ADVERTISEMENT

ಗುದ್ನೇಶ್ವರನ ರಥೋತ್ಸವಕ್ಕೆ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:11 IST
Last Updated 2 ಸೆಪ್ಟೆಂಬರ್ 2013, 6:11 IST

ಅಣ್ಣಿಗೇರಿ : ಅಣ್ಣಿಗೇರಿ ನೀಲಗುಂದ  ಗುದ್ನೇಶ್ವರ ಸ್ವಾಮೀಜಿಯ ರಥೋತ್ಸವ ಸುರಿವ ಮಳೆಯಲ್ಲಿಯೇ ಭಾನುವಾರ ವಿಜೃಂಭಣೆಯಿಂದ ಜರುಗಿತು. ಭಕ್ತರು ಹರ ಹರ ಮಹಾದೇವ ಎಂದು ಭಕ್ತಿ ಭಾವದೊಂದಿಗೆ ತೇರನ್ನೆಳೆಯುತ್ತಿದ್ದಂತೆ ವರುಣ ದೇವ ಅಮೃತಧಾರೆ ಸುರಿಸತೊಡಗಿದ.

ಸುರಿವ ಮಳೆಯಲ್ಲಿಯೇ ತೇರನ್ನೆಳೆದು ಮರಳಿ ಪಾಜಾಗಟ್ಟಿ ತಲುಪುವವರೆಗೂ ಭಕ್ತರ ಉತ್ಸಾಹಕ್ಕೇನೂ ಕೊರತೆಯಾಗಿರಲಿಲ್ಲ. ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಗುದ್ನೆಪ್ಪಜ್ಜನೇ ಮಳೆ ತೆಗೆದುಕೊಂಡು ಬಂದ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.

ಬೆಳಿಗ್ಗೆ ಸ್ವಾಮೀಜಿಯ ಕತೃ ಗದ್ದುಗೆಗೆ ರುದ್ರಾಭಿಷೇಕ ಮಹಾಗಣಾರಾಧನೆ ನೆರವೇರಿಸಲಾಯಿತು. ಪುಣ್ಯಸ್ಮರಣೆಯಲ್ಲಿ ಚಿಕ್ಕತೊಟ್ಲಕೇರಿ ಅಟವಿ ಮಠದ ಶಿವಲಿಂಗ ಸ್ವಾಮೀಜಿ, ರೋಣ ಗುಲಗುಂಜಿ ಮಠದ ಗುರುಪಾದ ಮಹಾಸ್ವಾಮೀಜಿ, ಅಡ್ನೂರಿನ ಪಂಚಾಕ್ಷರ ಸ್ವಾಮೀಜಿ, ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಅಣ್ಣಿಗೇರಿ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಪಾಲ್ಗೊಂಡಿದ್ದರು. ಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಳವಾಯಿತು.

ಅಮ್ಮಿನಬಾವಿ ಈಶ್ವರ ರಥೋತ್ಸವ ಇಂದು
ಧಾರವಾಡ :
ವಿವಿಧ ಜಾನಪದ ಹೆಜ್ಜೆ ಮೇಳಗಳ ಸಂಭ್ರಮದ ಮಧ್ಯೆ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ಈಶ್ವರ ದೇವರ ವಾರ್ಷಿಕ ರಥೋತ್ಸವ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಸಡಗರದಿಂದ ಜರುಗಲಿದೆ.

ಕರಡಿಗುಡ್ಡ ರಸ್ತೆಗೆ ಹೊಂದಿಕೊಂಡು ಗ್ರಾಮದ ಕೊನೆಯ ಹಂತದಲ್ಲಿರುವ ಈಶ್ವರ ದೇವರ ದೇವಾಲಯದಲ್ಲಿ ಪ್ರಾತಃಕಾಲ ರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರತಿ ಜರುಗಲಿದ್ದು, ಸಂಜೆ 5 ಗಂಟೆಗೆ ರಥೋತ್ಸವ ನಡೆಯಲಿದೆ.

ಜಾನಪದ ಕಲಾಪ್ರಕಾರಗಳಲ್ಲಿ ಒಂದಾಗಿರುವ ಹೆಜ್ಜೆಮೇಳಗಳ ವಿಶಿಷ್ಟ ಕುಣಿತ ಈ ಜಾತ್ರೆಯ ವಿಶೇಷ. ಅಮ್ಮಿನಬಾವಿ ಸೇರಿದಂತೆ ಸುತ್ತಲಿನ ಮರೇವಾಡ ಹಾಗೂ ತಿಮ್ಮೋಪುರ ಗ್ರಾಮಗಳ ಹೆಜ್ಜೆ ಮೇಳಗಳ ಕಲಾ ತಂಡಗಳೂ ಸಹ ಜಾತ್ರಾ ಮಹೋತ್ಸವದಲ್ಲಿ ತಮ್ಮ ಕಲೆ ಪ್ರದರ್ಶಿಸಲಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.