ADVERTISEMENT

ಅಂಕೋಲಾ ರೈಲ್ವೆ ಮಾರ್ಗ: 15 ದಿನಗಳಲ್ಲಿ ವರದಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 6:45 IST
Last Updated 17 ಸೆಪ್ಟೆಂಬರ್ 2011, 6:45 IST

ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣದಿಂದ ಪಶ್ಚಿಮ ಘಟ್ಟದ ಜೀವ ವೈವಿಧ್ಯ ಹಾಗೂ ಪರಿಸರದ ಮೇಲೆ ಆಗಬಹುದಾದ ಪರಿಣಾಮಗಳ ವಿಷಯವಾಗಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ರಚಿಸಿದ್ದ ಡಾ.ಟಿ.ವಿ. ರಾಮಚಂದ್ರ ನೇತೃತ್ವದ ತಜ್ಞರ ಸಮಿತಿ ಇನ್ನು 15 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ.

`ಅದಿರು ರಫ್ತಿನ ಮೇಲೆ ನಿಷೇಧ ಹಾಗೇ ಮುಂದುವರಿದರೆ ಈ ಮಾರ್ಗದಲ್ಲಿ ಸರಕು ಸಾಗಾಟ ಹಾಗೂ ಪ್ರಯಾಣಿಕರ ದಟ್ಟಣೆ ಹೇಗಿರುತ್ತದೆ ಎಂಬ ಮಾಹಿತಿಯನ್ನು ಒದಗಿಸುವಂತೆ ನೈರುತ್ಯ ರೈಲ್ವೆ ವಲಯಕ್ಕೆ ಕೇಳಿದ್ದೇವೆ. ಅವರಿಂದ ಮಾಹಿತಿ ಸಿಕ್ಕ ಕೂಡಲೇ ನಮ್ಮ ವರದಿಯನ್ನು ಪೂರ್ಣಗೊಳಿಸುತ್ತೇವೆ. ಈಗಾಗಲೇ ಶೇ 80ರಷ್ಟು ವರದಿಯನ್ನು ಸಿದ್ಧಪಡಿಸಲಾಗಿದೆ~ ಎಂದು ಸಮಿತಿ ಮುಖ್ಯಸ್ಥ ಡಾ. ರಾಮಚಂದ್ರ ತಿಳಿಸಿದರು.

`ರೈಲ್ವೆ ಮಾರ್ಗ ರಚನೆಗೆ ನಿರ್ಧಾರ ಮಾಡಿದ ಸಮಯಕ್ಕೂ ಈಗಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಅದಿರು ರಫ್ತು ನಿಷೇಧ ಅದರಲ್ಲಿ ಮಹತ್ವದ್ದು. ಆದ್ದರಿಂದಲೇ ರೈಲ್ವೆಯಿಂದ ಮಾಹಿತಿ ಕೇಳಿದ್ದೇವೆ~ ಎಂದು ತಿಳಿಸಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ  ಒಂಬತ್ತು ಜನ ತಜ್ಞರ ತಂಡ ಏಪ್ರಿಲ್‌ನಿಂದ ಜುಲೈವರೆಗೆ ಉದ್ದೇಶಿತ ರೈಲು ಮಾರ್ಗದ ಉದ್ದಕ್ಕೂ ಸಂಚರಿಸಿ, ಮಾರ್ಗ ರಚನೆಯಿಂದ ಆಗಬಹುದಾದ ಪರಿಣಾಮಗಳ ಕುರಿತು ವಿವರವಾದ ಮಾಹಿತಿ ಸಂಗ್ರಹಿಸಿದೆ. ಪರಿಸರದ ಹಾನಿಯನ್ನು ಆದಷ್ಟು ತಗ್ಗಿಸಲು ಕೆಲವು ಶಿಫಾರಸುಗಳನ್ನೂ ತನ್ನ ವರದಿಯಲ್ಲಿ ಅಳವಡಿಸಲು ಅದು ಉದ್ದೇಶಿಸಿದೆ.

`ನಮ್ಮ ಜವಾಬ್ದಾರಿಯನ್ನು ಬಹುತೇಕ ಪೂರ್ಣಗೊಳಿಸಿದ್ದೇವೆ. ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಜೊತೆಗೆ ಧಾರವಾಡ, ಶಿರಸಿ ಮತ್ತು ಸಿದ್ಧಾಪುರಗಳಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ ಕೂಡಲೇ ವರದಿ ಸಿದ್ಧವಾಗಲಿದೆ~ ಎಂದು ವಿವರಿಸಿದರು.

`168 ಕಿ.ಮೀ. ಉದ್ದದ ಉದ್ದೇಶಿತ ರೈಲು ಮಾರ್ಗ ರಚನೆಗೆ ಒಟ್ಟಾರೆ 1,135 ಹೆಕ್ಟೇರ್ ಪ್ರದೇಶ ಬೇಕಿದೆ. ಅದರಲ್ಲಿ 720 ಹೆಕ್ಟೇರ್ ಅರಣ್ಯ, 210 ಹೆಕ್ಟೇರ್ ಒಣಭೂಮಿ, 179 ಹೆಕ್ಟೇರ್ ಜಲಾನಯನ ಪ್ರದೇಶ, 26 ಹೆಕ್ಟೇರ್ ಜನ ವಸತಿ ಪ್ರದೇಶ ಸೇರಿದೆ. ಪಶ್ಚಿಮ ಘಟ್ಟದ ಈ ಭಾಗದಲ್ಲಿ ಈಗಾಗಲೇ 790 ಹೆಕ್ಟೇರ್ ಅರಣ್ಯ ಜೀರ್ಣವಾಗಿದ್ದರಿಂದ, ಮಾರ್ಗ ರಚನೆಗೆ ತೆಗೆಯುವ ಮರಗಳಿಗಿಂತ ಅಧಿಕ ಮರಗಳನ್ನು ಆ ಪ್ರದೇಶದಲ್ಲಿ ಬೆಳೆಯಬಹುದಾಗಿದೆ~ ಎಂದು ಅವರು ಹೇಳಿದರು.

`ಕ್ಷೇತ್ರ ಕಾರ್ಯ ಕೈಗೊಳ್ಳುವ ಮುನ್ನ ನಾವು 25 ವರ್ಷಗಳ ಪಶ್ಚಿಮ ಘಟ್ಟದ ಅರಣ್ಯ ಸ್ಥಿತಿ-ಗತಿ ಅಧ್ಯಯನ ಮಾಡಿದ್ದೇವೆ. ಅದಕ್ಕಾಗಿ ಉಪಗ್ರಹ ಆಧಾರಿತ ಚಿತ್ರಗಳ ಸಹಾಯವನ್ನೂ ಪಡೆದಿದ್ದೇವೆ. ಪ್ರತಿ 12 ಕಿ.ಮೀ.ಗೆ ಒಂದು ಸೆಕ್ಟರ್‌ನಂತೆ 12 ಸೆಕ್ಟರ್ ಮಾಡಿ ಪ್ರತಿಯೊಂದು ಪ್ರದೇಶದ ವಿವರವಾದ ಅಧ್ಯಯನ ನಡೆಸಿದ್ದೇವೆ. ಮಾರ್ಗ ರಚನೆಯಾದರೆ 2040ರ ವೇಳೆಗೆ ಶೇ 19, ಇಲ್ಲದಿದ್ದರೆ ಶೇ 11ರಷ್ಟು ಅರಣ್ಯ ಜೀರ್ಣವಾಗಲಿದೆ~ ಎಂದು ಅವರು ವಿವರಿಸಿದರು.

`ರೈಲ್ವೆ ಮಾರ್ಗ ನಿರ್ಮಾಣಕ್ಕಿಂತ ಹುಬ್ಬಳ್ಳಿ-ಅಂಕೋಲಾ ರಸ್ತೆ ಅಗಲೀಕರಣ ಪರಿಸರಕ್ಕೆ ಹೆಚ್ಚು ಅಪಾಯಕಾರಿ. ಆದ್ದರಿಂದ ರಸ್ತೆ ಅಗಲೀಕರಣಕ್ಕಿಂತ ರೈಲ್ವೆ ಮಾರ್ಗ ನಿರ್ಮಾಣವೇ ಹೆಚ್ಚು ಸೂಕ್ತ~ ಎಂದು ಅವರು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು.

`ಘಟ್ಟ ಪ್ರದೇಶದಲ್ಲಿ ನಿತ್ಯ ಹರಿದ್ವರ್ಣ ಅರಣ್ಯ ಪ್ರದೇಶವಿದೆ. ಯಲ್ಲಾಪುರದ ಬಳಿ ಪ್ರತಿ ಹೆಕ್ಟೇರ್‌ಗೆ 597 ಮರಗಳು ಕಂಡು ಬರುತ್ತವೆ. 134 ಪ್ರಭೇದದ ಮರಗಳು ಇಲ್ಲಿ ಸಿಗುತ್ತವೆ. ಉದ್ದೇಶಿತ ಮಾರ್ಗ ಬೇಡ್ತಿ ಜಲಾನಯನ ಪ್ರದೇಶದಲ್ಲಿ ಹಾದು ಹೋಗುತ್ತದೆ. ಈ ಪ್ರದೇಶವನ್ನು ಇತ್ತೀಚೆಗಷ್ಟೇ ಜೀವ ವೈವಿಧ್ಯ ರಕ್ಷಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಇದು ಅಣಸಿ-ದಾಂಡೇಲಿ ಹುಲಿ ಅಭಯಾರಣ್ಯಕ್ಕೆ ಕೇವಲ ಆರು ಕಿ.ಮೀ. ಅಂತರದಲ್ಲಿದೆ~ ಎಂದು ಅವರು ಹೇಳಿದರು.

`ರೈಲ್ವೆ ಮಾರ್ಗ 105 ಕಿ.ಮೀ. ಬಯಲು ಪ್ರದೇಶ ಹಾಗೂ 63 ಕಿ.ಮೀ. ಘಟ್ಟ ಪ್ರದೇಶದಲ್ಲಿ ಹಾದು ಹೋಗುತ್ತದೆ. 329 ಸೇತುವೆ ಹಾಗೂ 29 ಸುರಂಗಗಳನ್ನು ಈ ಮಾರ್ಗದಲ್ಲಿ ನಿರ್ಮಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. `ಒಂದು ಗೂಡ್ಸ್ ರೈಲು ಸರಾಸರಿ 4,000 ಟನ್ ಸರಕು ಸಾಗಾಟ ಮಾಡುತ್ತದೆ. ಇಷ್ಟೇ ಪ್ರಮಾಣದ ಸರಕನ್ನು ಲಾರಿ ಮೂಲಕ ಸಾಗಿಸಲು 267 ಲಾರಿಗಳು ಬೇಕಾಗುತ್ತದೆ. ಎರಡು ಸಾಧನಗಳು ಬಳಸುವ ಇಂಧನ ಪ್ರಮಾಣ ನೋಡಿದಾಗ ರೈಲ್ವೆಯಿಂದ ಆಗುವ ಮಾಲಿನ್ಯ ಪ್ರಮಾಣ ತುಂಬಾ ಕಡಿಮೆ~ ಎಂದು ಹೇಳಿದರು.

`ಕಲಘಟಗಿ ಮತ್ತು ಕಿರುವತ್ತಿ ಮಧ್ಯದ ಅಂದಾಜು 11 ಕಿ.ಮೀ. ಪ್ರದೇಶ ಆನೆಗಳ ಕಾರಿಡಾರ್‌ನಲ್ಲಿ ಬರುತ್ತದೆ. ಆನೆಗಳ ಪರಿಸರವನ್ನು ಹಾಳು ಮಾಡದಂತೆ, ಈ ಪ್ರದೇಶದಲ್ಲಿ ಸುರಂಗ ಮಾರ್ಗವನ್ನೇ ನಿರ್ಮಿಸಬೇಕು ಎಂಬ ಸಲಹೆಯನ್ನು ಸಮಿತಿ ನೀಡಿದೆ~ ಎಂದು ವಿವರಿಸಿದರು.

`ಕ್ಯಾಸಲ್ ರಾಕ್‌ನಲ್ಲಿ ಅರಣ್ಯ ಪ್ರದೇಶಕ್ಕೆ ಹಾನಿಯಾಗದಂತೆ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಅಂತಹದ್ದೇ ಮಾದರಿಯನ್ನು ಇಲ್ಲಿಯೂ ಅನುಸರಿಸಬೇಕು. ಆನೆಗಳಿಗೆ ಬೇಕಾದಂತಹ ಮರಗಳನ್ನೇ ಈ ಭಾಗದಲ್ಲಿ ಬೆಳೆಸಬೇಕು~ ಎಂಬ ಸಲಹೆಯನ್ನೂ ಅವರು ನೀಡಿದರು.

`ಉದ್ದೇಶಿತ 20 ನಿಲ್ದಾಣಗಳ ಬದಲು ಕೇವಲ 13 ನಿಲ್ದಾಣಗಳನ್ನು ನಿರ್ಮಿಸಬೇಕು. ಸೋಲಾರ್ ಹಾಗೂ ಬಯೋ ಗ್ಯಾಸ್ ಮೂಲಕ ವಿದ್ಯುಚ್ಛಕ್ತಿ ಉತ್ಪಾದನೆ ಮಾಡಬೇಕು. ಘನತ್ಯಾಜ್ಯ ನಿರ್ವಹಣೆಯನ್ನು ಅತ್ಯಂತ ವೈಜ್ಞಾನಿಕವಾಗಿ ಮಾಡಬೇಕು ಎಂಬ ಶಿಫಾರಸುಗಳನ್ನು ಮಾಡಲಾಗುವುದು~ ಎಂದು ತಿಳಿಸಿದರು.

`ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯವಾಗಿದ್ದು, ಜಾಗೃತಿ ವಹಿಸಬೇಕಿದೆ. ಪಕ್ಷಿಗಳು ಗೂಡು ಕಟ್ಟುವ ಸಮಯದಲ್ಲಿ ಕಾಮಗಾರಿಯಿಂದ ಶಬ್ದ ಮಾಲಿನ್ಯ ಆಗದಂತೆ ನೋಡಿಕೊಳ್ಳಬೇಕಿದೆ. ಸುರಂಗ ನಿರ್ಮಾಣ ಮಾಡುವಾಗ ಆದಷ್ಟು ಕಡಿಮೆ ಪ್ರಮಾಣದಲ್ಲಿ ಬ್ಲಾಸ್ಟಿಂಗ್ ಮಾಡಬೇಕು. ಕಾರ್ಮಿಕರ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ದಟ್ಟ ಜೀವ ವೈವಿಧ್ಯ ಸಾಂದ್ರತೆ ಪ್ರದೇಶವಾಗಿದ್ದರಿಂದ ತಾಳಗುಪ್ಪ-ಹೊನ್ನಾವರ ಮಾರ್ಗವನ್ನು ಯಾವುದೇ ಕಾರಣಕ್ಕೂ ನಿರ್ಮಾಣ ಮಾಡಬಾರದು~ ಎಂದು ಅಭಿಪ್ರಾಯಪಟ್ಟರು. ಎಂ.ಡಿ. ಸುಭಾಷ್ಚಂದ್ರನ್ ಸೇರಿದಂತೆ ಸಮಿತಿಯ ಇತರ ಸದಸ್ಯರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.