ADVERTISEMENT

ಜಗದ ಜ್ಯೋತಿಗೆ ಅವಳಿನಗರದ ಜನರ ನಮನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 9:15 IST
Last Updated 25 ಏಪ್ರಿಲ್ 2012, 9:15 IST

ಹುಬ್ಬಳ್ಳಿ: ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವವನ್ನು ಅವಳಿನಗರದ ವಿವಿಧ ಸಂಘಟನೆಗಳು ಮಂಗಳವಾರ ಸಂಭ್ರಮದಿಂದ ಆಚರಿಸಿದವು. ಧಾರವಾಡ ಜಿಲ್ಲಾ ಲಿಂಗಾಯತ/ವೀರಶೈವ ಸಂಘಟನಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಸವೇಶ್ವರರ ಪುತ್ಥಳಿಗೆ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾಲಾರ್ಪಣೆ ಮಾಡಿದರು.

`ಕಾಯಕಕ್ಕೆ ಮಹತ್ವ ನೀಡುವ ಮೂಲಕ ಕಾಯಕಯೋಗಿ ಬಸವಣ್ಣನವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ~ ಎಂದು ಸ್ವಾಮೀಜಿ ಕರೆ ನೀಡಿದರು. ಸಮಿತಿ ಅಧ್ಯಕ್ಷ ಬಸವರಾಜ ಕುರಡಗಿಮಠ ಅಧ್ಯಕ್ಷತೆ ವಹಿಸಿದ್ದರು. ಅಂದಾನೆಪ್ಪ ಹರದಾರಿ, ಚನ್ನಬಸಪ್ಪ ಧಾರವಾಡಶೆಟ್ರು, ಶೇಖಣ್ಣಾ ಹೊರಕೇರಿ, ಬಸವರಾಜ ಹತ್ತಿಕಾಳ, ಎಂ.ಎಸ್. ಶಿರಿಗಣ್ಣವರ, ಬಸವರಾಜ ಶೆಟ್ಟರ, ಗಂಗಾಧರ ಕಟವಟೆ, ಉಮೇಶ ತೋಟದ ಮತ್ತಿತರರು ಹಾಜರಿದ್ದರು.

ಈಶ್ವರಗುಡಿ ಟ್ರಸ್ಟ್ ಕಮಿಟಿ: ಗೋಕುಲ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಟ್ರಸ್ಟ್ ಕಮಿಟಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುತ್ತೈದೆಯರು ಬಸವೇಶ್ವರರ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೂಗಿದರು. ಮಧ್ಯಾಹ್ನ ಸಾಮೂಹಿಕ ವಿವಾಹ ನಡೆದರೆ, ಸಂಜೆ ರಥೋತ್ಸವ ಜರುಗಿತು.

ಪೌರಕಾರ್ಮಿಕರ ಮತ್ತು ನೌಕರರ ಸಂಘ: ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಬಸವೇಶ್ವರರ ಪ್ರತಿಮೆಗೆ ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಮಾಲಾರ್ಪಣೆ ಮಾಡಿದರು. ಸಮಾನತೆಯನ್ನು ಪ್ರತಿಪಾದಿಸಿದ ಮಹಾನ್ ವ್ಯಕ್ತಿ ಬಸವಣ್ಣನವರು ಎಂದು ಹಿಂಡಸಗೇರಿ ಅಭಿಪ್ರಾಯಪಟ್ಟರು.

ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಪಾಲಿಕೆ ವಿರೋಧ ಪಕ್ಷದ ನಾಯಕ ದಶರಥ ವಾಲಿ, ಅನ್ವರ್ ಮುಧೋಳ, ಭೀಮಣ್ಣ ಬಡಿಗೇರ, ಸದಾನಂದ ಡಂಗನವರ, ರಾಜು ಕೊಣ್ಣೂರು, ಮೋಹನ ಹಿರೇಮನಿ, ಮಲ್ಲಿಕಾರ್ಜುನ ಯಾತಗಿರಿ, ಸಂತೋಷ ಜಕ್ಕಪನವರ, ನಾಗರಾಜ ಗೌರಿ, ಸಿದ್ದು ದೊಡ್ಡಮನಿ, ಶ್ರೀಕಾಂತ ಸವದತ್ತಿ ಮತ್ತಿತರರು ಭಾಗವಹಿಸಿದ್ದರು.

ನಾಗರಿಕ ಸೇವಾ ಸಮಿತಿ: ವೀರಾಪುರ ರಸ್ತೆ ಎರಡೆತ್ತಿನಮಠದ ನಾಗರಿಕ ಸೇವಾ ಸಮಿತಿಯಿಂದ ಬಸವ ಜಯಂತಿ ಆಚರಿಸಲಾಯಿತು. ಎರಡೆತ್ತಿನ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸದ ಪ್ರಹ್ಲಾದ ಜೋಶಿ ಷಟ್‌ಸ್ಥಲ ಧ್ವಜಾರೋಹಣ ಮಾಡಿದರು. ಪ್ರಭು ನವಲಗುಂದಮಠ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ, ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಿಂಗರಾಜ ಪಾಟೀಲ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ಶಿವಾನಂದ ಮುತ್ತಣ್ಣವರ, ಸುಧೀರ್ ಸರಾಫ್, ಸಂಜಯ್ ಕಪಟಕರ್, ಜಯದೇವಯ್ಯ ಹಿರೇಮಠ, ನಿರಂಜನ ಹಿರೇಮಠ, ಡಾ.ಎಸ್.ಎಸ್. ಲಿಗಾಡೆ, ಆನಂದ ಭೋಸಲೆ, ಗುರುಸಿದ್ಧ ಗಾಡಿ, ಈರಣ್ಣ ಕುಂದಗೋಳ, ಚನ್ನಯ್ಯ ಚೌಕಿಮಠ, ನೀಲಕಂಠ ತಡಸದಮಠ ಪಾಲ್ಗೊಂಡಿದ್ದರು.

ಬಿಜೆಪಿ: ಬಿಜೆಪಿ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಬಸವೇಶ್ವರ ಹಾಗೂ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು. ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ ನೇತೃತ್ವ ವಹಿಸಿದ್ದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಧೀರ್ ಸರಾಫ್, ಸಂಜಯ್ ಕಪಟಕರ್, ಶಿವಾನಂದ ಮುತ್ತಣ್ಣವರ, ರಂಗನಾಯಕ ತಪೇಲಾ, ರಾಜಶ್ರೀ ಜಡಿ, ನೀಲಕಂಠ ಜರತಾರಘರ, ಚನ್ನಬಸಪ್ಪ ಹಳ್ಯಾಳ, ಬಸವರಾಜ ಕುರಿಯವರ, ಮಂಜುನಾಥ ಕಾಟ್ಕರ್, ರಾಮು ಕಿತ್ತಲಿ, ಗುರುಸಿದ್ಧಪ್ಪ ವಡ್ಡಟ್ಟಿ ಮೊದಲಾದವರು ಹಾಜರಿದ್ದರು.

ಜೆಡಿಎಸ್: ಜೆಡಿಎಸ್ ಮಹಾನಗರ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರರ ಮೂರ್ತಿಗೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾಲಾರ್ಪಣೆ ಮಾಡಿದರು. ಬಸವಣ್ಣನವರ ವಚನಗಳಲ್ಲಿ ಇಡೀ ಜಗತ್ತಿನ ಸಾರಸತ್ವವೇ ಅಡಗಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ, ಅಲ್ಕೋಡ ಹನುಮಂತಪ್ಪ, ಇಸ್ಮಾಯಿಲ್ ಕಾಲೇಬುಡ್ಡಿ, ರಾಜಣ್ಣ ಕೊರವಿ, ವಿ.ಐ. ಅಳಗುಂಡಗಿ, ಬಸವರಾಜ ರಾಯನಗೌಡ್ರ, ಹಜರತ್ ಅಲಿ ದೊಡ್ಡಮನಿ, ಫಯೀದಾ ಕಿಲ್ಲೇದಾರ, ಗುರಯ್ಯ ವಿರಕ್ತಮಠ, ಎಂ.ಆರ್.ಯರಗಟ್ಟಿ, ಶಶಿಧರ ಕೊರವಿ, ಸುಧಾಕರ ಶೆಟ್ಟರ, ಮೇಘರಾಜ ಹಿರೇಮನಿ, ಲೋಕೇಶ ಜಾಧವ್, ಪ್ರಕಾಶ ಮಹಾರಾಜನವರ, ದಾವಲಸಾಬ್ ನದಾಫ್, ಕಿರಣ ಹಿರೇಮಠ ಭಾಗವಹಿಸಿದ್ದರು.

ಅಕ್ಕನ ಬಳಗ: ಜಯಚಾಮರಾಜನಗರದ ಅಕ್ಕನ ಬಳಗದ ಸದಸ್ಯರು ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈರಮ್ಮ ಪಂಚಾಂಗಮಠ, ಗಿರಿಜಕ್ಕ ಯಳಮಲಿ, ಗಿರಿಜಾ ಪಾಟೀಲ, ಮಂಗಲಾ ನರವಣಿ, ಸುವರ್ಣ ಸಾವಕಾರ, ಮಂಗಲಾ ಕಬ್ಬೂರ, ಪದ್ಮಾವತಿ ಮುಮ್ಮಿಗಟ್ಟಿ, ಗೀತಾ ಮುಳ್ಳಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

ಜೆಡಿಎಸ್ ನಗರ ಯುವ ಘಟಕ: ಜೆಡಿಎಸ್ ಮಹಾನಗರ ಜಿಲ್ಲಾ ಯುವ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಫತೇಶ ಯರಗಟ್ಟಿ ಮಾಲಾರ್ಪಣೆ ಮಾಡಿದರು. ಮಂಜು ಧಾರವಾಡ, ಇಮ್ತಿಯಾಜ್ ಖತೀಬ್, ನವೀನ್ ಮಡಿವಾಳರ, ಮೈನು ಧಾರವಾಡ, ಮಂಜು ಬದ್ದಿ, ಫೈರೋಜ್ ಜಮಖಂಡಿ, ಬಾಷಾ ಹಳ್ಳೂರ ಮತ್ತಿತರರು ಹಾಜರಿದ್ದರು.

ಉತ್ತರ ಕರ್ನಾಟಕ ನೃತ್ಯ ಕಲಾವಿದರ ಸಂಘ:
ಉತ್ತರ ಕರ್ನಾಟಕ ನೃತ್ಯ ಕಲಾವಿದರ ಸಂಘದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರರ ಪುತ್ಥಳಿಗೆ ಪ್ರಕಾಶ ಮಲ್ಲಿಗವಾಡ ಮಾಲಾರ್ಪಣೆ ಮಾಡಿದರು. ಸುಧೀರ್ ಯಾದವ್, ಮನೀಶ್ ಶಿಂಧೆ, ಚಿನ್ನು ವಸ್ತ್ರದ, ಸೈಯದ್ ಅಷ್ಪಾಕ್, ಮಹೇಶ ಕಡಿದಾಸರ, ಆನಂದ ಹೆರಕಲ್ ಮತ್ತಿತರರು ಭಾಗವಹಿಸಿದ್ದರು.

ಶ್ರೀರಾಮುಲು ಅಭಿಮಾನಿ ಸಂಘ: ಸ್ವಾಭಿಮಾನಿ ಬಿ. ಶ್ರೀರಾಮುಲು ಅಭಿಮಾನಿ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಎನ್.ಎಂ. ಧಾಣಿಬಾಗ್ ಮಾಲಾರ್ಪಣೆ ಮಾಡಿದರು. ಸಚಿನ್ ಕಾಟವೆ ಹಾಗೂ ಸಂಘದ ಕಾರ್ಯಕರ್ತರು ಹಾಜರಿದ್ದರು.

ಬುಡ್ಗಜಂಗಮ ಸಂಸ್ಥೆ: ಅಖಿಲ ಭಾರತ ಬೇಡಜಂಗಮ, ಬುಡ್ಗಜಂಗಮ, ಮೂಲಜಂಗಮ ಸಮಾಜ ಸಂಸ್ಥೆಯಿಂದ ಬಸವ ಜಯಂತಿಯನ್ನು ಆಚರಿಸಲಾಯಿತು. ಪ್ರಭು ನವಲಗುಂದಮಠ, ವೀರಣ್ಣ ಹಿರೇಹಾಳ, ನೀಲಕಂಠ ತಡಸದಮಠ, ಮಹಾಂತೇಶ ಗಿರಿಮಠ, ವಿ.ಎಸ್. ಘಂಟಿಮಠ, ಶಿವಕುಮಾರ ಹಿರೇಮಠ, ನಿರಂಜನ ಹಿರೇಮಠ, ಬಸವರಾಜ ಕುಂದಗೋಳಮಠ, ಉಮಾ ಪಂಚಾಂಗಮಠ, ಗುರು ವಿರಕ್ತಮಠ, ಪಿ.ಎಂ. ಚಿಕ್ಕಮಠ, ಶೇಖರಯ್ಯ ಮಠಪತಿ ಮೊದಲಾದವರು ಪಾಲ್ಗೊಂಡಿದ್ದರು.

ಸಮತಾ ಸೇನಾ: ಸಮತಾ ಸೇನಾ ನಗರ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಬಸವೇಶ್ವರರ ಪ್ರತಿಮೆಗೆ ಗುರುನಾಥ ಉಳ್ಳಿಕಾಶಿ ಮಾಲಾರ್ಪಣೆ ಮಾಡಿದರು. ಪಿತಾಂಬ್ರಪ್ಪ ಬಿಳಾರ, ಶಂಕರ ಭೋಜಗಾರ, ಸೋಮು ಹಂಜಗಿ, ಹನುಮಂತ ಮೂಲಿಮನಿ, ಅನಿಲ ಸಣ್ಣಕ್ಕಿ, ಮಂಜುನಾಥ ಸಣ್ಣಕ್ಕಿ, ಅಪ್ಪಣ್ಣ ವಾಲಿಕಾರ, ನಿರ್ಮಲಾ ಮಾನೆ, ಮಮ್ತಾಜ್ ಪಠಾಣ್, ಕಮಲಾಕ್ಷಿ ದಂಡಿನ, ಕುಸ್ಬು ವಿಜಾಪುರ ಮತ್ತಿತರರು ಭಾಗವಹಿಸಿದ್ದರು.

ಬಸವೇಶ್ವರ ದೇವಸ್ಥಾನ: ವಿದ್ಯಾನಗರದ ಸಿದ್ದೇಶ್ವರ ಪಾರ್ಕ್ ಹತ್ತಿರವಿರುವ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ನಡೆದರೆ ರಾತ್ರಿ ಮಹಾಪೂಜೆ ಜರುಗಿತು. ಪುಷ್ಪ ಹಾಗೂ ದೀಪಾಲಂಕಾರ ಗಮನ ಸೆಳೆಯಿತು. ಸುರೇಶ ಲಿಂಬಿಕಾಯಿ, ಸಂಜೀವ ನೂಲ್ವಿ, ಈಶ್ವರಪ್ಪ ಹೂಗಾರ, ಅಲ್ಲಾಬಕ್ಷ್ ನದಾಫ್, ಬಸವರಾಜ ದಿವಟರ ಮತ್ತಿತರರು ಹಾಜರಿದ್ದರು.

ಹರಳಯ್ಯ ಸಮಾಜ ವೇದಿಕೆ: ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ ಸಮಾಜ ವೇದಿಕೆಯಿಂದ ಬಸವ ಜಯಂತಿ ಅಂಗವಾಗಿ ಪಥ ಸಂಚಲನ ಏರ್ಪಡಿಸಲಾಗಿತ್ತು. ಸಮಿತಿ ಅಧ್ಯಕ್ಷ ಡಾ. ಬಿ.ವಿ. ಶಿರೂರ ನೇತೃತ್ವ ವಹಿಸಿದ್ದರು. ದುರ್ಗದಬೈಲ್‌ನಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಾಯ್ದು ಬಸವೇಶ್ವರ ವೃತ್ತ ಬಂದು ತಲುಪಿತು.

ವ್ಯಾಪಾರಸ್ಥರ ಸಂಘ: ನಗರದ ವ್ಯಾಪಾರಸ್ಥರ ಸಂಘದಿಂದ ಎಪಿಎಂಸಿ ಪ್ರಾಂಗಣದಲ್ಲಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಜಿ.ಆರ್. ಬೆಲ್ಲದ, ಉಪಾಧ್ಯಕ್ಷ ಪ್ರಕಾಶ ಓಸ್ತವಾಲ, ಕಾರ್ಯದರ್ಶಿ ಗಂಗನಗೌಡ ಪಾಟೀಲ, ಸಹ ಕಾರ್ಯದರ್ಶಿ ಗುರುನಾಥ ಸೋಳಂಕಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ: ಹುಬ್ಬಳ್ಳಿ ತಾಲ್ಲೂಕು ಬಸವಪ್ರಿಯ ಲಿಂಗಾಯತ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಬಸವ ಜಯಂತಿ ಅಂಗವಾಗಿ ದುರ್ಗದ ಬೈಲ್‌ನಿಂದ ಬಸವೇಶ್ವರ ವೃತ್ತದವರೆಗೆ ಪಥ ಸಂಚಲನ ಏರ್ಪಡಿಸಲಾಗಿತ್ತು. ಕಾರ್ಯಕರ್ತರು ಶ್ವೇತವಸ್ತ್ರಧಾರಿಗಳಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜಯ ಕರ್ನಾಟಕ: ಬಸವ ಜಯಂತಿ ಅಂಗವಾಗಿ ಜಯ ಕರ್ನಾಟಕ ಸಂಘಟನೆಯಿಂದ ಬೈಕ್ ರ‌್ಯಾಲಿ ಏರ್ಪಡಿಸಲಾಗಿತ್ತು. ತಿಮ್ಮಸಾಗರ ಓಣಿಯ ಬಸವಣ್ಣನಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭಿಸಲಾದ ಬೈಕ್ ರ‌್ಯಾಲಿ, ಡಾಕಪ್ಪ ಸರ್ಕಲ್, ಮುಲ್ಲಾನ ಓಣಿ, ಕಾಳಮ್ಮನ ಅಗಸಿ, ಮೂರುಸಾವಿರಮಠ, ಅಂಚಟಗೇರಿ ಓಣಿ, ಜನತಾ ಬಜಾರ್, ಚನ್ನಮ್ಮ ಸರ್ಕಲ್ ಮೂಲಕ ಬಸವೇಶ್ವರರ ಪುತ್ಥಳಿ ಬಂದು ತಲುಪಿತು. ಮತ್ತೆ ಕೇಶ್ವಾಪುರ ಮೂಲಕ ಹೊರಟ ರ‌್ಯಾಲಿ ಗಬ್ಬೂರಿನಲ್ಲಿ ಕೊನೆಗೊಂಡಿತು. ಹೊನ್ನಪ್ಪ ಕೊಗೋಡ, ಬಸವರಾಜ ಅಂಗಡಿ, ಸುರೇಶ ಖಾನಾಪುರ, ಅಭಿಷೇಕ ಇಜಾರಿ, ಉಮೇಶ ಸೋಮನಗೌಡ್ರ, ಮಂಜುನಾಥ ಕಲ್ಲೂರ, ಮಂಜು ಜಗದ ಮತ್ತಿತರರು ಹಾಜರಿದ್ದರು.

ಕಲ್ಮೇಶ್ವರ ದೇವಸ್ಥಾನ: ಭೈರಿದೇವರಕೊಪ್ಪದ ಕಲ್ಮೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಅಂಗವಾಗಿ ಕಲ್ಮೇಶ್ವರ ದೇವರ ಗದ್ದುಗೆಗೆ ಮಹಾ ರುದ್ರಾಭಿಷೇಕ ಮಾಡಲಾಯಿತು. ಕಲ್ಮೇಶ್ವರ ದೇವರ ಅಡ್ಡಪಲ್ಲಕ್ಕಿ ಮಹೋತ್ಸವವನ್ನೂ ಏರ್ಪಡಿಸಲಾಗಿತ್ತು. ಸಂಜೆ ಬಸವೇಶ್ವರರ ಭಾವಚಿತ್ರ ಹಾಗೂ ಎತ್ತುಗಳ ಮೆರವಣಿಗೆ ನಡೆಯಿತು.ಲಡ್ಡುಮುತ್ಯಾ ಅಜ್ಜನವರು ಹಾಗೂ ಸಿದ್ದರಾಮಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಆಕರ್ಷಕ ಮೆರವಣಿಗೆ; ಮೊಳಗಿದ ವಚನಗಾಯನ
ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಇಡೀ ದಿನ ಜಗಜ್ಯೋತಿ ಬಸವೇಶ್ವರರದ್ದೇ ಕನವರಿಕೆ. ಗಲ್ಲಿ-ಗಲ್ಲಿಗಳಲ್ಲಿ ಬಸವೇಶ್ವರರ ಭಾವಚಿತ್ರಗಳ ಮೆರವಣಿಗೆ ನಡೆದರೆ, ಕೆಲವೆಡೆ ದೇವಸ್ಥಾನಗಳಲ್ಲಿ ಬಸವೇಶ್ವರರ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಸಂಭ್ರಮಿಸಲಾಯಿತು. ಯುವಕರು ಬೈಕ್ ರ‌್ಯಾಲಿ ನಡೆಸುವ ಮೂಲಕ ನಗರದ ತುಂಬಾ ಬಸವ ಅಲೆ ಏಳುವಂತೆ ಮಾಡಿದರೆ, ವಿವಿಧ ಸಂಘಟನೆಗಳು ಆಕರ್ಷಕ ಪಥ ಸಂಚಲನ ನಡೆಸಿದವು.

ಬಸವವನ ಹಾಗೂ ಕೇಶ್ವಾಪುರ ವೃತ್ತದ ಬಸವೇಶ್ವರರ ಪುತ್ಥಳಿಗೆ ಬೆಳಗಿನಿಂದ ಸಂಜೆವರೆಗೆ ಸಾವಿರಾರು ಜನ ತಂಡ, ತಂಡವಾಗಿ ಬಂದು ಮಾಲಾರ್ಪಣೆ ಮಾಡಿದರು. ರಾಜಕೀಯ ಪಕ್ಷಗಳು, ಧಾರ್ಮಿಕ ಸಂಘಟನೆಗಳು ಬಸವ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಹಲವು ಬಡಾವಣೆಗಳಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಭೈರಿದೇವರಕೊಪ್ಪದಲ್ಲಿ ಎತ್ತುಗಳ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.  ಮೂರುಸಾವಿರ ಮಠದ ಬಸವ ಜಯಂತಿ ಉತ್ಸವ ಸಮಿತಿಯಿಂದ ಸಂಜೆ ಆಕರ್ಷಕ ಮೆರವಣಿಗೆ ನಡೆಯಿತು.

ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಮಂಗಲವಾದ್ಯ, ಕೀಲು ಕುದುರೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಕಳೆ ಕಟ್ಟಿದ್ದವು. ಪಥ ಸಂಚಲನದಲ್ಲಿ ಮೂಡಿಬಂದ ಸಮಾನತೆ ಸಾರುವ ರೂಪಕಗಳು ಗಮನಸೆಳೆದವು. ವಚನ ಗಾಯನ ಎಲ್ಲೆಡೆಯೂ ಕೇಳಿಬಂತು.

ಮೂರುಸಾವಿರ ಮಠದ ಆವರಣದಲ್ಲಿ ಸಂಜೆಯ ಗೋದೂಳಿ ಮುಹೂರ್ತದಲ್ಲಿ ಮೆರವಣಿಗೆಗೆ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ದಾಜಿಬಾನಪೇಟೆ, ಹೊಸಹುಬ್ಬಳ್ಳಿ ಮ್ಯಾದಾರ ಓಣಿ, ಬ್ರಾಡ್‌ವೇ, ದುರ್ಗದಬೈಲ್, ರಾಧಾಕೃಷ್ಣಗಲ್ಲಿ, ವೀರಾಪುರ ಓಣಿ, ಬಡಿಗೇರ ಓಣಿ, ಸಿಂಪಿಗಲ್ಲಿ, ಜವಳಿಸಾಲ್, ಪೆಂಡಾರಗಲ್ಲಿ, ಕಂಚಗಾರಗಲ್ಲಿ ಮೂಲಕ ಮತ್ತೆ ಮಠದ ಆವರಣವನ್ನು ಬಂದು ತಲುಪಿತು. ಕಳೆದ ಐದು ದಿನಗಳಿಂದ ಮಠದ ಆವರಣದಲ್ಲಿ ನಡೆಯುತ್ತಿದ್ದ ಉತ್ಸವಕ್ಕೂ ಮೆರವಣಿಗೆ ಮೂಲಕ ತೆರೆಬಿತ್ತು.

ಮಾಜಿ ಸಚಿವ ಬಸವರಾಜ ಹೊರಟ್ಟಿ, ಮೇಯರ್ ಡಾ. ಪಾಂಡುರಂಗ ಪಾಟೀಲ, ಶಾಸಕ ವೀರಭದ್ರಪ್ಪ ಹಾಲಹರವಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಶಂಕ್ರಣ್ಣ ಮುನವಳ್ಳಿ, ಹನುಮಂತಪ್ಪ ಅಲ್ಕೋಡ, ರಾಜಣ್ಣ ಕೊರವಿ, ಚನ್ನಬಸಪ್ಪ ಹಳ್ಯಾಳ, ಸುನಿಲ್ ಯಲಬುರ್ಗಿ, ಮಂಜುನಾಥ ಹಳ್ಯಾಳ, ವಿಜಯಕುಮಾರ ಕುಂದನಹಳ್ಳಿ ಭಾಗವಹಿಸಿದ್ದರು.

ಛಬ್ಬಿಯಲ್ಲಿ ಅಹೋರಾತ್ರಿ ಸಂಗೀತ
ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಹಾಗೂ ಡಾ. ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆ ಅಂಗವಾಗಿ ಗುರುಕೃಪಾ ಸಂಗೀತ ಸಿಂಚನ ಟ್ರಸ್ಟ್ ವತಿಯಿಂದ ಅಹೋರಾತ್ರಿ ಸಂಗೀತ ಮಹೋತ್ಸವ ಏರ್ಪಡಿಸಲಾಗಿತ್ತು.

ಪಂ. ಅಶೋಕ ನಾಡಗೀರ, ವಿನಯ ನಾಯಕ, ರಾಜೇಶ್ವರಿ ಹೆಗಡೆ, ಪಂ. ಪರಮೇಶ್ವರ ಯಲವಿಗಿ, ಪಂ. ಹನುಮಂತಪ್ಪ ಅಳಗವಾಡಿ,    ಎಸ್.ಡಿ. ಕೊಳೆಕ್ಕನವರ, ಮಾರುತಿ ಕುಲಕರ್ಣಿ, ಬಸವರಾಜ ಬೆಣ್ಣಿ, ಬಿ.ಆರ್. ಹಿರೇಮಠ ಮತ್ತಿತರ ಕಲಾವಿದರು ಪಾಲ್ಗೊಂಡಿದ್ದರು. ಹುಬ್ಬಳ್ಳಿ ಆರ್ಟಿಸ್ಟ್ ಫೋರಂನ ಸುಭಾಷ ಮಡಿಮನ್ ಉತ್ಸವವನ್ನು ಉದ್ಘಾಟಿಸಿದರು.

ರವಿ ಕೂಡ್ಲಿಗಿ, ಮನೋಜ್ ಹಾನಗಲ್, ವಿನಾಯಕ ಕುಲಕರ್ಣಿ, ಶಂ.ಗು. ಪಾಟೀಲ, ರಾಮಣ್ಣ ಕುಲಕರ್ಣಿ, ದೇವೇಂದ್ರಪ್ಪ ಬಸಾಪುರ, ಬಸವಣ್ಣೆಪ್ಪ ನಾಗರಹಳ್ಳಿ, ಬಿ.ಎನ್. ಬಸಾಪುರ, ವಿ.ಎಚ್. ಪಾಟೀಲ, ಬಸವರಾಜ ಹಿರೇಮಠ ಮತ್ತಿತರರು ಹಾಜರಿದ್ದರು.

ಪಾಲಿಕೆಯಿಂದ ಗೌರವ
ಮಹಾನಗರ ಪಾಲಿಕೆಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಮೇಯರ್ ಡಾ. ಪಾಂಡುರಂಗ ಪಾಟೀಲ ಹುಬ್ಬಳ್ಳಿಯ ಬಸವ ವನದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಹಾಗೂ ಉಪ ಮೇಯರ್ ಭಾರತಿ ಪಾಟೀಲ ಧಾರವಾಡದ ಕಡಪಾ ಮೈದಾನದಲ್ಲಿರುವ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕೇಶ್ವಾಪುರ ಸರ್ಕಲ್‌ನಲ್ಲಿರುವ ಬಸವೇಶ್ವರರ ಪ್ರತಿಮೆಗೆ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ ಮಾಲಾರ್ಪಣೆ ಮಾಡಿದರು.  ಎಸ್.ಎಚ್. ನರೇಗಲ್, ಪಾಲಿಕೆ ಸದಸ್ಯರಾದ ಹಜರತ್‌ಅಲಿ ದೊಡಮನಿ, ರಾಜಣ್ಣ ಕೊರವಿ, ಸುಧೀರ್ ಸರಾಫ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.