ADVERTISEMENT

ತವರು ಜಿಲ್ಲೆಯಲ್ಲೇ ಶೆಟ್ಟರ್‌ಗೆ ಹಿನ್ನಡೆ

ಪ್ರಜಾವಾಣಿ ವಿಶೇಷ
Published 4 ಆಗಸ್ಟ್ 2011, 8:30 IST
Last Updated 4 ಆಗಸ್ಟ್ 2011, 8:30 IST
ತವರು ಜಿಲ್ಲೆಯಲ್ಲೇ ಶೆಟ್ಟರ್‌ಗೆ ಹಿನ್ನಡೆ
ತವರು ಜಿಲ್ಲೆಯಲ್ಲೇ ಶೆಟ್ಟರ್‌ಗೆ ಹಿನ್ನಡೆ   

ಹುಬ್ಬಳ್ಳಿ: ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಪೈಪೋಟಿ ಒಡ್ಡಿದ ಸಚಿವ ಜಗದೀಶ ಶೆಟ್ಟರ ಬೇರೆ ಜಿಲ್ಲೆಗಳ ಶಾಸಕರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದರೂ ವಿಭಜನಾಪೂರ್ವದ ಧಾರವಾಡ ಜಿಲ್ಲೆಯಲ್ಲಿಯೇ ದೊಡ್ಡ ಹಿನ್ನಡೆಯನ್ನು ಅನುಭವಿಸಿದರು.

ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಲಿಂಗಾಯತ ಶಾಸಕರು ಕೈಕೊಟ್ಟದ್ದೇ ಶೆಟ್ಟರ್ ಅವರ ಅದೃಷ್ಟಕ್ಕೆ ಅಡ್ಡಗಾಲಾಯಿತು ಎಂದು ಅವರ ಬೆಂಬಲಿಗರು ದೂರಿದ್ದಾರೆ. `ಮುಂದಿನ ದಿನಗಳಲ್ಲಿ ಮುಯ್ಯಿ ತೀರಿಸಿಕೊಳ್ಳದೆ ಬಿಡುವುದಿಲ್ಲ~ ಎಂದು ಆಕ್ರೋಶವನ್ನೂ ಹೊರಹಾಕಿದ್ದಾರೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಈ ಮೂರೂ ಜಿಲ್ಲೆಗಳ 18 ಸೀಟುಗಳ ಪೈಕಿ ಬಿಜೆಪಿ 16ರಲ್ಲಿ ಜಯ ಸಾಧಿಸಿತ್ತು. ಆ 16 ಶಾಸಕರ ಪೈಕಿ ಬುಧವಾರ ನಡೆದ ನಾಯಕನ ಆಯ್ಕೆ ಚುನಾವಣೆಯಲ್ಲಿ ಕೇವಲ ನಾಲ್ಕು ಮಂದಿ ಶೆಟ್ಟರ್ ಕೈಹಿಡಿದರು. ಅವರೆಂದರೆ ವೀರಭದ್ರಪ್ಪ ಹಾಲಹರವಿ (ಹುಬ್ಬಳ್ಳಿ ಪಶ್ಚಿಮ), ಸೀಮಾ ಮಸೂತಿ (ಧಾರವಾಡ ಗ್ರಾಮೀಣ), ಶಂಕರಪಾಟೀಲ ಮುನೇನಕೊಪ್ಪ (ನವಲಗುಂದ) ಹಾಗೂ ಕಳಕಪ್ಪ ಬಂಡಿ (ರೋಣ).

ಹಾವೇರಿ ಜಿಲ್ಲೆಯ ಎಲ್ಲ ಶಾಸಕರು ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲಿತ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಅವರನ್ನು ಬೆಂಬಲಿಸಿದ್ದು ವಿಶೇಷ. ಗದಗ ಜಿಲ್ಲೆಯಲ್ಲಿ ಸಚಿವ ಸಿ.ಸಿ. ಪಾಟೀಲ (ನರಗುಂದ), ಶ್ರೀಶೈಲಪ್ಪ ಬಿದರೂರ (ಗದಗ), ರಾಮಣ್ಣ ಲಮಾಣಿ (ಶಿರಹಟ್ಟಿ) ಅವರೆಲ್ಲ ಸದಾನಂದಗೌಡ ಅವರನ್ನು ಬೆಂಬಲಿಸಿದರೆ, ಕಳಕಪ್ಪ ಬಂಡಿ ಮಾತ್ರ ಶೆಟ್ಟರ್ ಬಣದ ಪರ ಗುರುತಿಸಿಕೊಂಡರು.

ಧಾರವಾಡ ಜಿಲ್ಲೆಯಲ್ಲಿ ಚಂದ್ರಕಾಂತ ಬೆಲ್ಲದ (ಧಾರವಾಡ ನಗರ) ಹಾಗೂ ಎಸ್.ಐ. ಚಿಕ್ಕನಗೌಡ್ರ (ಕಲಘಟಗಿ) ಶೆಟ್ಟರ್ ಬೆಂಬಲಕ್ಕೆ ನಿಲ್ಲಲಿಲ್ಲ. ಸಚಿವ ಬಸವರಾಜ ಬೊಮ್ಮಾಯಿ (ಶಿಗ್ಗಾಂವ), ಹಾವೇರಿ ಜಿಲ್ಲೆಯಲ್ಲಿ ಯಡಿಯೂರಪ್ಪ ಪರ ಪೂರ್ಣ ಬೆಂಬಲವನ್ನು ತರುವಲ್ಲಿ ಯಶಸ್ವಿಯಾದರು.

ಸಚಿವ ಸಿ.ಎಂ. ಉದಾಸಿ (ಹಾನಗಲ್), ಜಿ.ಶಿವಣ್ಣ (ರಾಣೆಬೆನ್ನೂರ), ಸುರೇಶಗೌಡ (ಬ್ಯಾಡಗಿ), ನೆಹರೂ ಓಲೇಕಾರ (ಹಾವೇರಿ) ಅವರ ಜೊತೆ ಬೊಮ್ಮಾಯಿ ಸಹ ಸೇರಿ ಸದಾನಂದಗೌಡರಿಗೆ ಬೆಂಬಲ ಸೂಚಿಸಿದರು.

ಶೆಟ್ಟರ್ ಹಾಗೂ ಬೊಮ್ಮಾಯಿ ನಡುವಿನ ಭಿನ್ನಮತ ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಬೊಮ್ಮಾಯಿ, ತಮ್ಮ ಎದುರಾಳಿಗಳ ಬಲವನ್ನು ಕುಗ್ಗಿಸಲು ಕೊನೆಯವರೆಗೂ ಪ್ರಯತ್ನ ನಡೆಸಿದ್ದೂ ಈಗ ಬೆಳಕಿಗೆ ಬಂದಿದೆ.

ಲೋಕಾಯುಕ್ತ ವರದಿ ಸಲ್ಲಿಕೆಯಾದ ನಂತರದ ಗಳಿಗೆಯಿಂದ ಬೊಮ್ಮಾಯಿ ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸುತ್ತಲೇ ಬಂದಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಹೋಗುವಾಗಲೂ ಬೊಮ್ಮಾಯಿ ಅವರ ಜೊತೆಗಿದ್ದರು.

ಶೆಟ್ಟರ್ ಅವರ ಬಲವನ್ನು ತಗ್ಗಿಸಲೆಂದೇ ಈ ಭಾಗದಲ್ಲಿ ಪರ್ಯಾಯ ನಾಯಕನನ್ನಾಗಿ ಬೊಮ್ಮಾಯಿ ಅವರನ್ನು ಬೆಳೆಸಲು ಯಡಿಯೂರಪ್ಪ ಯತ್ನ ನಡೆಸಿದ್ದು ಈಗ ಫಲ ಕೊಟ್ಟಿದೆ. ಬೊಮ್ಮಾಯಿ ಶೆಟ್ಟರ್ ಅವರ ಕ್ಷೇತ್ರದಲ್ಲೇ ದೊಡ್ಡ ಹಾನಿ ಮಾಡಿದ್ದಾರೆ. ಶೆಟ್ಟರ್‌ಗೆ ಇನ್ನು ನಾಲ್ಕು ಶಾಸಕ ಬೆಂಬಲ ಸಿಕ್ಕಿದ್ದರೂ ತಮ್ಮ ಜೀವಮಾನದ ಕನಸನ್ನು ಅವರು ನನಸು ಮಾಡಿಕೊಳ್ಳುತ್ತಿದ್ದರು. ಆದರೆ, ಆ ಕನಸಿಗೆ ಯಡಿಯೂರಪ್ಪ-ಬೊಮ್ಮಾಯಿ ಜೋಡಿ ಅಡ್ಡಗಾಲಾಯಿತು.

`ಜಗದೀಶ ಶೆಟ್ಟರ್ ಅವರಿಗೆ ಸುವರ್ಣಾವಕಾಶ ಸಿಕ್ಕಿತ್ತು. ಶೆಟ್ಟರ್‌ಗೆ ಅವರ ಜಾತಿಯ, ಅದರಲ್ಲೂ ತವರು ಜಿಲ್ಲೆಯ ಶಾಸಕರೇ ಕೈಕೊಟ್ಟಿದ್ದರಿಂದ ಸೋಲು ಅನುಭವಿಸಬೇಕಾಯಿತು. ವರಿಷ್ಠರ ಬೆಂಬಲವಿದ್ದರೂ ಶೆಟ್ಟರ್ ಮುಖ್ಯಮಂತ್ರಿ ಆಗುವ ಅವಕಾಶದಿಂದ ವಂಚಿತರಾಗಬೇಕಾಯಿತು. ಶೆಟ್ಟರ್‌ಗೆ ಕೈಕೊಟ್ಟವರಿಗೆ ತಕ್ಷ ಬುದ್ದಿ ಕಲಿಸುತ್ತೇವೆ~ ಎಂದು ಜಿಲ್ಲೆಯ ಬಿಜೆಪಿ ಮುಖಂಡರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

`ಬೆಲ್ಲದ ಹಾಗೂ ಚಿಕ್ಕನಗೌಡ್ರ ಅವರು ಶೆಟ್ಟರ್‌ಗೆ ಬೆಂಬಲ ನೀಡದಿರಲು ಏನು ಕಾರಣ ಎಂಬುದನ್ನು ಜನತೆ ಮುಂದೆ ಬಹಿರಂಗಪಡಿಸಬೇಕು~ ಎಂದು ಅವರು ಆಗ್ರಹಿಸಿದ್ದಾರೆ. `ಬೊಮ್ಮಾಯಿ ಅವರಿಂದ ಯಾವ ಭರವಸೆ ಸಿಕ್ಕಿದೆ ಎಂಬುದನ್ನು ತಿಳಿಸಬೇಕು~ ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.