ಧಾರವಾಡ: ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಲ್ಲ. ದನಕರುಗಳಿಗೆ ಮೇವು ಇಲ್ಲ. ಮಳೆ ಇಲ್ಲದೆ ಬೆಳೆ ಸಂಪೂರ್ಣ ನಾಶವಾಗಿದ್ದು, ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ತಾಲ್ಲೂಕಿನ ರೈತರು ತಮ್ಮ ಗ್ರಾಮಗಳಿಗೆ ಸೋಮವಾರ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಆಗಮಿಸಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡದ ಎದುರು ಅಳಲು ತೋಡಿಕೊಂಡರು. ಧಾರವಾಡ ತಾಲ್ಲೂಕಿನ ಬಹುತೇಕ ಗ್ರಾಮ ಗಳಲ್ಲಿನ ರೈತರು, ಸಾರ್ವಜನಿಕರು ಈ ಸಮಸ್ಯೆ ಗಳನ್ನೇ ಹೇಳಿದರು.
ತಾಲ್ಲೂಕಿನ ನರೇಂದ್ರ ಗ್ರಾಮದ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ರೈತರು, ಕುಡಿಯುವ ನೀರಿನ ಸಮಸ್ಯೆ ಗಂಭೀರವಿದೆ. ವಿದ್ಯುತ್ ಪೂರೈಕೆ ಸಮರ್ಪಕ ವಾಗಿಲ್ಲ. ಗ್ರಾಮದಲ್ಲಿರುವ 84 ಎಕರೆ ವಿಸ್ತೀರ್ಣದ ಕೆರೆಯಲ್ಲಿ ನೀರು ಸಂಗ್ರಹಿಸಿ ಕುಡಿ ಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬಹುದು. ಆದರೆ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಹೇಳಿದರು.
ನರೇಂದ್ರ ಸುತ್ತಮುತ್ತಲಿನ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲಾಗಿದೆ. ಭೂಮಿ ನೀಡಿದ ಕುಟುಂಬದವರಿಗೆ ಕೆಲಸ ಕೊಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾರಿಗೂ ಕೆಲಸ ನೀಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
`ನರೇಂದ್ರಕ್ಕೆ ಕೆರೆಯ ಮೂಲಕ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಪ್ರಯತ್ನಿಸ ಲಾಗುವುದು. ರಾಜೀವ್ ಗಾಂಧಿ ಗ್ರಾಮೀಣ ಕುಡಿ ಯುವ ನೀರಿನ ಯೋಜನೆ ಮೂಲಕ ಈ ಕಾಮಗಾರಿ ಕೈಗೆತ್ತಿಕೊಳ್ಳಲು ಒತ್ತಾಯಿಸಲಾಗು ವುದು. ಮುಖ್ಯಮಂತ್ರಿಗಳು ಬರ ನಿರ್ವಹಣೆಗೆ ರೂ 370 ಕೋಟಿ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಯಾವುದೇ ಕೆಲಸ ನಡೆದಿಲ್ಲ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು~ ಎಂದು ಮನವಿ ಸ್ವೀಕರಿಸಿ ಸಿದ್ದರಾಮಯ್ಯ ಹೇಳಿದರು.
ಅಮ್ಮಿನಭಾವಿ ಗ್ರಾಮದ ಹೊರವಲಯದ ಹೊಲವೊಂದಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಹಾನಿಗೊಳಗಾದ ಕುಸುಬೆ, ಗೋಧಿ ಬೆಳೆಯನ್ನು ಪರಿಶೀಲಿಸಿದರು. ಹುಬ್ಬಳ್ಳಿ- ಧಾರವಾಡ ಅವಳಿನಗರಕ್ಕೆ ಮಲಪ್ರಭಾ ನದಿಯ ಕುಡಿಯುವ ನೀರಿನ ಪೈಪ್‌ಲೈನ್ ಅಮ್ಮಿನಭಾವಿ ಗ್ರಾಮದ ಮೂಲಕವೇ ಹೋಗಿದ್ದರೂ ನಮಗೆ ಕುಡಿಯಲು ನೀರಿಲ್ಲ. 20 ಲಕ್ಷ ರೂಪಾಯಿ ವಂತಿಗೆ ನೀಡಿದರೆ ಮಾತ್ರ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ.
ಬರ ಪರಿಸ್ಥಿತಿಯಲ್ಲಿ ವಂತಿಗೆ ನೀಡುವುದು ಅಸಾಧ್ಯ. ಉಚಿತವಾಗಿ ನೀರು ಪೂರೈಕೆ ಮಾಡ ಬೇಕು. ಇತ್ತೀಚೆಗೆ ನಡೆದ ಮೈಲಾರ ಜಾತ್ರೆಯಲ್ಲಿ ಮೃತಪಟ್ಟ ಗ್ರಾಮದ ನಾಲ್ಕು ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿಯಿಂದ ಮನವಿ ಸಲ್ಲಿಸಲಾಯಿತು.
ಅಮ್ಮಿನಭಾವಿ ಹೋಬಳಿಯಲ್ಲಿ ಬರಗಾಲ ಪರಿಸ್ಥಿತಿ ಭೀಕರವಿದೆ. ರಾಜ್ಯದಲ್ಲಿ 5000 ಕೋಟಿ ರೂಪಾಯಿ ಬೆಳೆ ನಾಶವಾಗಿದ್ದು, 2011-12ನೇ ಸಾಲಿನ ಬೆಳೆ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಸ್ವೀಕರಿಸಿ ಒತ್ತಾಯಿಸಿದರು.
ಮೇವಿನ ಕೊರತೆಯಿಂದ ಎರಡು ಆಕಳು ಹಾಗೂ ಎರಡು ಎತ್ತುಗಳನ್ನು ಮಾರಾಟ ಮಾಡಿದ್ದೇನೆ ಎಂದು ರೈತ ಮಹಾದೇವಪ್ಪ ಹೇಳಿದರು. ರೈತನ ಮಾತನ್ನು ಸಿದ್ದರಾಮಯ್ಯ ಹೇಳುವ ಸಂದರ್ಭದಲ್ಲಿಯೇ ಮತ್ತೊಬ್ಬ ರೈತ ನೀವು ಸಹ ಸುಳ್ಳು ಹೇಳುತ್ತೀರಿ ಎಂದು ಪ್ರತಿಪಕ್ಷದ ನಾಯಕರ ಮೇಲೆ ಆರೋಪಿಸಿದನು.
ರಾಜಕಾರಣಿಗಳ ಬಗ್ಗೆ ಜನರಲ್ಲಿ ನಂಬಿಕೆ ಕಡಿಮೆ ಆಗಿದೆ. ವಿಧಾನಸೌಧದಲ್ಲಿ ಕುಳಿತು ನೀಲಿ ಚಿತ್ರ ನೋಡುವ ಬಿಜೆಪಿಯವರಿಂದ ಇಂಥ ಪರಿ ಸ್ಥಿತಿ ಉದ್ಭವವಾಗಿದೆ. ಆದರೆ ನಾನು ಎಂದಿಗೂ ಸುಳ್ಳು ಹೇಳಿಲ್ಲ, ಮುಂದೆಯೂ ಹೇಳುವುದಿಲ್ಲ~ ಎಂದು ಸಮರ್ಥಿಸಿಕೊಂಡರು.
ನದಿಯಿಂದ ಮತ್ತೊಂದು ನಗರಕ್ಕೆ ಕುಡಿ ಯುವ ನೀರು ಪೂರೈಕೆಯ ಪೈಪ್‌ಲೈನ್ ಹಾಕುವಾಗ ಮಧ್ಯ ಬರುವ ಗ್ರಾಮಳಿಗೆ ನೀರನ್ನು ಪೂರೈಕೆ ಮಾಡಲೇಬೇಕು. ಇದಕ್ಕಾಗಿ ಹಣ ಪಡೆಯುವ ಅಗತ್ಯವಿಲ್ಲ. ಇದು ನಿಯಮಾವಳಿಯಲ್ಲಿಯೂ ಇದೆ.
ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಜಲಮಂಡಳಿ ಜೊತೆಗೆ ಚರ್ಚಿಸಲಾಗುವುದು ಎಂದ ಅವರು, 2003-04ರಿಂದ ಇಲ್ಲಿಯವರೆಗಿನ ಬೆಳೆ ವಿಮೆ ಕೂಡಲೇ ವಿತರಿಸಬೇಕು ಎಂದರು. ಹೆಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಚಂದನಮಟ್ಟಿ, ತಲವಾಯಿ ಗ್ರಾಮಸ್ಥರು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ತಂಡದ ಸದಸ್ಯರಾದ ಟಿ.ಬಿ.ಜಯಚಂದ್ರ, ಶಿವಮೂರ್ತಿ, ಶ್ರೀನಿವಾಸ ಮಾನೆ, ಶಾಸಕ ವಿರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ವಿನಯ ಕುಲಕರ್ಣಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಶಿವಳ್ಳಿ, ದೀಪಕ ಚಿಂಚೋರೆ, ಪಿ.ಎಸ್.ಪತ್ರಾವಳಿ, ವಿಜಯ ಕುಲಕರ್ಣಿ, ಯಾಸೀನ ಹಾವೇರಿಪೇಟ, ಬಸಮ್ಮ ಪ್ಯಾಟಿ, ಚನ್ನಬಸಪ್ಪ ರೋಣದ, ಸುಹಾಸ ಹೆಬ್ಳೀಕರ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.