ADVERTISEMENT

ಗ್ರಾಮೀಣರಲ್ಲಿ ಉತ್ಸಾಹ, ನಗರ ಪ್ರದೇಶದಲ್ಲಿ ನೀರಸ

ಜಿಲ್ಲೆಯ 7 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ, ಗೊಂದಲ, ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 13 ಮೇ 2018, 6:28 IST
Last Updated 13 ಮೇ 2018, 6:28 IST

ಧಾರವಾಡ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಗೊಂದಲ, ಮತಯಂತ್ರಗಳು ಕಾರ್ಯನಿರ್ವಹಿಸದ ಒಂದಷ್ಟು ಬಿಡಿ ಘಟನೆಗಳು ಅಲ್ಲಲ್ಲಿ ನಡೆದವು.

ನಗರ ಪ್ರದೇಶಗಳಿಗೆ ಹೋಲಿಸಿದಲ್ಲಿ ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಮಧ್ಯಾಹ್ನದ ಒಳಗಾಗಿ ಬಹುತೇಕ ಗ್ರಾಮೀಣ ಪ್ರದೇಶದ ಮತಗಟ್ಟೆಗಳಲ್ಲಿ ಶೇ 70ರಷ್ಟು ಮತದಾನವಾಗಿತ್ತು. ಆದರೆ, ನಗರ ಪ್ರದೇಶದಲ್ಲಿ ಮತದಾನ ನೀರಸವಾಗಿತ್ತು.

ಬೆಳಿಗ್ಗೆಯಿಂದಲೇ ಗ್ರಾಮೀಣ ಭಾಗದಲ್ಲಿ ಮತದಾನದ ಸಂಭ್ರಮ ಮನೆಮಾಡಿತ್ತು. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೆರಡು ಮತಯಂತ್ರಗಳು ಕೈಕೊಟ್ಟಿದ್ದರಿಂದಆ ಮತಗಟ್ಟೆಗಳಲ್ಲಿ ಮತದಾನ ತಡವಾಗಿ ಆರಂಭಗೊಂಡಿತು. ಕುಂದಗೋಳದಲ್ಲಿ ಮಧ್ಯಾಹ್ನ ಬಿಸಿಲ ಪ್ರಮಾಣ ಹೆಚ್ಚಾಗಿ ವಿವಿ ಪ್ಯಾಟ್‌ ಸ್ಥಗಿತಗೊಂಡಿತ್ತು. ತಕ್ಷಣವೇ ಅದನ್ನು ಬದಲಿಸಿದರೂ, ಮತದಾನ ಅರ್ಧ ಗಂಟೆ ವಿಳಂಬವಾಯಿತು.

ADVERTISEMENT

ಕರಡಿಗುಡ್ಡದಲ್ಲಿ ಮತಗಟ್ಟೆ ಮಹಿಳಾ ಸಿಬ್ಬಂದಿಯೊಬ್ಬರು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಹೇಳಿದ್ದಾರೆ ಎಂದು ಆರೋಪಿಸಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಮಹಿಳಾ ಸಿಬ್ಬಂದಿಯನ್ನು ಕರೆದೊಯ್ದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಚುನಾವಣಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ, ‘ತನಿಖೆ ನಡೆಸಿ, ಆನಂತರ ಕ್ರಮ ಕೈಗೊಳ್ಳಲಾಗುವುದು. ಮತದಾನದ ಸಂದರ್ಭದಲ್ಲಿ ಕೆಲವೆಡೆ ಮತ ಯಂತ್ರಗಳಲ್ಲಿ ದೋಷ ಕಂಡುಬಂದಿತ್ತು. ತಕ್ಷಣವೇ ಅದನ್ನು ಸರಿಪಡಿಸಲಾಗಿದೆ’ ಎಂದರು.

ಮತದಾರರ ಕ್ರಮ ಸಂಖ್ಯೆ ಹೊಂದಿರುವ ಚೀಟಿಯನ್ನು ಸಮರ್ಪಕವಾಗಿ ವಿತರಿಸಿದ್ದರಿಂದಾಗಿ ಮತಗಟ್ಟೆಗಳಲ್ಲಿ ಹೆಚ್ಚಿನ ಗೊಂದಲದ ಕಂಡು ಬರಲಿಲ್ಲ. ಆದರೆ, ನಗರ ಪ್ರದೇಶದ ಹಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ಹಲವರು ಮತದಾನದಿಂದ ವಂಚಿತರಾದರು. ಜಯನಗರದ ಜನತಾ ಪ್ಲಾಟ್‌ನ 57 ಮತದಾರರಲ್ಲಿ 41 ಜನರ ಹೆಸರು ಇರಲಿಲ್ಲ. ಹಾಗೆಯೇ ಬೆಂಗಳೂರಿನಿಂದ ಮತದಾನಕ್ಕಾಗಿ ಬಂದಿದ್ದ ಕೆಲವರು, ಪಟ್ಟಿಯಲ್ಲಿ ಹೆಸರಿಲ್ಲದೆ ಬೇಸರದಿಂದ ಮನೆಯತ್ತ ಹೆಜ್ಜೆ ಹಾಕಿದರು.

ಹೆಬ್ಬಳ್ಳಿ, ಅಮ್ಮಿನಭಾವಿ ಮೊದಲಾದ ಕಡೆ ಪೈಪೋಟಿಯಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬಂತು. ಅದರಲ್ಲೂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಕೆಲವು ಮತಗಟ್ಟೆಗಳಲ್ಲಿ ನೂಕುನುಗ್ಗಲು ಇದ್ದುದರಿಂದ ಭದ್ರತಾ ಸಿಬ್ಬಂದಿ ಪ್ರಯಾಸಪಟ್ಟರು. ಸಂಜೆ ಸುರಿದ ಮಳೆಯಿಂದಾಗಿ ಕೆಲಕಾಲ ಮತದಾನ ಮಂದಗತಿಯಲ್ಲಿ ಸಾಗಿದರೂ, ಮತಗಟ್ಟೆಗಳ ಕಡೆ ಬರುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಗ್ರಾಮೀಣ ಭಾಗದ ಕೆಲವೆಡೆ ಶತಾಯುಷಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.