ADVERTISEMENT

ಜ್ಞಾನಪೀಠ ಪುರಸ್ಕೃತರು ವಾದ ಮಂಡಿಸಲಿ: ಪಾ.ಪು

ಭಾಷಾ ಮಾಧ್ಯಮ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 11:19 IST
Last Updated 7 ಜುಲೈ 2013, 11:19 IST

ಧಾರವಾಡ: ರಾಜ್ಯದಲ್ಲಿ ಕಲಿಕಾ ಭಾಷೆ ಯಾವುದು ಇರಬೇಕು ಎಂಬುದನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ, `ಸುಪ್ರೀಂ ಕೋರ್ಟ್ ಈ ಮೂಲಕ ತನ್ನ ಕೆಲಸವನ್ನು ವಿನಾಕಾರಣ ಹೆಚ್ಚು ಮಾಡಿಕೊಳ್ಳುತ್ತಿದೆ' ಎಂದಿದ್ದಾರೆ.

`ಭಾಷಾ ಮಾಧ್ಯಮ ಪ್ರಶ್ನೆ ದೇಶದಲ್ಲಿ ಭಾಷಾನ್ವಯ ರಾಜ್ಯ ನಿರ್ಮಾಣವಾದಾಗಲೇ ಕಿತ್ತು ಹೋಗಬೇಕಾಗಿತ್ತು. ಆದರೆ ಆ ಪ್ರಶ್ನೆ ಈಗ ಸುಪ್ರೀಂ ಕೋರ್ಟ್ ಬಂದಿದೆ. ಪ್ರಾದೇಶಿಕ ಭಾಷೆಗಳು ಬೆಳೆಯಬೇಕು ಎನ್ನುವ ದೃಷ್ಟಿಯಿಂದಲೇ ಭಾಷಾನ್ವಯ ಪ್ರಾಂತಗಳು ನಿರ್ಮಾಣಗೊಂಡವು. ಭಾಷಾನ್ವಯ ಪ್ರಾಂತಗಳು ರಚನೆಗೊಂಡು ಈಗಾಗಲೇ 60 ವರ್ಷಗಳ ಸಮೀಪಕ್ಕೆ ಬಂದಿರುವುದನ್ನು ಕಣ್ಣಿಲ್ಲದಿದ್ದವರೂ ಕೂಡ ಗಮನಿಸಬಹುದು.

ನಮ್ಮ ರಾಜ್ಯ ಸರ್ಕಾರಗಳಿಗೆ ಶಿಕ್ಷಣ ಮಾಧ್ಯಮವು ಪ್ರಾದೇಶಿಕ ಭಾಷೆ ಆಗಿರಬೇಕೆಂದು ಒತ್ತಾಯಪಡಿಸುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ. ಈಗ ಅದು ಪುರಾಣ. ಮಕ್ಕಳ ಶಿಕ್ಷಣ ಮಾಧ್ಯಮವು ಪ್ರಾದೇಶಿಕ ಭಾಷೆ ಆಗಿರಬೇಕೆಂದು ಸುಪ್ರೀಂ ಕೋರ್ಟ್ ಮುಂದೆ ವಾದ ಮಾಡಬೇಕಾಗಿ ಬಂದಿದೆ. ರಾಜ್ಯದ ಜ್ಞಾನಪೀಠ ಪುರಸ್ಕೃತರು ಈಗ ನ್ಯಾಯಾಲಯದ ಮುಂದೆ ಹೋಗಿ, ಶಿಕ್ಷಣ ಮಾಧ್ಯಮವು ಮಕ್ಕಳ ಮಾತೃ ಭಾಷೆಯಲ್ಲಿಯೇ ಆಗಿರಬೇಕೆನ್ನುವುದನ್ನು ಒತ್ತಾಯ ಪಡಿಸಬೇಕಾಗಿದೆ' ಎಂದು ಹೇಳಿದ್ದಾರೆ.

`ರಾಜ್ಯ ಸರ್ಕಾರವು ಜ್ಞಾನಪೀಠ ಪುರಸ್ಕೃತರಿಗೆ ಈ ಕೆಲಸ ವಹಿಸಿಕೊಟ್ಟು, ವಾದ ಮಂಡಿಸಲು ಸುಪ್ರೀಂ ಕೋರ್ಟ್ ಮುಂದೆ ಕಳಿಸಬೇಕು. ಇದು ಉದಾಸೀನ ಮಾಡಿ ಬಿಡತಕ್ಕ ವಿಷಯವಲ್ಲ. ಸರ್ಕಾರವು ಸುಪ್ರೀಂ ಕೋರ್ಟ್ ಎದುರು ಹೋರಾಟ ಮಾಡಿ ಗೆಲ್ಲಲೇಬೇಕಾಗಿದೆ. ಈಗ ಅದು ತಪ್ಪಿದರೆ ಜೀವಮಾನದ ಉದ್ದಕ್ಕೂ ಮರೆಯಲಾಗದ ಘೋರ ಅನ್ಯಾಯವೆನಿಸುತ್ತದೆ' ಎಂದು ಡಾ.ಪಾಟೀಲ ಪುಟ್ಟಪ್ಪ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.