ADVERTISEMENT

ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು ಹೆಚ್ಚಿದ ಕೂಗು: ಮುಖ್ಯಮಂತ್ರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 11:04 IST
Last Updated 5 ಜನವರಿ 2025, 11:04 IST
<div class="paragraphs"><p> ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ದಾವಣಗೆರೆ: ಈ ಮೊದಲೇ ಘೋಷಣೆ ಮಾಡಿದಂತೆ ವಿಶ್ವ ಕನ್ನಡ ಸಮ್ಮೇಳನವನ್ನು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಆಯೋಜಿಸಲು ಕೂಡಲೇ ದಿನಾಂಕ ನಿಗದಿಪಡಿಸಬೇಕು ಹಾಗೂ ಮುಂಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಭಾನುವಾರ ದಾವಣಗೆರೆಗೆ ಆಗಮಿಸಿದ ಮುಖ್ಯಮಂತ್ರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ನೇತೃತ್ವದ ನಿಯೋಗ ಭೇಟಿ ಮಾಡಿ ಚರ್ಚೆ ನಡೆಸಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಜೊತೆಯಲ್ಲಿದ್ದರು.

ADVERTISEMENT

‘ಮೈಸೂರಿನಲ್ಲಿ ಮೊದಲನೇ ಹಾಗೂ ಬೆಳಗಾವಿಯಲ್ಲಿ 2ನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲಾಗಿದೆ. 3ನೇ ವಿಶ್ವ ಕನ್ನಡ ಸಮ್ಮೇಳನ ಹಲವು ವರ್ಷಗಳಿಂದ‌ ನನೆಗುದಿಗೆ ಬಿದ್ದಿದೆ. ಈಗಾಗಲೇ ನಿರ್ಧಾರ ಕೈಗೊಂಡಂತೆ 3ನೇ ವಿಶ್ವ ಕನ್ನಡ ಸಮ್ಮೇಳನವು ದಾವಣಗೆರೆ ನಗರದಲ್ಲಿಯೇ ನಡೆಸಲು ತಾವು ಸೂಕ್ತ ನಿರ್ಣಯ ಕೈಗೊಂಡು ರಾಜ್ಯ ಬಜೆಟ್‌ನಲ್ಲಿ ಹಣವನ್ನು ಕಾಯ್ದಿರಿಸಬೇಕು’ ಎಂದು ಕೋರಲಾಯಿತು.

‘ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕು ಎಂಬ ತೀರ್ಮಾನವನ್ನು 2017ರಲ್ಲಿ ಸಚಿವ ಸಂಪುಟ ಕೈಗೊಂಡಿತ್ತು. ಮುಖ್ಯಮಂತ್ರಿ ಆಗಿದ್ದ ತಾವೇ ₹ 30 ಕೋಟಿ ಅನುದಾನ ಬಿಡುಗಡೆ ಮಾಡಿದ್ದೀರಿ. 2023ರಲ್ಲಿ ಹಾವೇರಿ ಹಾಗೂ 2024 ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದ ಕ್ರಿಯಾಶೀಲ, ಸೃಜನಶೀಲ ಹಾಗೂ ಕನ್ನಡ ನಾಡು ನುಡಿಯನ್ನು ಅದಮ್ಯವಾಗಿ

ಪ್ರೀತಿಸುವ ತಾವು ಕೂಡಲೇ ನಿರ್ಧಾರ ಕೈಗೊಳ್ಳಬೇಕು’ ಎಂದು‌ ಮನವಿ ಮಾಡಿದರು.

ಮಾರ್ಚ್‌ನಲ್ಲಿ ಬಜೆಟ್‌ ಮಂಡಿಸಲಾಗುತ್ತದೆ. ಬಜೆಟ್‌ಗೂ ಮುನ್ನ ಪೂರ್ವಭಾವಿ ಸಭೆ ನಡೆಯಲಿದ್ದು, ಆಗ ವಿಶ್ವ ಕನ್ನಡ ಸಮ್ಮೇಳನದ ಅನುದಾನಕ್ಕೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲಾಗುವುದು
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.