ADVERTISEMENT

ಸ್ವ್ಯಾಬ್‌ ಪರೀಕ್ಷೆಗೆ ಸರದಿಯಲ್ಲಿ ಸಾವಿರ ಮಂದಿ

ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಸರ್ಜನ್‌ ಡಾ. ನಾಗರಾಜ್‌

ಬಾಲಕೃಷ್ಣ ಪಿ.ಎಚ್‌
Published 29 ಜೂನ್ 2020, 15:35 IST
Last Updated 29 ಜೂನ್ 2020, 15:35 IST
ಡಾ. ನಾಗರಾಜ್‌
ಡಾ. ನಾಗರಾಜ್‌   

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಒಂದೇ ಸಮನೆ ಹೆಚ್ಚಾದಾಗ ಜನರು ಭೀತರಾದರು. ಹಾಗಾಗಿ ಗಂಟಲು ದ್ರವ ಪರೀಕ್ಷೆಗೆ ಜನರು ಬಂದು ಸರದಿಯಲ್ಲಿ ನಿಲ್ಲತೊಡಗಿದರು. ಕೆಲವು ದಿನ ಸಾವಿರ ದಾಟಿತ್ತು’.

ಕೊರೊನಾದಿಂದ ಒಮ್ಮೆಲೇ ಹೆಚ್ಚಾದ ಒತ್ತಡವನ್ನು ಜಿಲ್ಲಾ ಜಿಗಟೇರಿ ಆಸ್ಪತ್ರೆಯ ಸೂಪರಿಂಟೆಂಡೆಂಟ್‌, ಜಿಲ್ಲಾ ಸರ್ಜನ್‌ ಡಾ. ನಾಗರಾಜ್‌ ವಿವರಿಸಿದರು.

‘ಮಾರ್ಚ್‌ ಕೊನೇವಾರದಲ್ಲಿ ವಿದೇಶದಿಂದ ಬಂದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಾಗ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಒಂದು ವಾರ್ಡ್‌ ಅನ್ನು ಅಷ್ಟೇ ಐಸೊಲೇಶನ್‌ ಮಾಡಲಾಗಿತ್ತು. ಬಳಿಕ ಒಂದು ತಿಂಗಳು ಪ್ರಕರಣ ಪತ್ತೆಯಾಗಿರಲಿಲ್ಲ. ಏಪ್ರಿಲ್‌ ಕೊನೆಗೆ ಒಮ್ಮೆಲೇ ಸೋಂಕು ಕಾಣಿಸಲು ಆರಂಭಗೊಂಡಿತು. ಒಂದೇ ವಾರದಲ್ಲಿ ನಾಲ್ಕು ಮಂದಿ ಮೃತಪಟ್ಟರು. ಕೊರೊನಾ ಅಂದರೆ ಭಯ ಪಡುವ ವಾತಾವರಣ ಅದಾಗಿತ್ತು. ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಕೆಲಸ ಮಾಡಲೂ ಹಿಂಜರಿಯುಂಥ ಸನ್ನಿವೇಶ. ಇಂಥ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡಬೇಕಿತ್ತು. ಹೋರಾಟಕ್ಕೆ ವೈದ್ಯರು, ನರ್ಸ್‌, ಆಯಾ, ಸ್ವಚ್ಛತಾ ಸಿಬ್ಬಂದಿ, ಚಾಲಕರು ಹೀಗೆ ಎಲ್ಲರನ್ನೂ ಒಗ್ಗಟ್ಟಿನಿಂದ ಒಯ್ಯುವ ಸವಾಲು ಎದುರಿಗಿತ್ತು’ ಎಂದು ವಿವರಿಸಿದರು.

ADVERTISEMENT

‘ಆಸ್ಪತ್ರೆಗೆ ಏನು ಬೇಕಿದ್ದರೂ ಕೇಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪೂರ್ಣ ಸಹಕಾರ ನೀಡಿದರು. ಹಾಗಾಗಿ 12 ವಾರ್ಡ್‌ಗಳ 140 ಬೆಡ್‌ಗಳಿಗೆ ಆಕ್ಸಿಜನ್‌ ಪೈಪ್‌ಲೈನ್‌ ಮಾಡಲು ಸಾಧ್ಯವಾಯಿತು. ಬಿಪಿ, ಪಲ್ಸ್‌ ವಿವಿಧ ಪರೀಕ್ಷೆಗಳಿಗಾಗಿ 20 ಮಲ್ಟಿಪ್ಯಾರ ಮಾನಿಟರ್‌ಗಳನ್ನು ಅಳವಡಿಸಲಾಯಿತು. ಪೋರ್ಟೆಬಲ್‌ ಎಕ್ಸ್‌ರೆ ಮೆಷಿನ್‌ ಬಂತು. ಜಿಲ್ಲಾ ಆಸ್ಪತ್ರೆಯಲ್ಲಿ ಆರು ವೆಂಟಿಲೇಟರ್‌ಗಳಿದ್ದವು. ಅದರ ಜತೆಗೆ ಹೈಫ್ಲೋ ನೇಶಲ್‌ ಆಕ್ಸಿಜನ್‌ ಮೆಶಿನ್‌ ಎರಡು ಸ್ಥಾಪಿಸಲಾಗಿದೆ. ಇದರಿಂದ ಕೊರೊನಾ ಸೋಂಕು ಇದ್ದು, ಗಂಭೀರ ಸ್ಥಿತಿಯಲ್ಲಿರುವವರನ್ನು ಗುಣಪಡಿಸಿ ಕಳುಹಿಸಲು ಸಾಧ್ಯವಾಯಿತು. ಈವರೆಗೆ 246 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿರುವುದೇ ಇದಕ್ಕೆ ಸಾಕ್ಷಿ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಕಲ್‌ ಕಾಲೇಜು ಇಲ್ಲ. ಆದರೂ ಸುಮಾರು ₹ 1 ಕೋಟಿ ವೆಚ್ಚದಲ್ಲಿ ಕೋವಿಡ್‌ ಲ್ಯಾಬ್‌ ಆರಂಭಗೊಂಡಿದೆ. ಹಲವು ಜಿಲ್ಲೆಗಳಿಗೆ ಸಿಗದ ಈ ಸೌಲಭ್ಯ ನಮಗೆ ದೊರಕಿದೆ. ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರು ಮೂಗಲ್ಲಿ ಬೆರಳಿಡುವಂತೆ ಕೆಲಸ ಮಾಡುತ್ತಿದೆ. ಮೇ 16ರವರೆಗೆ ನಮ್ಮವರಷ್ಟೇ ಕೆಲಸ ಮಾಡಿದ್ದಾರೆ. ಆನಂತರ ಜಿಲ್ಲಾಧಿಕಾರಿಯವರೇ ಜೆಜೆಎಂ ಎಸ್‌ಎಸ್‌ ಮೆಡಿಕಲ್‌ ಕಾಲೇಜಿನ ವೈದ್ಯರನ್ನು ಸೇರಿಸಿಕೊಂಡು 12 ಮಂದಿಯ ತಜ್ಞರ ಸಮಿತಿ ಮಾಡಿದರು. ಎರಡು ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲರು ಆಹ್ವಾತನಿತರಾಗಿರುವರು ಎಂದು ತಿಳಿಸಿದರು.

ದಾವಣಗೆರೆಯಲ್ಲದೇ ಹಾವೇರಿ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯವರೂ ಬರುವ ಆಸ್ಪತ್ರೆ ಇದು. ಇಲ್ಲಿ ಕೋವಿಡ್‌ ಆಸ್ಪತ್ರೆ ಎಂದು ಪ್ರತ್ಯೇಕ ಮಾಡಲಾಯಿತಾದರೂ ಪಕ್ಕದಲ್ಲಿಯೇ ಓಪಿಡಿ, ತುರ್ತು ಹೆರಿಗೆ ಆಸ್ಪತ್ರೆ, ಕ್ಯಾಶುವಲಿಟಿ ಎಲ್ಲವೂ ನಡೆಯುತ್ತಲೇ ಇದೆ. ಎಲ್ಲವನ್ನು ಹಂತಹಂತವಾಗಿ ಉನ್ನತೀಕರಿಸಲಾಗುತ್ತಿದೆ. ಎಲ್ಲ ಲ್ಯಾಬ್‌ಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಎಂದರು.

‘ನಮ್ಮವರಿಗೇ ಬಂದಾಗ ಕಷ್ಟ’

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ, ಅವರನ್ನು ನೋಡಿಕೊಳ್ಳುವ ನಮ್ಮ ವೈದ್ಯರು, ಶುಶ್ರೂಷಕರು, ಸಿಬ್ಬಂದಿಗೆ ವೈರಸ್ ಬಂದಾಗ ಬಹಳ ಕಷ್ಟವಾಗಿ ಬಿಡುತ್ತದೆ. ಕೆಲಸ ನಿಲ್ಲಿಸುವಂತಿಲ್ಲ. ಆದರೆ ಸೋಂಕು ಬಂದ ನಮ್ಮವರ ಸಂಪರ್ಕದ ಎಲ್ಲರನ್ನು ಕ್ವಾರಂಟೈನ್‌ ಮಾಡಬೇಕು. ಆಗ ಅವರ ಜಾಗಕ್ಕೆ ಬೇರೆಯವರು ಬರಬೇಕು. ಈಚೆಗೆ ಎಕ್ಸ್‌ರೆ ಟೆಕ್ನಿಷಿಯನ್‌ಗೆ ಬಂದಿತ್ತು. ಆಗ ಬೇರೆ ಕಡೆಯಿಂದ ಟೆಕ್ನಿಷಿಯನ್‌ರನ್ನು ಕರೆಸಬೇಕಾಗಿತ್ತು ಎಂದು ಡಾ. ನಾಗರಾಜ್‌ ವಿವರಿಸಿದರು.

‘ನನ್ನ ಪತ್ನಿಯೂ ವೈದ್ಯೆ ಆಗಿರುವುದರಿಂದ ಮನೆಯಲ್ಲಿ ಸಮಸ್ಯೆ ಆಗಲಿಲ್ಲ. ನಾನು ಪ್ರತ್ಯೇಕ ಕೊಠಡಿಯಲ್ಲಿ ಇರುತ್ತಿದ್ದೆ. ಮಗಳು, ಮಗ ಕೂಡ ಸಹಕಾರ ನೀಡಿದರು’ ಎಂದು ನೆನಪಿಸಿಕೊಂಡರು.

ತಂಡದ ಕೆಲಸ

ಒಬ್ಬರಿಂದ, ಒಂದು ಇಲಾಖೆಯಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿ ಬೇರೆ ಬೇರೆ ತಂಡಗಳನ್ನು ಮಾಡಿದ್ದರು. ಸರ್ವೇಕ್ಷಣಾ ತಂಡ ಪತ್ತೆ ಹಚ್ಚುವ ಕೆಲಸ ಮಾಡಿದರೆ, ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಡಿಎಚ್‌ಒ ತಂಡ ಒದಗಿಸಿತ್ತು. ಕರೆತಂದವರನ್ನು ನಾವು ಗುಣಪಡಿಸಿ ಕಳುಹಿಸುವ ಕೆಲಸ ಮಾಡುತ್ತಿದ್ದೇವೆ. ಹೀಗೆ ನಾನಾ ಇಲಾಖೆಗಳ ಸಹಕಾರದಿಂದ ಮಾತ್ರ ನಿಯಂತ್ರಣ ಸಾಧ್ಯ. ಎಲ್ಲ ವೈದ್ಯರು, ನರ್ಸ್‌, ಆಯಾ, ಸ್ವಚ್ಛತಾ ಸಿಬ್ಬಂದಿ, ಲ್ಯಾಬ್‌ ಟೆಕ್ನಿಷಿಯನ್ಸ್‌ ಎಲ್ಲರೂ ಕೆಲಸ ಮಾಡಿದ್ದಾರೆ ಎಂದು ಸರ್ಜನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.