ADVERTISEMENT

‘ಕಲಬುರ್ಗಿ ವಿಚಾರಧಾರೆ ಮಾದರಿ’

80ನೇ ಜನ್ಮದಿನ: ‘ಡಾ.ಎಂ.ಎಂ.ಕಲಬುರ್ಗಿ ಸಂದರ್ಶನ ಸಂಪುಟ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 7:38 IST
Last Updated 30 ನವೆಂಬರ್ 2017, 7:38 IST
ಕಾರ್ಯಕ್ರಮದಲ್ಲಿ ಉಮಾದೇವಿ ಕಲಬುರ್ಗಿ ಅವರು ಇಳಕಲ್‌ನ ಮಹಾಂತ ಸ್ವಾಮೀಜಿಗೆ ನಮಸ್ಕರಿಸಿದರು. ಡಾ. ಸಿದ್ಧಲಿಂಗ ಸ್ವಾಮೀಜಿ, ಡಾ. ಬಸವಲಿಂಗ ಪಟ್ಟದ್ದೇವರು, ಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ.
ಕಾರ್ಯಕ್ರಮದಲ್ಲಿ ಉಮಾದೇವಿ ಕಲಬುರ್ಗಿ ಅವರು ಇಳಕಲ್‌ನ ಮಹಾಂತ ಸ್ವಾಮೀಜಿಗೆ ನಮಸ್ಕರಿಸಿದರು. ಡಾ. ಸಿದ್ಧಲಿಂಗ ಸ್ವಾಮೀಜಿ, ಡಾ. ಬಸವಲಿಂಗ ಪಟ್ಟದ್ದೇವರು, ಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ.   

ಧಾರವಾಡ: ‘ಡಾ.ಎಂ.ಎಂ.ಕಲಬುರ್ಗಿ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಾಹಿತ್ಯ ಕೃಷಿ, ಚಿಂತನೆಗಳು ನಮ್ಮೊಂದಿಗಿವೆ. ಅವರ ವಿಚಾರಧಾರೆಗಳು ನಾಡಿನ ಸಾಹಿತ್ಯ ಲೋಕಕ್ಕೆ ಸದಾ ಮಾದರಿಯಾಗಿವೆ’ ಎಂದು ಇಳಕಲ್‌ ಚಿತ್ತರಗಿ ಸಂಸ್ಥಾನಮಠದ ಮಹಾಂತ ಸ್ವಾಮೀಜಿ ಹೇಳಿದರು.

ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ವತಿಯಿಂದ ಕಲಬುರ್ಗಿ ಅವರ 80ನೇ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ರಚನೆಯ ‘ವಚನವರ್ಷ ದಿನಕ್ಕೊಂದು ವಚನ’ ಮತ್ತು ‘ಡಾ.ಎಂ.ಎಂ.ಕಲಬುರ್ಗಿ ಸಂದರ್ಶನ ಸಂಪುಟ’ ಗ್ರಂಥ ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ವಚನ ಸಾಹಿತ್ಯವನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡಿದ್ದ ಡಾ. ಕಲಬುರ್ಗಿ ಅವರು ವಿಶಿಷ್ಟವಾದ ವಚನಗಳನ್ನು ಆಯ್ದು ಕೃತಿ ರಚಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ವಚನದಲ್ಲಿನ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಹಿರಿಯ ಚಿಂತಕ ಡಾ. ಬಸವರಾಜ ಕಲ್ಗುಡಿ ಮಾತನಾಡಿ, ‘ವಚನ ಸಾಹಿತ್ಯ ಓದುವುದಕ್ಕಿಂತ ಹೆಚ್ಚಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕಲಬುರ್ಗಿ ಅವರ ಪ್ರತಿಯೊಂದು ಸಾಹಿತ್ಯ ಸಂಶೋಧನೆಗಳು ಚರ್ಚೆಯಾಗುತ್ತಿದ್ದವು. ಕನ್ನಡ ಸಾಹಿತ್ಯದಲ್ಲಿ ಡಾ.ಕಲಬುರ್ಗಿ ಅವರು ವೈವಿಧ್ಯಮಯ ಕೃತಿಗಳನ್ನು ಹೊರ ತಂದಿದ್ದಾರೆ. ಡಾ. ಕಲಬುರ್ಗಿ ಅವರು ಭಕ್ತಿಗಿಂತ ವೈಚಾರಿಕ ಭಾವದಿಂದ ಹೆಚ್ಚು ನಡೆದುಕೊಂಡವರು’ ಎಂದರು.

ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಶಿವಮೊಗ್ಗದ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಡಾ. ವೀರಣ್ಣ ರಾಜೂರ, ಉಮಾದೇವಿ ಕಲಬುರ್ಗಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಗಿರಡ್ಡಿ ಗೋವಿಂದರಾಜ, ಡಾ. ಚೆನ್ನವೀರ ಕಣವಿ, ಡಾ. ಗುರುಲಿಂಗ ಕಾಪಸೆ, ಚಂದ್ರಕಾಂತ ಬೆಲ್ಲದ, ಡಾ. ರಾಘವೇಂದ್ರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.