ್ಟರೆ, ನಾನು 10 ಹೆಜ್ಜೆ ಮುಂದಿಡುತ್ತೇನೆ’ ಎಂದು ಏಕವಚನದಲ್ಲಿ ಟೀಕಿಸಿದರು.
‘ಅಲ್ಲಿರುವುದೇ (ಯತ್ನಾಳ ಬಣ) ಮೂರು ಮತ್ತೊಂದು. ಅವರೆಲ್ಲ ಕೆಲಸಕ್ಕೆ ಬಾರದವರು. ರಮೇಶ್ ಜಾರಕಿಹೊಳಿ ಅವರನ್ನೂ ಯತ್ನಾಳ ಕೆಡಿಸುತ್ತಿದ್ದಾರೆ’ ಎಂದು ದೂರಿದರು.
ವಿಜಯೇಂದ್ರಗೆ ಅನುಭವದ ಕೊರತೆ:
‘ಬಿ.ವೈ. ವಿಜಯೇಂದ್ರ ಅವರಿಗೆ ಅನುಭವದ ಕೊರತೆಯಿದೆ. ಎಲ್ಲರನ್ನೂ ಒಳಗೊಳ್ಳುವ, ಕಾಂಗ್ರೆಸ್ ನಾಯಕರನ್ನು ಸಮರ್ಥವಾಗಿ ಎದುರಿಸುವಂತಹ ನಾಯಕರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕಿದೆ. ಈ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ಧ’ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಹೇಳಿದರು.
‘ಬಸನಗೌಡ ಪಾಟೀಲ ಯತ್ನಾಳ್ ಅಂಥವರು ಅಧ್ಯಕ್ಷರಾಗಬೇಕು. ಆದರೆ, ಅವರು ವಿರೋಧ ಪಕ್ಷದ ನಾಯಕರಾಗುವ ಸಾಧ್ಯತೆ ಇದೆ. ಪಕ್ಷದ ರಾಷ್ಟ್ರೀಯ ನಾಯಕರಿಗೆ ರಾಜ್ಯದ ವಿಚಾರಗಳು ತಿಳಿದಿವೆ. ಬಿಜೆಪಿಯಲ್ಲಿನ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಇನ್ನು 2-3 ತಿಂಗಳಲ್ಲಿ ಬದಲಾವಣೆ ಆಗಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.