ADVERTISEMENT

ಅಟೆನ್ಷನ್‌ + ಕಾನ್ಸಂಟ್ರೇಷನ್‌= ಡಿಸ್ಟಿಂಕ್ಷನ್‌

ವಿದ್ಯಾರ್ಥಿಗಳಿಗೆ ಮುರುಘಾ ಶರಣರು ನೀಡಿದ ಯಶಸ್ಸಿನ ಮಂತ್ರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 12:25 IST
Last Updated 18 ಜನವರಿ 2019, 12:25 IST
ದಾವಣಗೆರೆಯಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾ ಶರಣರು ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು
ದಾವಣಗೆರೆಯಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾ ಶರಣರು ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು   

ದಾವಣಗೆರೆ: ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿರುವಾಗ ವಿದ್ಯಾರ್ಥಿಗಳು ಅಟೆನ್ಷನ್‌ (ಗಮನಹರಿಸುವುದು) ಜೊತೆಗೆ ಕಾನ್ಸಂಟ್ರೇಷನ್‌ (ಏಕಾಗ್ರತೆ) ನಿಂದ ಕೇಳಿಸಿಕೊಂಡರೆ ಪರೀಕ್ಷೆಯಲ್ಲಿ ಡಿಸ್ಟ್ರಿಂಕ್ಷನ್‌ (ಅತ್ಯುನ್ನತ ಶ್ರೇಣಿ)ನಲ್ಲಿ ಉತ್ತೀರ್ಣರಾಗಬಹುದು ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ‘ಸಾಧನೆಯ ಮಂತ್ರ’ದ ದೀಕ್ಷೆಯನ್ನು ವಿದ್ಯಾರ್ಥಿಗಳಿಗೆ ಕೊಟ್ಟರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶಿವಯೋಗಾಶ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮುರುಘಾ ಶರಣರು ವಿದ್ಯಾರ್ಥಿಗಳ ಸಮಸ್ಯೆ, ಸವಾಲುಗಳನ್ನು ಆಲಿಸಿದ ಅವರು ಹಲವು ಪರಿಹಾರಗಳನ್ನು ಸೂಚಿಸಿದರು.

‘ಪರೀಕ್ಷೆಯ ಹಿಂದಿನ ದಿನ ಲಿಂಬೆಹಣ್ಣು ಮಂತ್ರಿಸಿಕೊಂಡು ಬರುವುದರಿಂದ, ದಾರ–ತಾಯತ ಕಟ್ಟಿಸಿಕೊಳ್ಳುವುದರಿಂದ ಪಾಸಾಗಲು ಸಾಧ್ಯವಿಲ್ಲ. ಇದನ್ನು ಮಾಡುವುದರಿಂದ ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಬರುತ್ತದೆ ಎಂಬುದು ಭ್ರಮೆಯಾಗಿದೆ. ಸರಿಯಾಗಿ ಓದಿಕೊಂಡು ಹೋಗದಿದ್ದರೆ ಉತ್ತರದ ಬದಲು, ಬೆವರು ಬರುತ್ತದೆ’ ಎಂದು ತಿಳಿ ಹಾಸ್ಯದಲ್ಲೇ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ADVERTISEMENT

ಅಧಿಕ ಅಂಕ ಗಳಿಸುವುದು ಹೇಗೆ? ಮರೆತುಹೋಗುವ ಸಮಸ್ಯೆ ಕಾಡುತ್ತಿದೆ. ಪರೀಕ್ಷೆ ಬಂದಾಗ ಹೆದರಿಕೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಸ್ವಾಮೀಜಿಗಳ ಪ್ರಶ್ನೆಗೆ ಅಳುಕಿಲ್ಲದೇ ಸಮಸ್ಯೆ ಹೇಳಿಕೊಂಡಾಗ, ‘ಪಾಠದ ಕಡೆಗೆ ಗಮನ ಹಾಗೂ ಏಕಾಗ್ರತೆ ಹೊಂದದಿದ್ದರೆ, ‘ಎಮೋಷನ್‌ (ಮನಸ್ಸಿನ ದುಗುಡ) + ಡಿಪ್ರೆಷನ್‌ (ಖಿನ್ನತೆ) = ಹೈಪರ್‌ಟೆನ್ಷನ್‌ (ಅಧಿಕ ರಕ್ತದೊತ್ತಡ)’ ಬರಲಿದೆ. ಅರ್ಥಾತ್‌ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವುದು, ಅನುತ್ತೀರ್ಣ ಆಗಬಹುದು. ‘ಲಿಸನಿಂಗ್‌ (ಕೇಳುವಿಕೆ) ಪವರ್‌ + ಗ್ರಾಸ್ಪಿಂಗ್‌ (ಗ್ರಹಣ) ಪವರ್‌ = ಮೆಮೊರಿ ಪವರ್‌’. ಹೀಗಾಗಿ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಕೇಳಿಸಿಕೊಳ್ಳುವ ಶಕ್ತಿ ಹಾಗೂ ಗ್ರಹಣಶಕ್ತಿಯನ್ನು ರೂಢಿಸಿಕೊಂಡರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ’ ಎಂದು ವ್ಯಾಖ್ಯಾನ ನೀಡಿದರು.

ಮಧ್ಯಾಹ್ನದ ವೇಳೆ ಹಿಂದಿ, ವಿಜ್ಞಾನ ಪಾಠ ಕೇಳುವಾಗ ನಿದ್ರೆ ಬರುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಾಗ, ‘ಬೆಳಿಗ್ಗೆಯಿಂದ ಪಾಠ ಕೇಳಿ ದೇಹಕ್ಕೆ ದಣಿವಾಗಿರುತ್ತದೆ. ಹೀಗಾಗಿ ಮಧ್ಯಾಹ್ನದ ವೇಳೆ ಲಘುವಾಗಿ ಊಟ ಮಾಡಬೇಕು. ಒಣಹಣ್ಣು ಇಲ್ಲವೇ ಕಿತ್ತಲೆ, ಸೇಬುಹಣ್ಣುಗಳನ್ನು ತಿನ್ನುವುದರಿಂದ ಪೋಷಕಾಂಶ ಸಿಗುತ್ತದೆ. ಉಲ್ಲಾಸದಿಂದ ಪಾಠ ಕೇಳಲು ಸಾಧ್ಯ’ ಎಂದು ಸ್ವಾಮೀಜಿ ಸಲಹೆ ನೀಡಿದರು.

‘ಮನಸ್ಸಿನಿಂದ ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟರೆ ಯಾವುದೇ ವಿಷಯವನ್ನಾದರೂ ಕಲಿಯಬಹುದಾಗಿದೆ. ಕಠಿಣ ಪರಿಶ್ರಮದೊಂದಿಗೆ ನಿರ್ಭೀತಿಯಿಂದ ಪರೀಕ್ಷೆಯನ್ನು ಎದುರಿಸಿದರೆ ಸಾಧನೆ ಮಾಡಲು ಸಾಧ್ಯವಿದೆ’ ಎಂದು ಸ್ವಾಮೀಜಿ ಹೇಳಿದರು.

ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಇದ್ದರು. ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಕಾಲಹರಣದಿಂದಾಗಿ ಹಿಂದೆ ಬೀಳುವ ಹುಡುಗರು

‘ಗಂಡುಮಕ್ಕಳು ಅಲ್ಲಿ–ಇಲ್ಲಿ ಸುತ್ತಾಡುವ ಮೂಲಕ ಕಾಲಹರಣ ಮಾಡುತ್ತಾರೆ. ಹೆಣ್ಣುಮಕ್ಕಳಿಗೆ ಸಂಜೆಯ ಬಳಿಕ ಹೊರಗೆ ಹೋಗಲು ನಿರ್ಬಂಧ ಹೇರುವುದರಿಂದ ಮನೆಯಲ್ಲೇ ಕುಳಿತು ಓದುತ್ತಾರೆ. ಹೀಗಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದಾರೆ’ ಎಂದು ಸೇಂಟ್‌ ಪಾಲ್ಸ್‌ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿ ಅಭಿಪ್ರಾಯಪಟ್ಟರು.

‘ಟಿ.ವಿ ನೋಡುವುದು, ಮೊಬೈಲ್‌ನಲ್ಲಿ ವಿಡಿಯೊ ಗೇಮ್ಸ್ ಆಡುವುದರಲ್ಲಿ ವಿದ್ಯಾರ್ಥಿಗಳು ಕಾಲಹರಣ ಮಾಡುತ್ತಿದ್ದಾರೆ. ಅದರ ಬದಲು ಹೆಚ್ಚಿನ ಸಮಯವನ್ನು ಓದಲು ಮೀಸಲಿಟ್ಟರೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬಹುದು. ಅದು ಜೀವನಕ್ಕೆ ದಾರಿಯಾಗಲಿದೆ’ ಎಂದು ಹೇಳಿದರು.

‘ಪಾಲಕರು ಗಂಡು ಮಕ್ಕಳಿಗೆ ಬೈಕ್‌ ಕೊಡಿಸುತ್ತಾರೆ. ಆದರೆ, ಹೆಣ್ಣುಮಕ್ಕಳಿಗೆ ಮಾತ್ರ ನಿರ್ಬಂಧ ಹೇರುತ್ತಾರೆ. ಮಗಳು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವವಳು ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ’ ಎಂದು ಚಿನ್ಮಯಿ ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುರುಘಾ ಶರಣರು, ‘ನನಗೂ ಸಮಾನ ಅಧಿಕಾರ ಇದೆ; ನನಗೂ ಅವಕಾಶ ಕೊಡಿ ಎಂದು ನಿಮ್ಮ ಪೋಷಕರನ್ನು ಅಧಿಕಾರಯುತವಾಗಿ ಕೇಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.