ADVERTISEMENT

ಗೊಬ್ಬರ ಸಿಗದಿದ್ದರೆ ಕಚೇರಿಗೆ ಬೀಗ

ಪ್ರಗತಿ ಪರಿಶೀಲನಾ ಸಭೆ: ಶಾಸಕ ಅಮೃತ ದೇಸಾಯಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 8:59 IST
Last Updated 30 ಮೇ 2018, 8:59 IST

ಧಾರವಾಡ: ‘ಮುಂಗಾರು ಹಂಗಾಮಿಗೆ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಕಾಲಕ್ಕೆ ವಿತರಣೆ ಮಾಡಬೇಕು. ಡಿಎಪಿ ಗೊಬ್ಬರ ಸಮಸ್ಯೆ ಬಗೆಹರಿಸದಿದ್ದರೆ ರೈತರು ಕೃಷಿ ಇಲಾಖೆಗೆ ಬೀಗ ಹಾಕಿ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ’ ಎಂದು ಶಾಸಕ ಅಮೃತ ದೇಸಾಯಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಬೀಜ ಮತ್ತು ಗೊಬ್ಬರ ದಾಸ್ತಾನು ಇಡಬೇಕು ಎಂದು ಸೂಚಿಸಿ, ದಾಸ್ತಾನಿನ ವಿವರ ಕೇಳಿದರು.

ADVERTISEMENT

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ‘ಈ ಬಾರಿ ಶೇ 5ರಷ್ಟು ಬಿತ್ತನೆ ಪ್ರದೇಶ ಹೆಚ್ಚಲಿದೆ. ಈವರೆಗೂ 140 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. 220 ಮಿ.ಮೀ. ಮಳೆಯಾಗಿದೆ. ಸದ್ಯ ಶೇಂಗಾ, ಉದ್ದು, ಮೆಕ್ಕೆಜೋಳ, ಸೋಯಾ ಹಾಗೂ ರಸಗೊಬ್ಬರ ದಾಸ್ತಾನು ಇದೆ’ ಎಂದು ಮಾಹಿತಿ ನೀಡಿದರು.

‘ಈ ಬಾರಿ ಮುಂಗಾರಿಗೆ ತಾಲ್ಲೂಕಿನಲ್ಲಿ 19,027 ಟನ್ ವಿವಿಧ ಬಗೆಯ ಗೊಬ್ಬರದ ಅಗತ್ಯವಿದೆ. ಸದ್ಯ 5,700 ಟನ್ ಗೊಬ್ಬರ ಪೂರೈಕೆಯಾಗಿದೆ. ಇದರಲ್ಲಿ 4,024 ಟನ್ ಡಿಎಪಿಗೆ ಬೇಡಿಕೆ ಇದೆ. ಆದರೆ ಡಿಎಪಿ ಕೊರತೆ ಇದ್ದು, ಜೂನ್ ಮೊದಲ ವಾರದಲ್ಲಿ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ’ ಎಂದರು.

‘ಬಿ.ಟಿ. ಹತ್ತಿ ಕುರಿತು ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಲ್ಲೂ ಸಭೆ ನಡೆಸಿ ಹತ್ತಿ ಇಳುವರಿ, ದರ, ಖರ್ಚುವೆಚ್ಚದ ಕುರಿತು ತಿಳಿವಳಿಕೆ ನೀಡುವ ಕೆಲಸ ಎರಡೇ ದಿನಗಳಲ್ಲಿ ಮಾಡಬೇಕು. ಈ ವಿಚಾರವಾಗಿ ತಾಲ್ಲೂಕು ಪಂಚಾಯ್ತಿ ಇಓ ಹಾಗೂ ತಾಲ್ಲೂಕು ತಹಶೀಲ್ದಾರ್ ಗಮನ ಹರಿಸಬೇಕು’ ಎಂದು ಸೂಚಿಸಿದರು.

ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್.ಹಿರೇಮಠ, ‘ತೋಟಗಾರಿಕೆ ಇಲಾಖೆ ವತಿಯಿಂದ ಹನಿ ನೀರಾವರಿಗೆ ಆದ್ಯತೆ ನೀಡಲಾಗಿದೆ. ಆಲೂಗಡ್ಡೆ ಹಾಗೂ ಮಾವು ಬಿತ್ತನೆಗೆ ಒಬ್ಬ ಫಲಾನುಭವಿಗೆ (ಗರಿಷ್ಠ ಒಂದು ಹೆಕ್ಟೇರ್‌) ₹5ಸಾವಿರ ಸಬ್ಸಿಡಿ ಇದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಮೃತ ದೇಸಾಯಿ, ‘ಆಲೂಗಡ್ಡೆ ಬೆಳೆ ಹಾನಿಯಾಗಿರುವ ಕುರಿತು ಈಗಾಗಲೇ ತಾಲ್ಲೂಕಿಗೆ ₹ 262 ಕೋಟಿ ವಿಮೆ ಬಂದಿದೆ ಎಂದು ಹೇಳುತ್ತೀರಿ. ಆದರೆ ನಮ್ಮ ತಾಲ್ಲೂಕಿನ ರೈತರು ವಿಮೆ ರೂಪದಲ್ಲಿ ಎಷ್ಟು ಹಣ ಕಟ್ಟಿದ್ದಾರೆ ಎಂಬ ಮಾಹಿತಿ ಕೊಡಿ’ ಎಂದರು.

ಅಧಿಕಾರಿಗಳು ಮಾಹಿತಿಗಾಗಿ ತಡಕಾಡಿದರೂ ಉತ್ತರ ನೀಡಲು ವಿಫಲರಾದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ದೇಸಾಯಿ, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ತಡವಾಗಿ ಬಂದ ಶಾಸಕ

ಶಾಸಕರಾದ ನಂತರ ಮೊದಲ ಬಾರಿಗೆ ಸಭೆ ನಡೆಸಿದ ಅಮೃತ ದೇಸಾಯಿ, ಬರೋಬ್ಬರಿ ಎರಡೂವರೆ ಗಂಟೆ ತಡವಾಗಿ ಬಂದರು.  ಸಭೆ ಬೆಳಿಗ್ಗೆ 11ಕ್ಕೆ ನಿಗದಿಯಾಗಿತ್ತು. ಶಾಸಕರು ಸಭೆಗೆ ಬಂದಾಗ ಮಧ್ಯಾಹ್ನ 1.30 ಆಗಿತ್ತು. ಬೆಳಿಗ್ಗೆ 11ಕ್ಕೆ ಬಂದ ಅಧಿಕಾರಿಗಳು ಶಾಸಕರು ಬರುವವರೆಗೂ ಕಾದು ಕೂತಿದ್ದರು. ಪ್ರಗತಿಪರಿಶೀಲನೆಯಲ್ಲಿ 24 ಇಲಾಖೆಗಳ ಮಾಹಿತಿ ಪಡೆದರು.

‘22 ಟ್ರಾನ್ಸ್‌ಫಾರ್ಮರ್‌ ಸುಟ್ಟಿವೆ’

ಈ ಬಾರಿ ಸಿಡಿಲಿನಿಂದ ತಾಲ್ಲೂಕಿನಲ್ಲಿ 22 ಟ್ರಾನ್ಸ್‌ಫಾರ್ಮರ್ ಕೆಟ್ಟಿದ್ದು, ನೂರಕ್ಕೂ ಹೆಚ್ಚು ಕಂಬಗಳ ದುರಸ್ತಿಯಾಗಬೇಕಿದೆ. ಅವುಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಉಳಿದಂತೆ ಕೆಲವೆಡೆ ಹೊಸ ಕಾಮಗಾರಿ ನಡೆದಿದ್ದು, ಅವುಗಳನ್ನೂ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಹೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪಶು ವೈದ್ಯಾಧಿಕಾರಿಗೆ ಎಚ್ಚರಿಕೆ

‘ಜಿಲ್ಲೆಯಲ್ಲಿ ಪಶುಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಅಗತ್ಯ ಇರುವ ಲಸಿಕೆ ದಾಸ್ತಾನು ಮಾಡಿ ಔಷಧ ವಿತರಿಸಲಾಗುತ್ತಿದೆ’ ಎಂದು ಪಶು ವೈದ್ಯಾಧಿಕಾರಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮೃತ, ‘ಇಲಾಖೆಯಲ್ಲಿರುವ ಅಧಿಕಾರಿಗಳು ಕಚೇರಿ ಬಿಟ್ಟು ಬೇರೆಡೆ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನೂ ನಿಯೋಜಿಸಿರುವ ಹಳ್ಳಿಗೆ ಕೆಲಸ ಮಾಡಲು ಹೇಳಿ’ ಎಂದು ಎಚ್ಚರಿಕೆ ನೀಡಿದರು.

ಎರಡೂವರೆ ಗಂಟೆ ತಡವಾಗಿ ಬಂದ ಶಾಸಕ

ಶಾಸಕರಾದ ನಂತರ ಮೊದಲ ಬಾರಿಗೆ ಸಭೆ ನಡೆಸಿದ ಅಮೃತ ದೇಸಾಯಿ, ಬರೋಬ್ಬರಿ ಎರಡೂವರೆ ಗಂಟೆ ತಡವಾಗಿ ಬಂದರು. ಸಭೆ ಬೆಳಿಗ್ಗೆ 11ಕ್ಕೆ ನಿಗದಿಯಾಗಿತ್ತು. ಶಾಸಕರು ಸಭೆಗೆ ಬಂದಾಗ ಮಧ್ಯಾಹ್ನ 1.30 ಆಗಿತ್ತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

ಬೆಳಿಗ್ಗೆ 11ಕ್ಕೆ ಬಂದ ಅಧಿಕಾರಿಗಳು ಶಾಸಕರು ಬರುವವರೆಗೂ ಕಾದು ಕೂತಿದ್ದರು. ಪ್ರಗತಿಪರಿಶೀಲನೆಯಲ್ಲಿ 24 ಇಲಾಖೆಗಳ ಮಾಹಿತಿ ಪಡೆದರು. ಆಹಾರ ವಿಭಾಗ, ಕುಡಿಯುವ ನೀರು, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕಾ ಇಲಾಖೆಗಳು ಮಾಹಿತಿ ನೀಡಿರಲಿಲ್ಲ.

ಶಾಸಕರ ಬೆಂಬಲಿಗರಿಂದ ಪ್ರಶ್ನೆ!

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಗಳಷ್ಟೇ ಸಂಖ್ಯೆಯಲ್ಲಿ ಅಮೃತ ದೇಸಾಯಿ ಅಭಿಮಾನಿಗಳೂ ಇದ್ದರು. ಸಭಾಂಗಣದಲ್ಲಿ ಬಂದು ಕೂತವರು ಸೌಲಭ್ಯಗಳು ನಮಗೆ ಸಿಕ್ಕಿಲ್ಲ ಎಂದು ಹೇಳುತ್ತಾ, ತಾವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದೇ ವೇಳೆ ಕೆಲಕಾಲ ವಿದ್ಯುತ್ ಕೈಕೊಟ್ಟಿತು. ಮೈಕ್‌ ವ್ಯವಸ್ಥೆಯೂ ಸರಿಯಾಗಿರಲಿಲ್ಲದ ಕಾರಣ ಸಭೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.