ADVERTISEMENT

ಗೊಬ್ಬರ ದಾಸ್ತಾನು ಪರಿಶೀಲಿಸಿದ ಅಧಿಕಾರಿಗಳ ತಂಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 6:05 IST
Last Updated 18 ಜೂನ್ 2011, 6:05 IST

ಧಾರವಾಡ: ನಗರದ ಎಪಿಎಂಸಿ ಆವರಣದಲ್ಲಿರುವ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ಗುರುವಾರ ಪತ್ತೆಯಾಗಿದ್ದ ಡಿಎಪಿ ಗೊಬ್ಬರ ದಾಸ್ತಾನನ್ನು ಶುಕ್ರವಾರ ಉಪ ವಿಭಾಗಾಧಿಕಾರಿ ಶಿವಾನಂದ ಕಾಪ್ಸೆ, ತಹಸೀಲ್ದಾರ ರವಿ ಕರಿಲಿಂಗಣ್ಣವರ ಪರಿಶೀಲಿಸಿದರು.

ಗೋದಾಮಿನಲ್ಲಿ ಒಟ್ಟಾರೆ ಇಫ್ಕೊ ಸಂಸ್ಥೆ ಪೂರೈಸಿದ 220 ಟನ್ ಡಿಎಪಿ ಗೊಬ್ಬರ ಪತ್ತೆಯಾಗಿದೆ. ಜಿಲ್ಲೆಯ ರೈತರು ಗೊಬ್ಬರದ ತೀವ್ರ ಅಭಾವ ಎದುರಿಸುತ್ತಿದ್ದರೂ ಗೋದಾಮಿನಲ್ಲಿ ಅಕ್ರಮವಾಗಿ ಗೊಬ್ಬರವನ್ನು ಸಂಗ್ರಹಿಸಿಡಲಾಗಿದೆ ಎಂದು ರೈತರು ದೂರಿದ್ದರು.
 
220 ಟನ್ ಗೊಬ್ಬರದ ದಾಸ್ತಾನಿದ್ದರೂ ರೈತರಿಗೆ ಕೇವಲ 75 ಟನ್ ಗೊಬ್ಬರ ಬಿಡುಗಡೆ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಗೊಬ್ಬರವನ್ನು ಮರು ಭರ್ತಿ ಮಾಡುವ ಮೂಲಕ ಅದರಲ್ಲಿ ಸಿಮೆಂಟ್ ತುಂಡು ಸೇರಿದಂತೆ ವಿವಿಧ ಭಾರದ ವಸ್ತುಗಳನ್ನು ತುಂಬಲಾಗಿದೆ ಎಂದೂ ಅವರು ಆರೋಪಿಸಿದ್ದರು.

ಗೋದಾಮಿನಲ್ಲಿ ಸಂಗ್ರಹವಾಗಿದ್ದ ಗೊಬ್ಬರ ಬೆಳಗಾವಿ ಜಿಲ್ಲೆಗೆ ಸೇರಿದ್ದು. ಇಫ್ಕೊ ಸಂಸ್ಥೆ ಗೊಬ್ಬರವನ್ನು ಯಾವುದೇ ಗೋದಾಮಿನಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳಲು ಮುಕ್ತವಾಗಿದೆ ಎಂದು ತಿಳಿಸಿರುವ ಉಪ ವಿಭಾಗಾಧಿಕಾರಿಗಳು, ಗೊಬ್ಬರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದಮೇಲೆ ಕಲಬೆರಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವೆ ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ಆಯುಕ್ತ ಗಣೇಶ ನಾಯಕ, ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.