ADVERTISEMENT

ಅವಳಿ ನಗರಕ್ಕೆ ಕಸ ವಿಲೇವಾರಿಯ ಶಾಪ!

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 5:21 IST
Last Updated 9 ಡಿಸೆಂಬರ್ 2013, 5:21 IST

ಹುಬ್ಬಳ್ಳಿ: ವಾರ್ಷಿಕ ರೂ 27.2 ಕೋಟಿ ಖರ್ಚು ಮಾಡಿದರೂ ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಸುಪ್ರಿಂ ಕೋರ್ಟ್ ನಿರ್ದೇಶನ ಧಿಕ್ಕರಿಸಿ ರಸ್ತೆ ಪಕ್ಕದಲ್ಲಿಯೇ ಕಸ ಸುಡಲಾಗುತ್ತಿದೆ. ಅವಳಿ ನಗರದಲ್ಲಿ ನಿತ್ಯ 400 ಟನ್ ಕಸ ಶೇಖರಣೆಯಾದರೂ 200 ಟನ್ ಮಾತ್ರ ವಿಲೇವಾರಿಯಾಗುತ್ತಿದೆ...

ಹೀಗೊಂದಷ್ಟು ಗಂಭೀರ ವಿಚಾರಗಳನ್ನು ಹುಬ್ಬಳ್ಳಿ–ಧಾರವಾಡ ಮಹಾನಗರ ಸಮಗ್ರ ಅಭಿವೃದ್ಧಿ ಸಂಘದ ಅಧ್ಯಕ್ಷ ವಿಠ್ಠಲ ಜಿ.ಕಮ್ಮಾರ ಬಿಚ್ಚಿಟ್ಟರು.

ಇಲ್ಲಿನ ವಿಶ್ವಶ್ರಮ ಚೇತನ ಆವರಣದಲ್ಲಿ ಭಾನುವಾರ ನಡೆದ ‘ಕಸ ವಿಲೇವಾರಿ ಶಾಶ್ವತ ಪರಿಹಾರ’ ಕುರಿ­ತಾದ ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ ಮಾಡಿ ಮಾತನಾಡಿದ ಅವರು, ಈಗಿರುವ ವ್ಯವಸ್ಥೆಯಲ್ಲಿ  ಪ್ರತಿಯೊಬ್ಬರಿಗೂ ವೈಯಕ್ತಿಕ ಲಾಭವಿರುವುದರಿಂದ ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಘನ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡು ಹಿಡಿಯದೆ ಜನರ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘನತ್ಯಾಜ್ಯ ವಿಲೇವಾರಿಗೆ ಮಹಾ­ರಾಷ್ಟ್ರದ ಪುಣೆ ಹಾಗೂ ಕೇರಳದ ತಿರುವನಂತಪುರ ಮಾದರಿಯಲ್ಲಿ ಶಾಶ್ವತ ಪರಿಹಾರ ದೊರೆಯುವ­ವರೆಗೂ ಹೋರಾಟಕ್ಕೆ ಕೈ ಜೋಡಿಸು­ವಂತೆ ಅವಳಿ ನಗರದ ಜನತೆಗೆ ಮನವಿ ಮಾಡಿದರು.

ಪುಣೆಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ₨180 ಕೋಟಿ ಖರ್ಚು ಮಾಡಿ ಅನಿಲೀಕರಣ ಘಟಕ ಆರಂಭಿಸಲಾಗಿದೆ. ಇಲ್ಲಿ ಪ್ರತಿ ಮೂರು ಟನ್ ಕಸದಿಂದ ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರತಿ ನಿತ್ಯ 400 ಟನ್ ಕಸ ಸುಟ್ಟು ತಯಾರಿಸುವ ವಿದ್ಯುತ್ ನಿಂದ ವಾರ್ಷಿಕ ₨48 ಕೋಟಿ ಆದಾಯ ಪಡೆಯಲಾಗುತ್ತಿದೆ.

ಅನಿಲೀ­ಕ­ರಣ ಘಟಕ ಸ್ಥಾಪನೆಗೆ ಹಾಕಿದ ಬಂಡವಾಳ ಕೇವಲ ನಾಲ್ಕು ವರ್ಷಗಳಲ್ಲಿ ಮರಳುತ್ತದೆ. ಅಂತಹ ಘಟಕ ಆರಂಭಿಸಲು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಏಕೆ ಮುಂದಾಗು­ತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕಳೆದ ಐದು ವರ್ಷಗಳಲ್ಲಿ 136 ಕೋಟಿ ಕಸ ವಿಲೇವಾರಿಗೆ ಖರ್ಚು ಮಾಡಲಾಗಿದೆ ಎಂದರು.

ಪಾಲಿಕೆಯ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ಸಾರ್ವಜನಿಕರು ವ್ಯಾಪಕ ಆರೋಗ್ಯ ಸಂಬಂಧಿ ಸಮಸ್ಯೆ­ಗಳನ್ನು ಎದುರಿಸುತ್ತಿದ್ದಾರೆ. ಕಣ್ಣು, ಶ್ವಾಸ­ಕೋಶ, ಚರ್ಮ ಸಂಬಂಧಿ ಸಮಸ್ಯೆ­ಗಳು ಹೆಚ್ಚುತ್ತಿದ್ದು, ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಗಣನೀಯ­ವಾಗಿ ಹೆಚ್ಚುತ್ತಿದೆ. ವಿಷಕಾರಿ ವಸ್ತುಗಳ ಸೇರ್ಪ­ಡೆ­ಯಿಂದ ಮಣ್ಣು, ನೀರು ಕಲು­ಷಿತ­ಗೊಳ್ಳುತ್ತಿವೆ ಎಂದು ಆರೋಪಿಸಿದರು.

ಸರ್ಕಾರ ರಾಜ್ಯಮಟ್ಟದಲ್ಲಿ ಘನ­ತ್ಯಾಜ್ಯ ವಿಲೇವಾರಿ ನಿಗಮ ಆರಂಭಿಸಲಿ ಎಂದು ಒತ್ತಾಯಿಸಿದ ಅವರು, ಸುರಕ್ಷಿತ ಕಸ ವಿಲೇವಾರಿ ಕುರಿತು ಸಾರ್ವಜನಿಕ­ರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು.

ಚಿಂತಕ ಡಾ.ಕೆ.ಎಸ್.ಶರ್ಮಾ, ಕರ್ನಾಟಕ ಸಾಮಾಜಿಕ ನ್ಯಾಯ ವೇದಿಕೆ ಅಧ್ಯಕ್ಷ ಮಹಾದೇವ ಹೊರಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಇನ್‌­ಸ್ಟಿ­ಟ್ಯೂಟ್ ಆಫ್‌ ಎಂಜಿನಿ­ಯರ್ಸ್‌ನ ಕಾರ್ಯದರ್ಶಿ ವಿ.ಬಿ.­ಪಾಟೀಲ, ಕನ್ಸಲ್ಟಿಂಗ್‌ ಎಂಜಿನಿಯರ್‌ ವಿ.ಆರ್‌.­ಅಮ್ಮಿನ­ಬಾವಿ, ಇಂಟಿಗ್ರೇಟೆಡ್‌ ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಕನ್ಸಲ್ಟಂಟ್‌ ವೀರೇಶ ಎನ್‌.ಹಿರೇಮಠ, ಹಮಾಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಪತ್ತಾರ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.