ADVERTISEMENT

‘ಡಿಫೆನ್ಸ್‌ ಪಾರ್ಕ್‌’ ನಿರ್ಮಾಣಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 8:48 IST
Last Updated 3 ಜೂನ್ 2018, 8:48 IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ಡಿಫೆನ್ಸ್‌ ಪಾರ್ಕ್‌(ರಕ್ಷಣಾ ಸಲಕರಣೆಗಳು ಹಾಗೂ ಉತ್ಪನ್ನಗಳ ಪಾರ್ಕ್‌), ಕೈಗಾರಿಕಾ ಪಾರ್ಕ್‌, ವಿಶೇಷ ಆರ್ಥಿಕ ವಲಯ, ಬಿಐಎಸ್‌ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಜಿಲ್ಲೆಯ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಲಾಯಿತು.

ಇಲ್ಲಿನ ಕೆಸಿಸಿಐ ಸಭಾಂಗಣದಲ್ಲಿ ಶನಿವಾರ ನಡೆದ ಜನಪ್ರತಿನಿಧಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಈ ಸಂಬಂಧ ಶಾಸಕರು ಮತ್ತು ಸಂಸದ ಅವರಿಗೆ ಮನವಿ ಸಲ್ಲಿಸಿದರು.ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಜಾರಿ ಮಾಡಬೇಕು, ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು, ಟ್ರಕ್‌ ಟರ್ಮಿನಲ್‌ ಸಂಪೂರ್ಣ ಅಭಿವೃದ್ಧಿ ಪಡಿಸಬೇಕು, ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕು ಎಂದು ಕೋರಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಎಲ್ಲಾ ವೈಫಲ್ಯಗಳಿಗೆ ಶಾಸಕಾಂಗವನ್ನೇ ಹೊಣೆ ಮಾಡುವುದು ಸರಿಯಲ್ಲ. ಆಡಳಿತಶಾಹಿ ವ್ಯವಸ್ಥೆ ಹಾಗೂ ನ್ಯಾಯಾಂಗ ವ್ಯವಸ್ಥೆ ಬದಲಾಗದ ಹೊರತು ದೇಶ ಅಭಿವೃದ್ಧಿಯಾಗದು ಎಂದು ಅಭಿಪ್ರಾಯಪಟ್ಟರು.ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಬೆಂಗಳೂರು, ಮಂಗಳೂರು, ಮೈಸೂರಿಗೆ ಹೋಲಿಸಿದರೆ ಹುಬ್ಬಳ್ಳಿ ಸಾಕಷ್ಟು ಹಿಂದುಳಿದಿದೆ. ಈ ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ADVERTISEMENT

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಒಎನ್‌ಜಿಸಿಯಿಂದ ₹ 13 ಕೋಟಿ ಅನುದಾನದಲ್ಲಿ ಧಾರವಾಡದಲ್ಲಿ ಹೊಸ ಈಜುಕೊ ಳ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಹೇಳಿದರು. ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ, ಕೆಸಿಸಿಐನಲ್ಲಿ ಗ್ರಾಮೀಣ ಭಾಗದ ಸಮಸ್ಯೆ, ಅಭಿವೃದ್ಧಿಯತ್ತ ಚಿಂತನೆ ನಡೆಯಲಿ ಎಂದರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ, ನೂತನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಬಸವರಾಜ ಹೊರಟ್ಟಿ, ಸಿ.ಎಸ್‌.ಶಿವಳ್ಳಿ, ಪ್ರಸಾದ ಅಬ್ಬಯ ಸೇರಿದಂತೆ ಮೂವರಲ್ಲಿ ಯಾರಾದರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕೆಸಿಸಿಐ ಅಧ್ಯಕ್ಷ ವಿ.ಪಿ.ಲಿಂಗನಗೌಡ, ಉಪಾಧ್ಯಕ್ಷ ಜಿ.ಕೆ.ಆದಪ್ಪಗೌಡ, ಗೌರವ ಕಾರ್ಯದರ್ಶಿ ವಿನಯ ಜವಳಿ, ರಮೇಶ ಪಾಟೀಲ, ಮೋಹನ ಲಿಂಬಿಕಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.