ADVERTISEMENT

ಅಡುಗೆ ಅನಿಲ: ಆತಂಕ ಪಡುವ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 6:45 IST
Last Updated 19 ಜನವರಿ 2012, 6:45 IST

ಧಾರವಾಡ: “ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆ ಕುರಿತಂತೆ ಸಧ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಸರ್ವ ಕ್ರಮಗಳನ್ನು ಕೈಗೊಳ್ಳಲಾಗು ತ್ತಿದ್ದು, ಜನತೆ ಆತಂಕಕ್ಕೆ ಒಳಗಾಗ ಬಾರದು” ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದ್ದಾರೆ.

ದಕ್ಷಿಣ ಭಾರತದ ಸಗಟು ಸಾಗಾಣಿಕೆ ದಾರರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿಗಳು, ಆಹಾರ ಇಲಾಖೆ ಅಧಿಕಾರಿಗಳು, ಅಡುಗೆ ಅನಿಲ ಪೂರೈಸುವ ಬಿಪಿಸಿಎಲ್, ಎಚ್‌ಪಿಸಿಎಲ್ ಹಾಗೂ ವಿತರಕರ ಸಭೆಯನ್ನು ಕರೆದು ಜಿಲ್ಲೆಯಲ್ಲಿ ಸಿಲಿಂಡರ್ ಪೂರೈಕೆ ವಸ್ತು ಸ್ಥಿತಿಯ ಅವಲೋಕನ ನಡೆಸಿದರು.

ಬಿಪಿಸಿಎಲ್ ಪ್ರತಿನಿಧಿ, ತಮ್ಮ ಕಂಪೆನಿ ಯಿಂದ ಸಿಲಿಂಡರ್‌ಗಳನ್ನು ಪೂರೈಸಲು ಒಂದು ವಾರದವರೆಗೆ ತೊಂದರೆ ಇಲ್ಲ ಎಂದರು. ಎಚ್‌ಪಿಸಿಎಲ್ ಪ್ರತಿನಿಧಿ, ತಮಗೆ ಮಂಗಳೂರು ಹಾಗೂ ಸೋಲಾಪುರಗಳಿಂದ ಅನಿಲ ಪೂರೈಕೆ ಆಗುತ್ತಿದ್ದು, ಸದ್ಯ ಬೇಡಿಕೆಗೆ ಶೇ.50 ರಷ್ಟನ್ನು ಮಾತ್ರ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಆಹಾರ ಇಲಾಖೆಯ ಉಪ ನಿರ್ದೇಶಕ ಕೆ.ಎಸ್.ಕಲ್ಲನಗೌಡರ, ಎಚ್‌ಪಿಸಿಎಲ್ ಮತ್ತು ಐಓಸಿಎಲ್ ಕಂಪೆನಿ ಗಳಿಂದ ಸಿಲಿಂಡರ್ ಪೂರೈಕೆಯಲ್ಲಿ ಮುಷ್ಕರದ ಮೊದಲಿನಿಂದಲೇ ಸಮಸ್ಯೆ ಇರುವುದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಆಹಾರ ಇಲಾಖೆ ಸಹಾಯಕ ನಿರ್ದೇಶಕ ವಾಲಗದ ಅವರು, ಹುಬ್ಬಳ್ಳಿ ಹಾಗೂ ಧಾರವಾಡ ನಗರದಲ್ಲಿ  ಎಚ್‌ಪಿಸಿಎಲ್ ಕಂಪೆನಿ ಮೊಬೈಲ್ ಮೂಲ ಕವೇ ಸಿಲಿಂಡರ್ ಬುಕ್ಕಿಂಗ್ ಮಾಡುವು ದನ್ನು ಕಡ್ಡಾಯ ಮಾಡಿರುವು ದರಿಂದ ಬಡವರಿಗೆ ಹಾಗೂ ಕೊಳಚೆ ಪ್ರದೇಶದ ಗ್ರಾಹಕರಿಗೆ ತೊಂದರೆ ಯಾಗಿದೆ ಎಂದರು.

ಮೊಬೈಲ್ ಮೂಲಕ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡುವುದು ಕಡ್ಡಾಯವಾಗಬಾರದು. ವಿತರಕರು ಈ ಮೊದಲಿನಂತೆ ತಮ್ಮಲ್ಲಿ ಸಿಲಿಂಡರ್ ಬೇಡಿಕೆ ಕುರಿತು ನೊಂದಣಿ ಮಾಡಿಕೊಳ್ಳುವುದನ್ನು ಮುಂದುವರಿಸ ಬೇಕು  ಎಂದು ಜಿಲ್ಲಾಧಿಕಾರಿಗಳು ಕಂಪೆನಿಗೆ ಹಾಗೂ ವಿತರಕರಿಗೆ ಸೂಚಿಸಿದರು.

ಈ ಹಿಂದೆ ಆರ್‌ಆರ್ ಸಂಖ್ಯೆ ನೀಡದಿದ್ದವರ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರ್ಕಾರ ಈಗಲೂ ಈ ಗ್ರಾಹಕರು ಆರ್‌ಆರ್ ಸಂಖ್ಯೆ ದಾಖಲೆ ನೀಡಿದರೆ ಸಿಲಿಂಡರ್ ಪೂರೈಕೆ ಮಾಡುವಂತೆ ಆದೇಶ  ನೀಡಿದ್ದು, ಆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಅಡುಗೆ ಅನಿಲ ವಿತರ ಕರ ಸಾಫ್ಟವೇರ್‌ದಲ್ಲಿ ಈ ಕುರಿತು ಕ್ರಮ ಕೈಗೊಳ್ಳಲು ಸಮಸ್ಯೆ ಇದ್ದಲ್ಲಿ ಪ್ರತ್ಯೇಕ ದಾಖಲೆ ಕಡತ ಇಡುವ ಮೂಲಕ ಸಿಲಿಂಡರ್ ಒದಗಿಸಲು ಜಿಲ್ಲಾಧಿಕಾರಿ ಜೈನ್ ಸೂಚಿಸಿದರು. 

ಜಿಲ್ಲೆಯಲ್ಲಿ ಒಟ್ಟು 2.86.011 ವಿವಿಧ ಕಂಪೆನಿಗಳ ಅಡುಗೆ ಅನಿಲ ಗ್ರಾಹಕರಿದ್ದಾರೆ. ಧಾರವಾಡದಲ್ಲಿ 8, ಹುಬ್ಬಳ್ಳಿಯಲ್ಲಿ 13, ಅಳ್ನಾವರ, ಅಣ್ಣಗೇರಿ ಹಾಗೂ ಕುಂದಗೋಳದಲ್ಲಿ ತಲಾ ಒಬ್ಬರು ವಿತರಕರಿದ್ದಾರೆ. ದಿನಕ್ಕೆ ಅಂದಾಜು 8000 ಸಿಲಿಂಡರ್‌ಗಳ ಬೇಡಿಕೆ ಪೂರೈಸಲಾಗುತ್ತಿದ್ದು, ಸಧ್ಯ ಈ ಮುಷ್ಕರದಿಂದ ಶೇ.50 ರಷ್ಟು ಸಿಲಿಂಡರ್‌ಗಳು ಗ್ರಾಹಕರಿಗೆ ಪೂರೈಕೆ ಯಾಗುತ್ತಿವೆ. ಜಿಲ್ಲೆಯಲ್ಲಿ ಬಿಪಿಸಿಎಲ್ ಕಂಪನಿಯು 84.077, ಎಚ್‌ಪಿಸಿಎಲ್ 1.37.533 ಹಾಗೂ ಐಓಸಿಯ 64.581 ಗ್ರಾಹಕರಿದ್ದಾರೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಈ ಮುಷ್ಕರವು ತಮಿಳುನಾಡು, ಕೇರಳ ಹಾಗೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಸಂಬಂಧಿಸಿದ್ದು. ಆದಷ್ಟು ಬೇಗನೆ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ಅನಿಲ ಪೂರೈಕೆ ಕಂಪೆನಿಗಳ ಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದರು. ಮುಷ್ಕರದಿಂದ ಆಗುವ ಅನಾನು ಕೂಲತೆಗಳ ಹಾಗೂ ಜನರ ಸಮಸ್ಯೆ ಆಲಿಸಲು ಧಾರವಾಡ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 2446624 ಹಾಗೂ ಹುಬ್ಬಳ್ಳಿಯಲ್ಲಿ 2365269 ಸಹಾಯವಾಣಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸಿಲಿಂಡರ್‌ಗಳನ್ನು ಸಂಗ್ರಹಿಸಿಡುವ, ಹೆಚ್ಚಿನ ಬೆಲೆಗೆ ಮಾರುವ, ಪರಿಸ್ಥಿತಿಯ ದುರ್ಲಾಭ ಪಡೆಯುವ ಶಕ್ತಿಗಳಿಗೆ ಅವಕಾಶ ಕೊಡದಂತೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಕ್ರಮಗಳ ತಡೆಗೆ ಇಲಾಖೆ ಹಾಗೂ ಅನಿಲ ಪೂರೈಕೆ ಕಂಪೆನಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅವರು ಆದೇಶ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.