ADVERTISEMENT

ದೊಡ್ಡಾಸ್ಪತ್ರೆಗಳಿಗೆ ತಲುಪದ `ಫ್ಯಾಕ್ಟರ್'

ಇಂದು ವಿಶ್ವ ಹಿಮೋಫೀಲಿಯಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:45 IST
Last Updated 17 ಏಪ್ರಿಲ್ 2013, 10:45 IST

ಹುಬ್ಬಳ್ಳಿ: ರಕ್ತ ಹೆಪ್ಪುಗಟ್ಟದಿರುವ ಸಮಸ್ಯೆ ಮೂಲಕ ವ್ಯಕ್ತಿಯ ಸಾವಿಗೆ ಕಾರಣವಾಗಬಲ್ಲ ಮಾರಕ ಹಿಮೋಫೀಲಿಯಾ (ಕುಸುಮ ರೋಗ) ರೋಗಕ್ಕೆ ಚಿಕಿತ್ಸೆ ಪಡೆಯಬೇಕಾದರೆ ರಾಜ್ಯದಲ್ಲಿ ಇಂದಿಗೂ ಜನರು ಕೇವಲ ಜಿಲ್ಲಾಸ್ಪತ್ರೆಗಳನ್ನಷ್ಟೇ ಆಶ್ರಯಿಸಬೇಕಾಗಿದೆ!

ಕುಸುಮ ರೋಗದಿಂದ ಬಳಲುವ ವ್ಯಕ್ತಿಯಲ್ಲಿ ಯಾವುದೇ ಕಾರಣಕ್ಕೆ ರಕ್ತಸ್ರಾವ ಶುರುವಾದರೆ ಅದು ನಿಲ್ಲುವುದಿಲ್ಲ. ಯಾಕೆಂದರೆ ಅವರ ರಕ್ತದಲ್ಲಿ ಹೆಪ್ಪುಗಟ್ಟುವ ಅಂಶವಾದ ಫ್ಯಾಕ್ಟರ್-8 ಮತ್ತು 9 ಇರುವುದಿಲ್ಲ. ತಕ್ಷಣ ಆಸ್ಪತ್ರೆ ಸೇರಿದರೆ ರೋಗಿಯ ಜೀವ ಉಳಿಸಬಹುದು. ಆಸ್ಪತ್ರೆಗಳಲ್ಲಿ ಫ್ಯಾಕ್ಟರ್-8 ಮತ್ತು 9 ನೀಡಿ ರಕ್ತ ಹೆಪ್ಪುಗಟ್ಟುವಂತೆ ಮಾಡಲಾಗುತ್ತದೆ.

ರಾಜ್ಯದಲ್ಲಿ 2005ರ ವರೆಗೆ ಈ ರೋಗದ ಬಗ್ಗೆ ಹೆಚ್ಚು ಕಾಳಜಿ ಇರಲಿಲ್ಲ. ಉತ್ತರ ಕರ್ನಾಟಕದ ಕೆಲ ವೈದ್ಯರು ಈ ಕುರಿತು ನಡೆಸಿದ ಚಿಂತನೆಯ ಫಲವಾಗಿ 2005ರಿಂದ ಸರ್ಕಾರ ಪ್ರತಿ ವರ್ಷ ಇಡೀ ರಾಜ್ಯದಲ್ಲಿ ಫ್ಯಾಕ್ಟರ್-8 ಮತ್ತು 9 ಖರೀದಿಗೆ ರೂ ಒಂದು ಕೋಟಿ ಬಿಡುಗಡೆ ಮಾಡುತ್ತಿದೆ. ಆದರೆ ಈ ಮೊತ್ತ ಕೇವಲ ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಬಿಡುಗಡೆಯಾಗುತ್ತದೆ. ಹೀಗಾಗಿ ವೈದ್ಯ ವಿಜ್ಞಾನ ಸಂಸ್ಥೆಗಳಲ್ಲಿ ಫ್ಯಾಕ್ಟರ್-8 ಮತ್ತು 9 ಸಿಗುವುದಿಲ್ಲ. ಸಮಸ್ಯೆ ಕಾಡಿದಾಗ ಸರ್ಕಾರಿ ಆಸ್ಪತ್ರೆಗಳಿಗಿಂತ `ದೊಡ್ಡಾಸ್ಪತ್ರೆ'ಗಳ ಕಡೆಗೆ ಧಾವಿಸುವವರೇ ಹೆಚ್ಚು. ಆದರೆ ಅಲ್ಲಿ ಚಿಕಿತ್ಸೆ ಲಭಿಸಬೇಕಾದರೆ ಸರ್ಕಾರಿ ಆಸ್ಪತ್ರೆಗಳಿಂದ ಔಷಧಿ ತರಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ!

`ನಮ್ಮ ಸಂಸ್ಥೆಗೆ ತಿಂಗಳಲ್ಲಿ ಗರಿಷ್ಠ ಇಬ್ಬರು ಕುಸುಮ ರೋಗದ ಚಿಕಿತ್ಸೆಗಾಗಿ ಬರುತ್ತಾರೆ. ಅವರಿಗೆ ತಕ್ಷಣ ಜಿಲ್ಲಾಸ್ಪತ್ರೆಯಿಂದ `ಫ್ಯಾಕ್ಟರ್' ತರಿಸಿ ನೀಡಲಾಗುತ್ತದೆ. ಹೀಗಾಗಿ ಪ್ರಾಣಾಪಾಯ ಸಂಭವಿಸಿದ ಉದಾಹರಣೆ ಇಲ್ಲ' ಎಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ)ಯ ನಿರ್ದೇಶಕಿ ಡಾ.ವಸಂತಾ ಕಾಮತ್ ಹೇಳಿದರು.

ಭರವಸೆಯಾಗಿ ಉಳಿದ ಸಿಎಂ ಮಾತು: ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿ ಯಾಗಿದ್ದಾಗ ಬೆಂಗಳೂರಿನಲ್ಲಿ ನಡೆದ ಜಾಥಾವೊಂದರಲ್ಲಿ ಕುಸುಮ ರೋಗದ ಚಿಕಿತ್ಸೆಗಾಗಿ ಬಿಡುಗಡೆ ಮಾಡುವ ಮೊತ್ತವನ್ನು ರೂ ಎರಡು ಕೋಟಿಗೆ ಏರಿಸುವ ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಈಡೇರಲಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಹಿಮೋಫೀಲಿಯಾ ಸಂಘದ ಗೌರವ ಅಧ್ಯಕ್ಷ ಡಾ.ವಿ.ಡಿ.ಕರ್ಪೂರಮಠ `ಪ್ರಜಾವಾಣಿ'ಗೆ ತಿಳಿಸಿದರು.

`ಹಿಮೋಫೀಲಿಯಾ ರೋಗಿ ಒಂದು ಬಾರಿ ಚಿಕಿತ್ಸೆ ಪಡೆಯಬೇಕಾದರೆ ರೂ 20ರಿಂದ 30 ಸಾವಿರದ ವರೆಗೆ ವೆಚ್ಚವಾಗುತ್ತದೆ. ಈಗ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಉಚಿತ ಚಿಕಿತ್ಸೆ ಸಿಗುತ್ತದೆ. ಉಳಿದವರಿಗೆ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸಮಸ್ಯೆ ಕಾಡಿದರೆ ಚಿಕಿತ್ಸೆ ಪಡೆಯುವುದು ಭಾರಿ ಕಷ್ಟ. ಹೀಗಾಗಿ ಎಲ್ಲರಿಗೂ ಉಚಿತ ಚಿಕಿತ್ಸೆ ಲಭಿಸುವಂತಾಗಬೇಕು, ಈ ರೋಗವನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಸೇರಿಸಬೇಕು. ಈ ಹಿನ್ನೆಲೆಯಲ್ಲಿ ಸಂಘ ಹೋರಾಟ ನಡೆಸುತ್ತಿದೆ' ಎಂದು ಡಾ.ಕರ್ಪೂರಮಠ ತಿಳಿಸಿದರು.

ಏನಿದು ಕುಸುಮ ರೋಗ?
ಇದೊಂದು ಅನುವಂಶೀಯ ರೋಗ. ವಂಶವಾಹಿನಿ (ಜೀನ್) ತೊಂದರೆಯೇ ಇದಕ್ಕೆ ಕಾರಣ. ರಕ್ತದಲ್ಲಿ ಹೆಪ್ಪುಗಟ್ಟುವ ಅಂಶದ ಕೊರತೆಯಿಂದಾಗಿ ನಿರಂತರ ರಕ್ತಸ್ರಾವವಾಗುತ್ತದೆ. ಭಾರತದಲ್ಲಿ ಸುಮಾರು ಒಂದು ಲಕ್ಷ ಹಾಗೂ ಕರ್ನಾಟಕದಲ್ಲಿ ಸುಮಾರು ಒಂದೂವರೆ ಸಾವಿರ ಮಂದಿ ಕುಸುಮರೋಗಿಗಳಿದ್ದಾರೆ. ಪ್ರಪಂಚದ ಒಟ್ಟು ಕುಸುಮ ರೋಗಿಗಳ ಪೈಕಿ ಶೇಕಡಾ 25 ಮಂದಿ ಭಾರತದಲ್ಲಿ ಇದ್ದಾರೆ ಎಂದು ಕರ್ನಾಟಕ ಹಿಮೋಫೀಲಿಯಾ ಸೊಸೈಟಿಯ ಮಾಹಿತಿ ತಿಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT