ADVERTISEMENT

ದಾವಣಗೆರೆ: ಡಿಸಿಎಂ ರೈಲ್ವೆ ಮೇಲ್ಸೇತುವೆ ಮೇಲೆ ವಿದ್ಯಾರ್ಥಿ ಶವ ಪತ್ತೆ; ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 9:04 IST
Last Updated 7 ಏಪ್ರಿಲ್ 2019, 9:04 IST
ದಾವಣಗೆರೆಯ ಡಿಸಿಎಂ ಬಳಿ ರೈಲ್ವೆ ಮೇಲ್ಸೇತುವೆ ಮೇಲೆ ಹಳಿ ಮೇಲೆ ಪತ್ತೆಯಾದ ವಿದ್ಯಾರ್ಥಿ ಸಾಗರ್‌ ಶವವನ್ನು ನೋಡಲು ಜನ ಸೇರಿರುವುದು.
ದಾವಣಗೆರೆಯ ಡಿಸಿಎಂ ಬಳಿ ರೈಲ್ವೆ ಮೇಲ್ಸೇತುವೆ ಮೇಲೆ ಹಳಿ ಮೇಲೆ ಪತ್ತೆಯಾದ ವಿದ್ಯಾರ್ಥಿ ಸಾಗರ್‌ ಶವವನ್ನು ನೋಡಲು ಜನ ಸೇರಿರುವುದು.   

ದಾವಣಗೆರೆ: ನಗರದ ಡಿಸಿಎಂ ರೈಲ್ವೆ ಮೇಲ್ಸೇತುವೆ ಮೇಲೆ ಹಳಿಯ ಮೇಲೆ ಭಾನುವಾರ ಬೆಳಿಗ್ಗೆ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಶವವನ್ನು ಇಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮೃತನನ್ನು ನಿಟುವಳ್ಳಿಯ ಆಂಜನೇಯ ಬಡಾವಣೆಯ 5ನೇ ಕ್ರಾಸ್‌ನ ಮಂಡಕ್ಕಿ ಓಣಿಯ ಸಾಗರ್‌ (18) ಎಂದು ಗುರುತಿಸಲಾಗಿದೆ. ಆತ ಇತ್ತೀಚೆಗಷ್ಟೇ ಪಥಮ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಸಾಗರ್‌ ಕುಟುಂಬಕ್ಕೆ ಆಘಾತವಾಗಿದ್ದು, ಮಂಡಕ್ಕಿ ಓಣಿಯಲ್ಲಿ ಸೂತಕದ ಛಾಯೆ ಆವರಿಸಿದೆ.

ಬೆಳಿಗ್ಗೆ 8 ಗಂಟೆ ಸುಮಾರಿಗೆ ರೈಲ್ವೆ ಹಳಿಯ ಮೇಲೆ ಶವ ಇರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಹಳಿಗಳ ನುಡುವೆ ದೇಹ ಇದ್ದುದರಿಂದ ರೈಲು ಸಂಚರಿಸಿದರೂ ದೇಹ ಛಿದ್ರವಾಗಿರಲಿಲ್ಲ. ಈ ಸುದ್ದಿ ಹರಡುತ್ತಿದ್ದಂತೆ ನೂರಾರು ಜನ ಬಂದು ಜಮಾಯಿಸಿದರು. ಮೃತ ವ್ಯಕ್ತಿ ಸಾಗರ್‌ ಎಂಬ ವಿಷಯ ತಿಳಿಯುತ್ತಿದ್ದಂತೆ ಪೋಷಕರು, ಸಂಬಂಧಿಕರು ಹಾಗೂ ಸ್ನೇಹಿತರು ತಂಡೋಪ ತಂಡವಾಗಿ ಬಂದರು. ಪೋಷಕರ ರೋದನ ಮುಗಿಲು ಮುಟ್ಟುತ್ತಿತ್ತು. ಕಣ್ಣೀರು ಹಾಕುತ್ತಿದ್ದ ಸ್ನೇಹಿತರನ್ನೂ ಸಮಾಧಾನಪಡಿಸುತ್ತಿದ್ದ ದೃಶ್ಯ ಕಂಡುಬಂತು.

ADVERTISEMENT

ರೈಲ್ವೆ ಪೊಲೀಸರು ಸ್ಥಳಕ್ಕೆ ಬಂದು ಮಹಜರ್‌ ಮಾಡಿದರು. ಬಳಿಕ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಶವವನ್ನು ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.