ADVERTISEMENT

ದರ್ಪಣ್ ಜೈನ್ ಇನ್ನು ಸಿಎಂಗೆ ಜಂಟಿ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 10:10 IST
Last Updated 14 ಜುಲೈ 2012, 10:10 IST

ಧಾರವಾಡ: ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ದರ್ಪಣ್ ಜೈನ್ ಅವರನ್ನು ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳಲ್ಲೇ ಬಡ್ತಿ ನೀಡಿ ತಮ್ಮ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.

ಈ ಸಂಬಂಧದ ಆದೇಶ ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ್ದು, ಇದೇ 14ರಂದು ಜೈನ್ ಕರ್ತವ್ಯದಿಂದ ಬಿಡುಗಡೆ ಹೊಂದಲಿದ್ದಾರೆ.

ಎಂಟೆಕ್ ಪದವಿ ಪೂರೈಸಿ ಐಎಎಸ್ ಪಾಸು ಮಾಡಿ, 2001ರಲ್ಲಿ ಯಾದಗಿರಿಯ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ದರ್ಪಣ ಜೈನ್, ಬಳಿಕ ಹಣಕಾಸು ಇಲಾಖೆಯ ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
 
ಧಾರವಾಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಬಳಿಕ 2008ರ ಜೂನ್ 26ರಂದು 41ನೇ ಜಿಲ್ಲಾಧಿಕಾರಿಯಾಗಿ ಧಾರವಾಡ ಜಿಲ್ಲೆಗೆ ನಿಯುಕ್ತರಾಗಿ ಅತ್ಯಂತ ಹೆಚ್ಚು ಅವಧಿಗೆ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದವರು.

ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ಕೆಲಸಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಸಂಜೆ ಮಾತನಾಡಿದ ಜೈನ್, “ನನ್ನ ಅವಧಿಯಲ್ಲಿ ಕೈಗೊಂಡ ಕಾರ್ಯಗಳು ತೃಪ್ತಿ ತಂದಿವೆ.
 
ಉಣಕಲ್, ಕೆಲಗೇರಿ, ಸಾಧನಕೇರಿ ಕೆರೆಗಳ ಅಭಿವೃದ್ಧಿ, ನೃಪತುಂಗ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಿದ್ದು, ಚತುಷ್ಪಥ ರಸ್ತೆ ಕಾಮಗಾರಿ ಕಾರ್ಯಾರಂಭ ಮಾಡಿದ್ದು, ಅದರಗುಂಚಿ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣ, ಜಾನಪದ ಜಗತ್ತು, ಕನ್ನಡ ಭವನ, ಕಲಾಭವನದ ನವೀಕರಣದಂತಹ ಹಲವು ಕಾರ್ಯಗಳು ಪ್ರಗತಿಯಲ್ಲಿವೆ.
 
ಉದ್ಯಮಿಗಳು ಬಂದು ಬಂಡವಾಳ ಹೂಡಲು ಅನುವಾಗುವಂತೆ  ಹೈಕೋರ್ಟ್ ಸಂಚಾರಿ ಪೀಠದ ಬಳಿಯ ಮುಮ್ಮಿಗಟ್ಟಿ ಗ್ರಾಮದ ಸಮೀಪ 1000 ಎಕರೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಕೂಡಿಸುವ ಬೈಪಾಸ್ ರಸ್ತೆ ಕಾಮಗಾರಿಗೂ ನಡೆಯುತ್ತಿದೆ” ಎಂದರು. ನೂತನ ಜಿಲ್ಲಾಧಿಕಾರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.