ADVERTISEMENT

ಒಂದು ಹೊಡೆತಕ್ಕೆ 12 ರನ್, ಇನ್ನೊಂದಕ್ಕೆ 8!

ಚಿನ್ಮಯ ಶಾಲೆಯಲ್ಲಿ `ಕ್ರೇಜಿ ಕ್ರಿಕೆಟ್' ಸಂಭ್ರಮ; ಮಕ್ಕಳ ಕಲರವ

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 11:21 IST
Last Updated 7 ಜುಲೈ 2013, 11:21 IST
ಹುಬ್ಬಳ್ಳಿಯ ಇನ್ಫಿನಿಟಿ ಕ್ವಾಡ್ ತಂಡದ ಸಹಯೋಗದಲ್ಲಿ ರೋಟರಿ ಕ್ಲಬ್ ಆಫ್ ವಿದ್ಯಾನಗರ ಹಮ್ಮಿಕೊಂಡಿರುವ ಕ್ರೇಜಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಚಿನ್ಮಯ ಶಾಲೆಯ ಅಮೃತ್ ದೇಶಪಾಂಡೆ ಅವರ ಆಕರ್ಷಕ ಕಟ್ ಶಾಟ್. ವಿಕೆಟ್ ಕೀಪರ್ ಅಶೋಕ ಚಿತ್ರದಲ್ಲಿದ್ದಾರೆ
ಹುಬ್ಬಳ್ಳಿಯ ಇನ್ಫಿನಿಟಿ ಕ್ವಾಡ್ ತಂಡದ ಸಹಯೋಗದಲ್ಲಿ ರೋಟರಿ ಕ್ಲಬ್ ಆಫ್ ವಿದ್ಯಾನಗರ ಹಮ್ಮಿಕೊಂಡಿರುವ ಕ್ರೇಜಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಚಿನ್ಮಯ ಶಾಲೆಯ ಅಮೃತ್ ದೇಶಪಾಂಡೆ ಅವರ ಆಕರ್ಷಕ ಕಟ್ ಶಾಟ್. ವಿಕೆಟ್ ಕೀಪರ್ ಅಶೋಕ ಚಿತ್ರದಲ್ಲಿದ್ದಾರೆ   

ಹುಬ್ಬಳ್ಳಿ: ಚೆಂಡನ್ನು ಬೀಸಿ ಹೊಡೆದು ಬೌಲಿಂಗ್ ಎಂಡ್ ಕಡೆಯಲ್ಲಿ ಇರಿಸಿರುವ ಪರದೆ ಮೇಲೆ ಬೀಳುವಂತೆ ಮಾಡಿದರೆ 12 ರನ್. ವಿಕೆಟ್ ಕೀಪರ್ ಕೈಯಿಂದ ಜಾರಿ ಚೆಂಡು ಆತನ ಹಿಂಭಾಗದಲ್ಲಿರುವ `ಪೆಟ್ಟಿಗೆ'ಯೊಳಗೆ ಬಿದ್ದರೆ ಎಂಟು ರನ್. ಕವರ್ಸ್‌ ಮತ್ತು ಮಿಡ್‌ವಿಕೆಟ್‌ನಲ್ಲಿರುವ ಪರದೆಗೆ ಚೆಂಡನ್ನು ಅಟ್ಟಿದರೆ ಸಿಕ್ಸರ್, ನೆಲದ ಮೇಲಿಂದ ಉರುಳಿ ಗಡಿ ದಾಟಿದರೆ ಬೌಂಡರಿ...
ನಗರದ ಚಿನ್ಮಯ ಶಾಲೆಯಲ್ಲಿ ಶನಿವಾರ ಆರಂಭಗೊಂಡ `ಕ್ರೇಜಿ ಕ್ರಿಕೆಟ್'ನಲ್ಲಿ ಇಂಥ ಆಕರ್ಷಣೆಯೇ ಆಸಕ್ತಿಯ ವಿಷಯ.

ಪ್ರತಿಭಾವಂತ ಯುವಕರ ತಂಡವಾದ ಇನ್ಫಿನಿಟಿ ಕ್ವಾಡ್ ಮತ್ತು ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಪ್ರತಿಷ್ಠಾನದ ಸಹಯೋಗದಲ್ಲಿ ರೋಟರಿ ಕ್ಲಬ್ ಆಫ್ ವಿದ್ಯಾನಗರ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಟೂರ್ನಿಯಲ್ಲಿ  ಕ್ರಿಕೆಟ್‌ನ ಸಾಮಾನ್ಯ ನಿಯಮಗಳೊಂದಿಗೆ ವಿಶೇಷ ಷರತ್ತುಗಳೂ ಇವೆ.

30 ಗಜ ವೃತ್ತದ ಅಂಗಣದಲ್ಲಿ ಪಂದ್ಯ ನಡೆಯುತ್ತದೆ. ಬೌಲರ್ ನಾಲ್ಕೇ ಹೆಜ್ಜೆ ಓಡಿ ಚೆಂಡು ಎಸೆಯಬೇಕು. ನಿಗದಿತ ಸ್ಥಳ ಬಿಟ್ಟು ಉಳಿದ ಕಡೆಗೆ ಚೆಂಡನ್ನು ಎತ್ತಿ ಹೊಡೆದರೆ ಬ್ಯಾಟ್ಸ್‌ಮನ್ ಔಟ್!

ಆರು ಓವರ್‌ಗಳ ಪಂದ್ಯದಲ್ಲಿ ಪ್ರತಿ ತಂಡದಲ್ಲಿ ಕೇವಲ ಆರು ಮಂದಿ ಮಾತ್ರ ಆಡಬಹುದು. ಪ್ರತಿ ಇನ್ನಿಂಗ್ಸ್‌ನಲ್ಲಿ ಒಂದು ಪವರ್ ಓವರ್ ಇರುತ್ತದೆ. ಈ ಓವರ್‌ನಲ್ಲಿ ಬಂದ ಒಟ್ಟು ರನ್‌ಗಳನ್ನು ದ್ವಿಗುಣಗೊಳಿಸಲಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಬ್ಯಾಟ್ಸ್‌ಮ್ಯಾನ್ ಬೇಗನೇ ಔಟಾಗುವ ಸಾಧ್ಯತೆ ಇರುವುದರಿಂದ ಈ ಪಂದ್ಯದಲ್ಲಿ ಕುತೂಹಲ ಹೆಚ್ಚು. ಶನಿವಾರ ಮಧ್ಯಾಹ್ನ ಆರಂಭಗೊಂಡ ಟೂರ್ನಿಯ ಮೊದಲ ದಿನ ಎರಡು ಅಂಗಣಗಳಲ್ಲಿ ಒಟ್ಟು 18 ಪಂದ್ಯಗಳು ನಡೆದವು. ಒಂದೊಂದು ಪಂದ್ಯವೂ ಕುತೂಹಲಕಾರಿಯಾಗಿತ್ತು. ಹೀಗಾಗಿ ಮಕ್ಕಳ ಸಂಭ್ರಮ ಹೆಚ್ಚಾಗಿತ್ತು.

ಚಿನ್ಮಯ ಮತ್ತು ಎಂ.ಕೆ.ಠಕ್ಕರ್ ಶಾಲಾ ತಂಡಗಳ ನಡುವೆ ನಡೆದ ಮೊದಲ ಪಂದ್ಯದ ಮೊಲದ ಓವರ್ ಎಸೆದ ವಿಶ್ವನಾಥ ಮೂರು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿದಾಗ, ಅಮರನಾಥ ಆಫ್ ಸೈಡ್‌ನಲ್ಲಿ ನಿರಂತರ ಬೌಂಡರಿಗಳನ್ನು ಬಾರಿಸಿದಾಗ ಕೇಕೆ ಹಾಕಿದ ಸಹಪಾಠಿಗಳ ಉತ್ಸಾಹ  ಸಂಜೆವರೆಗೂ ಮುಂದುವರಿಯಿತು.

ಭಾನುವಾರವೂ ಪಂದ್ಯಗಳು ಮುಂದುವರಿಯಲಿದ್ದು ಮುಂದಿನ ಶನಿವಾರ ಮತ್ತು ಭಾನುವಾರ ಅಂತಿಮ ಸುತ್ತಿನ ಹೋರಾಟ ನಡೆಯಲಿದೆ.

ಉದ್ಘಾಟನೆ: ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ಪ್ರತಿನಿಧಿ ರಜತ್ ಉಳ್ಳಾಗಡ್ಡಿಮಠ ಟೂರ್ನಿಗೆ ಚಾಲನೆ ನೀಡಿದರು. ರೋಟರಿ ಅಧ್ಯಕ್ಷ ಅವಿನಾಶ ಕೊಠಾರಿ, ಸದಸ್ಯರಾದ ಸಂಜಯ ಶೆಟ್ಟಿ, ಸಂಜು ಮಜುಮ್ದಾರ್, ಚಿನ್ಮಯ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೇವೇಂದ್ರ ಹೂಗಾರ, ಇನ್ಫಿನಿಟಿ ಕ್ವಾಡ್‌ನ ಪ್ರಣವ ಪಟೇಲ್, ಅಂಜು, ಭಾರ್ಗವ ಹಾಗೂ ಕರಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.