ADVERTISEMENT

ಕೋಡಿ ಬಿದ್ದ ದೊಡ್ಡ ಕೆರೆ

ಕೆರೆಯ ಕೋಡಿ ನೀರಿನಲ್ಲಿ ಕೊಚ್ಚಿ ಹೋದ ಯುವತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 8:18 IST
Last Updated 5 ಜೂನ್ 2018, 8:18 IST
ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದ ದೊಡ್ಡ ಕೆರೆ ಸೋಮವಾರ ಕೋಡಿ ಬಿದ್ದ ಪರಿಣಾಮ ನೀರು ರಭಸದಿಂದ ಹರಿಯಿತು
ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದ ದೊಡ್ಡ ಕೆರೆ ಸೋಮವಾರ ಕೋಡಿ ಬಿದ್ದ ಪರಿಣಾಮ ನೀರು ರಭಸದಿಂದ ಹರಿಯಿತು   

ಧಾರವಾಡ: ತಾಲ್ಲೂಕಿನ ಮನಗುಂಡಿಯ ದೊಡ್ಡ ಕೆರೆ ತುಂಬಿ ಕೋಡಿ ಬಿದ್ದಿದ್ದು, ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ.

ಮನಗುಂಡಿ ಗ್ರಾಮದಲ್ಲಿರುವ 12 ಎಕರೆ ವಿಸ್ತೀರ್ಣದ ದೊಡ್ಡಕೆರೆ ತುಂಬಿದ್ದು, ಸೋಮವಾರ ಮಧ್ಯಾಹ್ನ ಕೋಡಿ ಬಿದ್ದಿದೆ. ಹೊಲಕ್ಕೆ ಹೊರಟ್ಟಿದ್ದ ಗ್ರಾಮದ ನೀಲವ್ವ ಹೊನ್ನಾಪುರ (18) ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಕೆರೆಯಿಂದ ಸ್ವಲ್ಪ ದೂರದಲ್ಲಿ ಅವರ ಮೃತದೇಹ ದೊರೆತಿದೆ ಎಂದು ಗ್ರಾಮದ ಅರ್ಜುನ ಪತ್ರೆಣ್ಣವರ ತಿಳಿಸಿದರು.

ಹಲವು ವರ್ಷಗಳಿಂದ ಬರಗಾಲ ಎದುರಿಸಿದ್ದ ಗ್ರಾಮದಲ್ಲಿ ಮಳೆಯಾಗುತ್ತಿದೆ. ಧಾರವಾಡ ನಗರ ಪ್ರದೇಶದಿಂದ ಹರಿದು ಬಂದ ನೀರಿನಿಂದ ಕೆರೆಗಳು ತುಂಬಿರುವುದು ಸಂತಸ ತಂದಿದೆ’ ಎಂದು ಅವರು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಉತ್ತಮ ರೀತಿಯಲ್ಲಿ ಮಳೆಯಾಗಿದೆ. ಧಾರವಾಡ ಹಾಗೂ ಕಲಘಟಗಿ ಭಾಗದಲ್ಲಿ ಮಧ್ಯಾಹ್ನ 2ಕ್ಕೆ ಆರಂಭವಾದ ಮಳೆ ಸಂಜೆಯವರೆಗೂ ಜಿಟಿ, ಜಿಟಿ ಸುರಿಯಿತು.

ಸೋಮವಾರ ಬೆಳಿಗ್ಗೆ 8.30 ಕೊನೆಗೊಂಡಂತೆ ಜಿಲ್ಲೆಯಲ್ಲಿ 6 ಮಿ.ಮೀ. ಮಳೆಯಾಗಿದೆ. ಪುಡಕಲಕಟ್ಟಿಯಲ್ಲಿ ಉತ್ತಮ ಮಳೆಯಾಗಿದೆ. ಉತ್ತಮ ರೀತಿಯಲ್ಲಿ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.