ADVERTISEMENT

ಆಹ್ಲಾದ ತಂದ ಹೊಸ ಉದ್ಯಾನ

ಪ್ರಸನ್ನಕುಮಾರ ಹಿರೇಮಠ
Published 20 ಫೆಬ್ರುವರಿ 2012, 6:35 IST
Last Updated 20 ಫೆಬ್ರುವರಿ 2012, 6:35 IST
ಆಹ್ಲಾದ ತಂದ ಹೊಸ ಉದ್ಯಾನ
ಆಹ್ಲಾದ ತಂದ ಹೊಸ ಉದ್ಯಾನ   

ಹುಬ್ಬಳ್ಳಿ: ಇಲ್ಲಿನ ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಮ್ಮದಿ ಇದೆ. ಏನೋ ಸಾಧನೆ ಮಾಡಿದ ಹುಮ್ಮಸ್ಸಿದೆ. ಮನಸ್ಸಿಗೆ ಆಹ್ಲಾದ ನೀಡುವ ವಾತಾವರಣ ಸಿಕ್ಕಿದೆ. ಇಲ್ಲಿರುವವರ ಸಂತಸಕ್ಕೆ ಈಗ ಪಾರವೇ ಇಲ್ಲದಂತಾಗಿದೆ. ಕಾಂಕ್ರೀಟ್ ಕಾಡಿನ ಮಧ್ಯೆ ನಳನಳಿಸುವ ಹಸಿರನ್ನು ಹೊದ್ದ ಉದ್ಯಾನವೊಂದು ಈಗ ಇಲ್ಲಿ ಮೈದಳೆದಿದೆ.

ಧಾರವಾಡದ ಹೃದಯ ಭಾಗದಲ್ಲಿರುವ ಬಡಾವಣೆ ಕೇಶವನಗರ. ಕರ್ನಾಟಕ ಕಾಲೇಜು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳ ನಡುವೆ ಇರುವ ಕೇಶವನಗರದಲ್ಲಿ ಈಗ ಖಾಲಿ ಜಾಗಕ್ಕೆ ಜೀವಕಳೆ ಬಂದಿದೆ. ಮಕ್ಕಳಿಂದ ದೊಡ್ಡವರವರೆಗೆ ಹೊತ್ತು ಕಳೆಯಲು ಒಂದು ಒಳ್ಳೆಯ ಸ್ಥಳವೂ ಸಿಕ್ಕಂತಾಗಿದೆ.

ಕೇಶವನಗರದಲ್ಲಿ ಕೆಲ ವರ್ಷಗಳಿಂದ ಪಾಳು ಬಿದ್ದಂತಿದ್ದ ಜಾಗೆಯಲ್ಲಿ ಉದ್ಯಾನವಾಗಿ ಬಣ್ಣ ಬಣ್ಣದ ಹೂಗಳು, ತರಹೇವಾರಿ ಗಿಡಗಳು ಬೆಳೆದು ನಿಂತಿದ್ದು, ತಮ್ಮ ಸೌಂದರ್ಯದಿಂದ ಬರುವವರನ್ನು ಕೈಬೀಸಿ ಕರೆಯುತ್ತಿವೆ. ಬಡಾವಣೆಯ ಸುತ್ತಲಿನ ಜನರಿಗೆ ಇದು ಸಮಾಧಾನ ನೀಡಿದ್ದರೆ, ಮಕ್ಕಳ ಮುಖದಲ್ಲಿ ಮಂದಹಾಸ ಅರಳಿಸಿದೆ.

ಬಡಾವಣೆಯ ಮಧ್ಯದಲ್ಲಿ ಇದ್ದ ಒಳ್ಳೆಯ ಜಾಗವಿದ್ದರೂ ಮಕ್ಕಳಿಗೆ, ಹಿರಿಯರಿಗೆ ಕುಳಿತುಕೊಳ್ಳಲು ಒಂದಿಷ್ಟು ಜಾಗೆಯೂ ಇಲ್ಲದಂತಾಗಿತ್ತು. ಇದೆಲ್ಲದರ ಬಗ್ಗೆ 2011ರ ಜುಲೈ 28ರಂದು `ಪ್ರಜಾವಾಣಿ~ಯ ಮೆಟ್ರೊದಲ್ಲಿ `ಧಾರವಾಡದ ಕೇಶವನಗರಕ್ಕೆ ಉದ್ಯಾನದ್ದೇ ಕನವರಿಕೆ~ ಎಂಬ ವರದಿ ಪ್ರಕಟವಾದಾಗ ಪಾಲಿಕೆ ಎಚ್ಚೆತ್ತುಕೊಂಡಿತು.

ಇದೀಗ ಕೇಶವನಗರದ ಉದ್ಯಾನವನ್ನು ರೂ 12 ಲಕ್ಷ ವೆಚ್ಚದಲ್ಲಿ ಪಾಲಿಕೆಯು ನವೀಕರಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದೆ. ಜೊತೆಗೆ ರೂ. 4 ಲಕ್ಷ ವೆಚ್ಚದಲ್ಲಿ ಉದ್ಯಾನದ ಮಧ್ಯೆ ಹೈಮಾಸ್ಟ್ ದೀಪ ಅಳವಡಿಸಲಾಗಿದೆ.
 
ಮುಖ್ಯವಾಗಿ ಉದ್ಯಾನದ ಸುತ್ತಲೂ ಬೇಲಿ ಹಾಕಲಾಗಿದೆ. ಮೊದಲಿಗೆ ಇದ್ದ ದೊಡ್ಡ ಮರಗಳನ್ನು ಹಾಗೆಯೇ ಉಳಿಸಿಕೊಂಡು, ಅವುಗಳ ಕೆಳಗೆ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಇದರಿಂದ ಆಟಿಕೆಗಳನ್ನು ಕಾಯುವ ತೊಂದರೆ ಇಲ್ಲ. ಮಧ್ಯಾಹ್ನದ ಬಿಸಿಲಿನಲ್ಲಿ ಆಡುವ ಮಕ್ಕಳಿಗೂ ಬಿಸಿಲಿನ ತಾಪದ ತಾಗದು.

ಉದ್ಯಾನ ಸುತ್ತಲೂ ವಾಕಿಂಗ್ ಪಾಥ್ ನಿರ್ಮಿಸಲಾಗಿದೆ. ಶಾಸಕರ ಅನುದಾನದಲ್ಲಿ ಶೀಘ್ರದಲ್ಲೇ ಬಯಲು ರಂಗಮಂದಿರವನ್ನು ನಿರ್ಮಿಸಲಾಗುವುದು ಎಂಬ ಆಶ್ವಾಸನೆಯನ್ನು ಉದ್ಯಾನದ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಚಂದ್ರಕಾಂತ ಬೆಲ್ಲದ ಭರವಸೆ ನೀಡಿದ್ದಾರೆ.

ಈ ಉದ್ಯಾನದಲ್ಲಿ ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಒಂದು ಭಾಗದಲ್ಲಿ ತೋಟಗಾರಿಕೆಗೆ ಹಾಗೂ ಇನ್ನೊಂದರಲ್ಲಿ ಆಟದ ಮೈದಾನಕ್ಕೆ ಸ್ಥಳಾವಕಾಶ ಮಾಡಲಾಗಿದೆ.

ಬೇಡಿಕೆ ಈಡೇರಿಸಿದ ಖುಷಿ
ಕೇಶವನಗರದ ಜನರಿಗೆ ಉದ್ಯಾನ ಸಿಕ್ಕಿರುವುದಕ್ಕೆ ಎಷ್ಟು ಖುಷಿಯಾಗಿದೆಯೋ, ಈ ವಾರ್ಡ್ ಅನ್ನು ಪ್ರತಿನಿಧಿಸುವ ಪಾಲಿಕೆ ಸದಸ್ಯ ಸಂಜಯ ಕಪಟಕರಗೆ, ಜನರ ಬೇಡಿಕೆಯನ್ನು ಈಡೇರಿಸಿದ ಸಂತಸವಿದೆ.

`ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಇಲ್ಲಿಗೆ ಮತ ಕೇಳಲು ಬಂದಿದ್ದೆ. ಇಲ್ಲಿಯ ಜನತೆ ಮೊದಲು ಇಟ್ಟ ಬೇಡಿಕೆಯೇ ಈ ಉದ್ಯಾನವಾಗಿತ್ತು. ಈಗ ಇದನ್ನು ನೆರವೇರಿಸಿ ಕೊಟ್ಟಿದ್ದೇನೆ. ಅಲ್ಲದೇ ಬಹಳ ದಿನದಿಂದ ಆಗದೇ ಉಳಿದಿದ್ದ ಕೆಲಸ, ಪೂರ್ಣಗೊಂಡಿರುವುದಕ್ಕೆ ಹೆಮ್ಮೆ ಅನ್ನಿಸುತ್ತಿದೆ. ಉದ್ಯಾನ ಸುತ್ತ ವಿವಿಧ ಬಡಾವಣೆಗೆ ತೆರಳಲು ಇರುವ ಲಿಂಕ್ ರಸ್ತೆಗೆ ಟೆಂಡರ್ ಕೂಡಾ ಆಗಿದೆ. ಇದರ ಕೆಲಸ ಶೀಘ್ರ ಆರಂಭವಾಗಲಿದೆ” ಎಂದು ಪಾಲಿಕೆ ಸದಸ್ಯ ಸಂಜಯ ಕಪಟಕರ್ ತಿಳಿಸಿದರು.

`ತಡವಾದರೂ ಉತ್ತಮ ರೀತಿಯ ಉದ್ಯಾನ ನಿರ್ಮಾಣವಾಗಿದೆ. ಇದರಿಂದ ಇಲ್ಲಿಯ ಜನರಿಗೆ ತುಂಬಾ ಒಳ್ಳೆಯದಾಗಿದೆ~ ಎಂದು ಕೇಶವನಗರ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಸಲತೀಯಲ್ ದೇವನೂರ ಹರ್ಷ ವ್ಯಕ್ತಪಡಿಸಿದರು.

`ಉದ್ಯಾನಕ್ಕೆ ಶೀಘ್ರದಲ್ಲೇ ವಾಚಮನ್ ನೇಮಿಸುತ್ತೇವೆ. ಜೊತೆಗೆ ಇನ್ನಷ್ಟು ಅಭಿವೃದ್ಧಿಪಡಿಸುತ್ತೇವೆ~ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ದಿನೇಶ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.